ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿನ್ನೆ (ಮೇ 16) ನಡೆದ ಪಂದ್ಯದಲ್ಲಿ ರನ್ ಮಳೆ ಹರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಗುಜರಾತ್ ಟೈಟಾನ್ಸ್ ವಿರುದ್ಧ 29 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಐಪಿಎಲ್ 2026ರ ಪ್ಲೇಆಫ್ ರೇಸ್‌ನಲ್ಲಿ ಮುಂದುವರಿಯಲು ಕೆಕೆಆರ್‌ಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿ 247 ರನ್‌ಗಳ ಬೃಹತ್ ಮೊತ್ತ ಪೇರಿಸಿದ ಕೋಲ್ಕತ್ತಾ, ಆ ಬಳಿಕ ಗುಜರಾತ್ ತಂಡವನ್ನು 218 ರನ್‌ಗಳಿಗೆ ನಿಯಂತ್ರಿಸಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಕೆಕೆಆರ್ ತಂಡದ ಆರಂಭ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ನಾಯಕ ಅಜಿಂಕ್ಯ ರಹಾನೆ ಕೇವಲ 14 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಆ ಬಳಿಕ ಮೈದಾನದಲ್ಲಿ ಫಿನ್ ಅಲೆನ್ ಅಬ್ಬರ ಶುರುವಾಯಿತು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಲೆನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕದ ಹೊಸ್ತಿಲಲ್ಲಿ ಎಡವಿ 35 ಎಸೆತಗಳಲ್ಲಿ 93 ರನ್ ಗಳಿಸಿ ಔಟಾದರಾದರೂ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಜಿಟಿ ಫೀಲ್ಡರ್‌ಗಳು ನೀಡಿದ 2 ಜೀವದಾನಗಳು ಅಲೆನ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ಗೆ ಪ್ರಮುಖ ಕಾರಣವಾಯಿತು.
ಅಲೆನ್ ಔಟಾದ ಬಳಿಕ ಜೊತೆಗೂಡಿದ ಕ್ಯಾಮರೂನ್ ಗ್ರೀನ್ ಹಾಗೂ ಯುವ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಗುಜರಾತ್ ಬೌಲಿಂಗ್ ಪಡೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ ಕೇವಲ 52 ಎಸೆತಗಳಲ್ಲಿ 108 ರನ್‌ಗಳ ಮುರಿಯದ ಶತಕದ ಪಾಲುದಾರಿಕೆಯನ್ನು ನೀಡಿತು. ಜವಾಬ್ದಾರಿಯುತ ಆಟವಾಡಿದ ರಘುವಂಶಿ 44 ಎಸೆತಗಳಲ್ಲಿ 82 ರನ್ ಚಚ್ಚಿದರೆ, ಗ್ರೀನ್ 28 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗುಳಿದರು. ಇದರ ನೆರವಿನಿಂದ ಕೆಕೆಆರ್ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಗುಜರಾತ್ ವಿರುದ್ಧ ಕೋಲ್ಕತ್ತಾ ದಾಖಲಿಸಿದ ಗರಿಷ್ಠ ಮೊತ್ತ ಇದು ಎನ್ನುವುದು ವಿಶೇಷ.
ಬೆಟ್ಟದಂತಹ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಪವರ್‌ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಸಾಲಿಡ್ ಆರಂಭ ನೀಡಿದರು. ಆದರೆ, ಇನ್‌ಫಾರ್ಮ್ ಬ್ಯಾಟರ್ ಸಾಯಿ ಸುದರ್ಶನ್ 23 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತರಾಗಿದ್ದು (Retired Hurt) ಗುಜರಾತ್ ತಂಡಕ್ಕೆ ಭಾರಿ ಪೆಟ್ಟು ನೀಡಿತು. ಸಾಯಿ ಸುದರ್ಶನ್ ಹೊರನಡೆಯುತ್ತಿದ್ದಂತೆ ಗುಜರಾತ್ ತಂಡದ ರನ್ ವೇಗ ದಿಢೀರ್ ಕುಸಿತ ಕಂಡಿತು.
ಪವರ್‌ಪ್ಲೇ ಮುಗಿಯುತ್ತಿದ್ದಂತೆ ಕೆಕೆಆರ್ ಬೌಲರ್‌ಗಳು ರನ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು. ಕರಾರುವಾಕ್ ಲೈನ್ ಅಂಡ್ ಲೆಂಗ್ತ್ ಕಾಯ್ದುಕೊಂಡಿದ್ದರಿಂದ ಗಿಲ್ ಹಾಗೂ ಬಟ್ಲರ್‌ಗೆ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕ ಶುಭಮನ್ ಗಿಲ್ 49 ಎಸೆತಗಳಲ್ಲಿ 58 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸಲು ಪ್ರಯತ್ನಿಸಿದರು. ಇವರಿಗೆ ಸಾಥ್ ನೀಡಿದ ಜೋಸ್ ಬಟ್ಲರ್ ಕೂಡ 57 ರನ್ ಗಳಿಸಿದರಾದರೂ, ಅವರ ಇನ್ನಿಂಗ್ಸ್‌ನಲ್ಲಿ ಆ ಲಯ ಕಂಡು ಬರಲಿಲ್ಲ. ಇದು ಇತರೆ ಬ್ಯಾಟರ್‌ಗಳ ಮೇಲೆ ಹೆಚ್ಚಿನ ಒತ್ತಡ ಹೇರಿತು.
ಪಂದ್ಯದ ಅಸಲಿ ತಿರುವು ಸಿಕ್ಕಿದ್ದೇ 17ನೇ ಓವರ್‌ನಲ್ಲಿ. ಭರ್ಜರಿಯಾಗಿ ಆಡುತ್ತಿದ್ದ ನಾಯಕ ಶುಭಮನ್ ಗಿಲ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಗುಜರಾತ್ ತಂಡದ ಗೆಲುವಿನ ಆಸೆ ಕಮರಿತು. ಗಿಲ್ ಔಟಾದ ಬಳಿಕ ಮತ್ತೆ ಬ್ಯಾಟಿಂಗ್‌ಗೆ ಬಂದ ಸಾಯಿ ಸುದರ್ಶನ್ ಕೊನೆಯವರೆಗೂ ಹೋರಾಟ ನಡೆಸಿ ಅಜೇಯ 53 ರನ್ ಗಳಿಸಿದರಾದರೂ, ರನ್ ರೇಟ್ ಹೆಚ್ಚಿದ್ದರಿಂದ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಕೋಲ್ಕತ್ತಾ ಪರ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೈನ್ ಅತ್ಯಂತ ಮಿತವ್ಯಯಿ ಬೌಲಿಂಗ್ ಪ್ರದರ್ಶಿಸಿದ್ದಲ್ಲದೆ, ಪ್ರಮುಖ 2 ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಬ್ರೇಕ್ ಹಾಕಿದರು. ಈ ಜಯದೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.



