No menu items!
18.2 C
Munich
Wednesday, July 22, 2026

ದೆಹಲಿ ರಣರಂಗ, ಅಖಾಡಕ್ಕೆ ಧುಮುಕಿದ ಚಿತ್ರರಂಗ ; ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಬಾಲಿವುಡ್‌ ಕಿಡಿಕಿಡಿ

Must read

ಒಂದೆಡೆ ಮುಂಗಾರು ಸಂಸತ್ ಅಧಿವೇಶನದ ಕಾವು, ಇನ್ನೊಂದೆಡೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ರಣಕಹಳೆ.. ಈ ಎರಡರ ನಡುವೆ ದೇಶದ ರಾಜಧಾನಿ ನವದೆಹಲಿ ಅಕ್ಷರಶಃ ರಣರಂಗವಾಗಿ ಬದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಲು ಸಾಲು ಅಕ್ರಮಗಳು ಹಾಗೂ ಯುವಜನರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆ ದೆಹಲಿಯ ವಾತಾವರಣ ಬದಲಾಯಿಸಿದೆ. ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವಪಡೆ ಒಂದೇ ವೇದಿಕೆಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.

‘ಸಂಸತ್ ಭವನ’ಕ್ಕೆ ಮುತ್ತಿಗೆ: ಶಾಂತಿಯುತ ಮೆರವಣಿಗೆ ಮೇಲೆ ಪೋಲಿಸರ ಭೀಕರ ಲಾಠಿಚಾರ್ಜ್

ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತಿದ ಸಾವಿರಾರು ವಿದ್ಯಾರ್ಥಿಗಳು ಸಂಸತ್ ಭವನದತ್ತ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದರು. ಆದರೆ, ಈ ಯುವಶಕ್ತಿಯ ಹರಿವನ್ನು ತಡೆಯಲು ರಂಗಕ್ಕಿಳಿದ ದೆಹಲಿ ಪೊಲೀಸರು, ಪ್ರತಿಭಟನಾಕಾರರ ಮೇಲೆ ಕರುಣೆಯಿಲ್ಲದೆ ಭೀಕರ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ನಡೆಸಿದ್ದಾರೆ. ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದ ವಿದ್ಯಾರ್ಥಿಗಳ ರಕ್ತ ಹಾಗೂ ಖಾಕಿ ಪಡೆಯ ಈ ದೌರ್ಜನ್ಯದ ದೃಶ್ಯಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ನಡವಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಯುವಪಡೆಯ ಬೆನ್ನಿಗೆ ನಿಂತ ಗಾಯಕ ದಿಲ್ಜಿತ್ ದೋಸಾಂಜ್: ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್

ವಿದ್ಯಾರ್ಥಿಗಳ ಮೇಲೆ ನಡೆದ ಈ ಕ್ರೂರ ಹಲ್ಲೆಯನ್ನು ಕಂಡು ಸುಮ್ಮನಿರಲಾಗದ ಖ್ಯಾತ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಾರವಾಗಿ ಹಾಗೂ ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. “ದೆಹಲಿಯ ಬೀದಿಗಳಲ್ಲಿ ನಮ್ಮ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಮೇಲೆ ನಡೆದಿರುವ ಈ ಘಟನೆ ಅತ್ಯಂತ ದುರದೃಷ್ಟಕರ. ಯುವಜನರನ್ನು ಈ ರೀತಿ ರಸ್ತೆಯಲ್ಲಿ ನಡೆಸಿಕೊಳ್ಳುವುದು ಸರಿಯಲ್ಲ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕುಳಿತು ಅವರ ಕುಂದುಕೊರತೆಗಳನ್ನು ಆಲಿಸಬೇಕು. ನೆನಪಿರಲಿ, ಜನರ ಧ್ವನಿಯೇ ದೇವರ ಧ್ವನಿ ಎಂದು ದಿಲ್ಜಿತ್ ಗರ್ಜಿಸಿದ್ದಾರೆ.

ಪ್ರತಿಭಟನಾ ಅಖಾಡಕ್ಕೆ ಧುಮುಕಿದ ಶಬಾನಾ ಆಜ್ಮಿ-ಪ್ರಕಾಶ್ ರಾಜ್ ,ವಿದ್ಯಾರ್ಥಿಗಳಿಗೆ ಬೆಂಬಲ

ಕೇವಲ ಸೋಶಿಯಲ್ ಮೀಡಿಯಾಗೆ ಮಾತ್ರ ತಮ್ಮ ಬೆಂಬಲವನ್ನು ಸೀಮಿತಗೊಳಿಸದ ಹಿರಿಯ ನಟಿ ಶಬಾನಾ ಆಜ್ಮಿ ಹಾಗೂ ನಟ ಪ್ರಕಾಶ್ ರಾಜ್, ನೇರವಾಗಿ ದೆಹಲಿಯ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ರಸ್ತೆಯಲ್ಲೇ ವಿದ್ಯಾರ್ಥಿಗಳ ಹೆಗಲಿಗೆ ಹೆಗಲು ಕೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ ಶಬಾನಾ ಆಜ್ಮಿ, “ನಾವು ಇಲ್ಲಗೆ ಬಂದಿರುವುದು ಈ ಯುವಕರ ಶಾಂತಿಯುತ ಹೋರಾಟಕ್ಕೆ ಬಲ ನೀಡಲು. ವಿದ್ಯಾರ್ಥಿಗಳ ನ್ಯಾಯಯುತ ಧ್ವನಿಯನ್ನೇ ಹತ್ತಿಕ್ಕಲು ಹೊರಟಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ದುರಂತ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳಿಗೆ ಬೇಕಿರುವುದು ಪ್ರೀತಿ, ಲಾಠಿ ಏಟುಗಳಲ್ಲ: ರಿತೇಶ್ ದೇಶ್‌ಮುಖ್ ಆಕ್ರೋಶ

ಬಾಲಿವುಡ್‌ನ ಪ್ರಮುಖ ಜೋಡಿಯಾದ ರಿತೇಶ್ ದೇಶ್‌ಮುಖ್ ಹಾಗೂ ಜೆನೆಲಿಯಾ ಕೂಡ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಈ ದೌರ್ಜನ್ಯವನ್ನು ಖಂಡಿಸಿರುವ ರಿತೇಶ್, “ಈ ದೇಶದ ಯುವಜನತೆಗೆ ಈಗ ಬೇಕಿರುವುದು ಅವರ ಸಮಸ್ಯೆಯನ್ನು ಕೇಳಿಸಿಕೊಳ್ಳುವ ಪ್ರೀತಿ, ಆಲಿಸುವ ಮನಸ್ಸು ಹಾಗೂ ಭರವಸೆಯೇ ಹೊರತು, ಪೊಲೀಸರ ಈ ಲಾಠಿ ಏಟುಗಳಲ್ಲ. ದೇಶದ ಭವಿಷ್ಯ ರೂಪಿಸುವ ಯುವಜನರು ಯಾವುದೇ ಭಯವಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತಹ ಸುರಕ್ಷಿತ ವಾತಾವರಣ ಇಲ್ಲಿ ನಿರ್ಮಾಣವಾಗಬೇಕು” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಸೋನು ಸೂದ್, ರಿಚಾ ಚಡ್ಡಾ, ಹುಮಾ ಬೆಂಬಲ: ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ

ಬಾಲಿವುಡ್ ನಟ ಸೋನು ಸೂದ್, ರಿಚಾ ಚಡ್ಡಾ ಹಾಗೂ ಹುಮಾ ಖುರೇಷಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಾಲು ಸಾಲು ಪೋಸ್ಟ್‌ಗಳ ಮೂಲಕ ಈ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ನಡೆದಿರುವ ಬಲಪ್ರಯೋಗ ಪ್ರಜಾಪ್ರಭುತ್ವಕ್ಕೆ ಬಂದೊದಗಿದ ಕಪ್ಪು ಚುಕ್ಕೆ ಎಂದಿರುವ ತಾರೆಯರು, ಸರ್ಕಾರದ ಈ ನಡೆಗೆ ದೇಶಾದ್ಯಂತ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ತಾರೆಯರ ಈ ಬೆಂಬಲದಿಂದಾಗಿ ವಿದ್ಯಾರ್ಥಿಗಳ ಹೋರಾಟ ಈಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಂಡ ಸಂಚಲನ ಮೂಡಿಸಿದೆ.

ತಾರೆಯರ ಎಂಟ್ರಿಯಿಂದ ಚಳವಳಿಗೆ ಭಾರಿ ಮೈಲೇಜ್: ಕಂಗಾಲಾದ ದೆಹಲಿ ಸುಲ್ತಾನರು

ಶಿಕ್ಷಣ ಕ್ಷೇತ್ರದ ಅಕ್ರಮಗಳನ್ನು ಬೇರುಸಹಿತ ಕಿತ್ತೊಗೆಯಲು ವಿದ್ಯಾರ್ಥಿಗಳು ಆರಂಭಿಸಿದ್ದ ಈ ಹೋರಾಟಕ್ಕೆ, ಈಗ ದೇಶದ ಸಾಂಸ್ಕೃತಿಕ ಹಾಗೂ ಸಿನಿರಂಗದ ದಿಗ್ಗಜರೇ ಸಾಥ್ ನೀಡಿರುವುದು ಚಳವಳಿಗೆ ಅಪ್ರಮೇಯ ಶಕ್ತಿಯನ್ನು ತಂದುಕೊಟ್ಟಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ನಕ್ಷತ್ರಗಳ ಮೆರುಗು ಹಾಗೂ ಸಾರ್ವಜನಿಕರ ಅಪಾರ ಬೆಂಬಲ ಸಿಗುತ್ತಿದ್ದಂತೆ, ದೆಹಲಿ ರಾಜಕೀಯ ಗಲ್ಲಿಗಳಲ್ಲಿ ನಡುಕ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಈ ಯುವಶಕ್ತಿಯ ಆಕ್ರೋಶ ಕೇಂದ್ರ ಸರ್ಕಾರಕ್ಕೆ ಯಾವ ಮಟ್ಟದ ಕಂಟಕವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

- Advertisement -spot_img

More articles

- Advertisement -spot_img

Latest article