No menu items!
11.5 C
Munich
Thursday, May 21, 2026

ಬೆಂಗಳೂರು ಬೇಡ ಹೈದರಾಬಾದ್ ಸಾಕು ; 38 ಲಕ್ಷ ಆಫರ್ ನ ಎಡಗಾಲಿನಲ್ಲಿ ಒದ್ದ ಟೆಕ್ಕಿ-ಕಾರಣವೇನು ?

Must read

ಇಂದಿನ ದಿನಗಳಲ್ಲಿ ಕಾರ್ಪೊರೇಟ್ ಉದ್ಯೋಗಿಗಳು ಹೆಚ್ಚಿನ ಸಂಬಳಕ್ಕಾಗಿ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ, ಒಂದು ನಗರದಿಂದ ಇನ್ನೊಂದು ನಗರಕ್ಕೆ ಓಡುವುದು ತೀರಾ ಕಾಮನ್. ಹೆಚ್ಚಿನ ಸಂಬಳ ಸಿಗುತ್ತದೆ ಎಂದರೆ ಸಾಕು, ಎಂತಹ ಒತ್ತಡದ ಲೈಫ್‌ಸ್ಟೈಲ್‌ಗಾದರೂ ಹೊಂದಿಕೊಳ್ಳಲು ಯುವ ಪೀಳಿಗೆ ರೆಡಿಯಾಗಿಬಿಡುತ್ತದೆ.

ಆದರೆ, ಹೈದರಾಬಾದ್ ಮೂಲದ ಸಾಫ್ಟ್‌ವೇರ್ ವೃತ್ತಿಪರರೊಬ್ಬರು ಇದಕ್ಕೆ ಕಂಪ್ಲೀಟ್ ಉಲ್ಟಾ ನಿರ್ಧಾರ ತಗೆದುಕೊಂಡು ಈಗ ಇಂಟರ್ನೆಟ್‌ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗುತ್ತಿದ್ದ ಭಾರಿ ಮೊತ್ತದ ಪ್ಯಾಕೇಜ್ ಅನ್ನು ಕೈಬಿಟ್ಟು, ಅವರು ಹೈದರಾಬಾದ್‌ನಲ್ಲಿ ಕಡಿಮೆ ಸಂಬಳದ ಕೆಲಸವನ್ನೇ ಆರಿಸಿಕೊಂಡಿದ್ದಾರೆ.

ಮದನ್ ಮೋಹನ್ ಎಂಬುವವರು ತಮ್ಮ ಈ ಅಪರೂಪದ ವೃತ್ತಿಜೀವನದ ಅನುಭವವನ್ನು ಎಕ್ಸ್ (ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ಐಟಿ ವಲಯ ಸೇರಿದಂತೆ ನೆಟ್ಟಿಗರ ವಲಯದಲ್ಲಿ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಣವೇ ಪ್ರಧಾನವಾಗಿರುವ ಈ ಕಾಲದಲ್ಲಿ ಇಂತಹದೊಂದು ನಿರ್ಧಾರ ಮಾಡಲು ಹೇಗೆ ಸಾಧ್ಯ..? ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಅಸಲಿಗೆ ಮದನ್ ಮೋಹನ್ ಅವರ ಕೈಯಲ್ಲಿ ಎರಡು ಬಲಿಷ್ಠ ಉದ್ಯೋಗದ ಆಫರ್‌ಗಳಿದ್ದವು. ಮೊದಲನೇ ಆಫರ್ ಬೆಂಗಳೂರಿನಲ್ಲಿ ವಾರ್ಷಿಕ 38 ಲಕ್ಷ ರೂಪಾಯಿ ಸಂಬಳದ್ದಾಗಿತ್ತು. ಇನ್ನು ಎರಡನೇ ಆಫರ್ ಹೈದರಾಬಾದ್‌ನಲ್ಲಿ ವಾರ್ಷಿಕ 30 ಲಕ್ಷ ರೂಪಾಯಿ ಸಂಬಳದ್ದಾಗಿತ್ತು. ಸಾಮಾನ್ಯವಾಗಿ ಯಾರೇ ಆದರೂ ವರ್ಷಕ್ಕೆ 8 ಲಕ್ಷ ರೂಪಾಯಿ ಹೆಚ್ಚುವರಿ ಸಂಬಳ ಸಿಗುವ ಬೆಂಗಳೂರಿನ ಕೆಲಸವನ್ನೇ ಕಣ್ಣುಮುಚ್ಚಿ ಆರಿಸಿಕೊಳ್ಳುತ್ತಾರೆ. ಆದರೆ ಮದನ್ ಮೋಹನ್ ಮಾತ್ರ ತಮಗೆ ಸಿಗುತ್ತಿದ್ದ ಬರೋಬ್ಬರಿ 8 ಲಕ್ಷ ರೂಪಾಯಿ ಲಾಭವನ್ನು ಸಾರಾಸಗಟಾಗಿ ತಿರಸ್ಕರಿಸಿ ಹೈದರಾಬಾದ್‌ನಲ್ಲೇ ಉಳಿದುಕೊಂಡರು.

ತಮ್ಮ ಈ ವಿಭಿನ್ನ ನಿರ್ಧಾರವನ್ನು ಮುಕ್ತವಾಗಿ ಸಮರ್ಥಿಸಿಕೊಂಡಿರುವ ಮದನ್, “ನಾನು ಕಳೆದ 15 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಲ್ಲಿನ ಆಹಾರ, ಬೆಂಗಳೂರಿಗೆ ಹೋಲಿಸಿದರೆ ಕಡಿಮೆ ಇರುವ ಜೀವನ ವೆಚ್ಚ, ಟ್ರಾಫಿಕ್ ಕಿರಿಕಿರಿ ಇಲ್ಲದ ಒತ್ತಡ ರಹಿತ ಜೀವನ ಮತ್ತು ಪರಿಚಿತ ಪರಿಸರ ಬಹಳ ಮುಖ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿ ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರಿದ್ದಾರೆ. ಇದು ನನಗೆ ಕೇವಲ ದುಡಿಯುವ ನಗರವಲ್ಲ, ನನ್ನ ಸ್ವಂತ ಮನೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಅವರ ಪ್ರಕಾರ, ಇಂದಿನ ದಿನಗಳಲ್ಲಿ ಜನರು ಕೇವಲ ಕಾಗದದ ಮೇಲಿರುವ ಸಂಬಳದ ಅಂಕಿ-ಅಂಶಗಳನ್ನು ಮಾತ್ರ ನೋಡುತ್ತಾರೆ. ಆದರೆ ದಿನನಿತ್ಯದ ಜೀವನದ ಗುಣಮಟ್ಟ ಮತ್ತು ಮಾನಸಿಕ ನೆಮ್ಮದಿಯನ್ನು ಯಾರೂ ಲೆಕ್ಕ ಹಾಕುತ್ತಿಲ್ಲ. “ಆಫರ್ ಲೆಟರ್‌ನಲ್ಲಿ ದೊಡ್ಡ ಸಂಬಳ ಆಕರ್ಷಕವಾಗಿ ಕಾಣಬಹುದು. ಆದರೆ ಮಾನಸಿಕ ನೆಮ್ಮದಿ ಮತ್ತು ದಿನದ ಕೊನೆಯಲ್ಲಿ ಸಿಗುವ ಸಂತೋಷಕ್ಕೆ ಅದಕ್ಕಿಂತ ಹೆಚ್ಚಿನ ಬೆಲೆಯಿದೆ. ಕೇವಲ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದೊಂದೇ ಯಶಸ್ಸಲ್ಲ, ನಾವು ಆನಂದಿಸುವ ಮತ್ತು ಇಷ್ಟಪಡುವ ಜೀವನವನ್ನು ರೂಪಿಸಿಕೊಳ್ಳುವುದು ನಿಜವಾದ ಯಶಸ್ಸು,” ಎಂಬುದು ಮದನ್ ಅವರ ಅಭಿಪ್ರಾಯ.

ಮದನ್ ಅವರ ಈ ವೈರಲ್ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಬಂದಿದ್ದು, ನೆಟ್ಟಿಗರು ಪರ-ವಿರೋಧದ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. “ಹೈದರಾಬಾದ್ ನಿಜಕ್ಕೂ ಪೀಸ್ ಫುಲ್ ಆಗಿ ವಾಸಿಸಲು ಉತ್ತಮ ನಗರ. ಇಲ್ಲಿನ ಖರ್ಚು ವೆಚ್ಚಗಳು ಬೆಂಗಳೂರಿಗಿಂತ ಸಾಕಷ್ಟು ಕಡಿಮೆ. ನೀವು ತಗೆದುಕೊಂಡ ನಿರ್ಧಾರ ನೂರಕ್ಕೆ ನೂರು ಸರಿ” ಎಂದು ದೊಡ್ಡ ಮಟ್ಟದ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೇ ಹೊತ್ತಿನಲ್ಲಿ, ಇನ್ನು ಕೆಲವು ನೆಟ್ಟಿಗರು ಹಣಕಾಸಿನ ಮ್ಯಾನೇಜ್ಮೆಂಟ್ ಲೆಕ್ಕಾಚಾರ ಹಾಕಿ ಇದು ತಪ್ಪು ನಿರ್ಧಾರ ಎಂದಿದ್ದಾರೆ. ಮೊದಲು ಬೆಂಗಳೂರಿನಲ್ಲಿ 38 ಲಕ್ಷದ ಕೆಲಸಕ್ಕೆ ಸೇರಿ, ಒಂದು ವರ್ಷ ಕಷ್ಟಪಟ್ಟು ಆಮೇಲೆ ಅಲ್ಲಿಂದ ಬೇರೆ ಕಂಪನಿಗೆ ಜಂಪ್ ಮಾಡುವಾಗ ಹೈದರಾಬಾದ್‌ನಲ್ಲೇ 50 ಲಕ್ಷ ಪ್ಯಾಕೇಜ್ ಕೇಳಬಹುದಿತ್ತು. ಆಮೇಲೆ ತವರೂರಿಗೆ ಮರಳಬಹುದಿತ್ತು, ಕೈಯಾರೆ 8 ಲಕ್ಷ ನಷ್ಟ ಮಾಡಿಕೊಂಡಿದ್ದೀರಿ ಎಂದು ಪ್ರಾಕ್ಟಿಕಲ್ ಆಗಿ ಸಲಹೆ ನೀಡಿದ್ದಾರೆ.

ಒಟ್ಟಾರೆಯಾಗಿ ಮದನ್ ಅವರ ಈ ಒಂದೇ ಒಂದು ಪೋಸ್ಟ್, ಇಂದಿನ ಓಟದ ಬದುಕಿನಲ್ಲಿರುವ ಮೆಟ್ರೋ ಸಿಟಿ ಯುವ ಪೀಳಿಗೆಗೆ ‘ಕಣ್ಣು ಕೋರೈಸುವ ಹೆಚ್ಚಿನ ಸಂಬಳ ಬೇಕೋ ಅಥವಾ ನೆಮ್ಮದಿಯ ಜೀವನ ಬೇಕೋ?’ ಎಂಬ ಜಿಜ್ಞಾಸೆಯ ದೊಡ್ಡ ಪ್ರಶ್ನೆಯನ್ನು ತಂದಿಟ್ಟಿದೆ.

- Advertisement -spot_img

More articles

- Advertisement -spot_img

Latest article