ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಇಷ್ಟು ದಿನ ಯಾರೂ ಊಹಿಸದ ಭಾರಿ ದೊಡ್ಡ ಇತಿಹಾಸವೊಂದು ಸೃಷ್ಟಿಯಾಗಿದೆ. ದ್ರಾವಿಡ ಕೋಟೆಯ ಪ್ರಬಲ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ನಡುಕ ಹುಟ್ಟಿಸಿ ಇತ್ತೀಚೆಗಷ್ಟೇ ಅಧಿಕಾರ ಹಿಡಿದಿದ್ದ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಈಗ ಮತ್ತೊಂದು ರಾಜಕೀಯ ಹೆಜ್ಜೆ ಇಟ್ಟಿದೆ. ಬರೋಬ್ಬರಿ 59 ವರ್ಷಗಳ ಸುದೀರ್ಘ ವನವಾಸದ ನಂತರ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ತಮಿಳುನಾಡು ಸಚಿವ ಸಂಪುಟವನ್ನು ಅಧಿಕೃತವಾಗಿ ಮರುಪ್ರವೇಶಿಸುತ್ತಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೈಜೋಡಿಸಿದ್ದು, ಇದರ ಭಾಗವಾಗಿ ಇಂದೇ (ಮೇ 21) ಕಾಂಗ್ರೆಸ್‌ನ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಐತಿಹಾಸಿಕ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕಳೆದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ದಳಪತಿ ವಿಜಯ್ ಅವರ ಟಿವಿಕೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಭರ್ಜರಿ ಆಫರ್ ನೀಡಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಗೆದ್ದುಕೊಂಡಿತ್ತಾದರೂ, ಫಲಿತಾಂಶ ಬಂದ ತಕ್ಷಣವೇ ಹಳೇ ಮಿತ್ರಪಕ್ಷವಾದ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಗುಡ್‌ಬೈ ಹೇಳಿ ಹೊರಬಂದಿತ್ತು. ಮೊದಲ ಪ್ರಯತ್ನದಲ್ಲೇ ತಮಿಳುನಾಡು ಗದ್ದುಗೆ ಹಿಡಿದು ದಾಖಲೆ ಬರೆದಿದ್ದ ನಟ ವಿಜಯ್ ಅವರ ಸರ್ಕಾರಕ್ಕೆ ಬೆಂಬಲ ಘೋಷಿಸಿ ಸಂಪುಟ ಸೇರಲು ಪ್ಲಾನ್ ಮಾಡಿತ್ತು.
ಇದೀಗ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಇಬ್ಬರೂ ಶಾಸಕರು ಭಾರೀ ಫೈಟ್ ನಡೆಸಿ ಗೆದ್ದವರಾಗಿದ್ದಾರೆ. ಕಿಳ್ಳಿಯೂರು ವಿಧಾನಸಭಾ ಕ್ಷೇತ್ರದಿಂದ ಕೇವಲ 1,311 ಮತಗಳ ಅಲ್ಪ ಅಂತರದಿಂದ ಟಿವಿ ಕೆ ಅಭ್ಯರ್ಥಿಯನ್ನೇ ಸೋಲಿಸಿದ್ದ ರಾಜೇಶ್ ಕುಮಾರ್ ಹಾಗೂ ಮೇಲೂರು ಕ್ಷೇತ್ರದಿಂದ 2,744 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದ ಪಿ. ವಿಶ್ವನಾಥನ್ ಅವರಿಗೆ ದಳಪತಿ ವಿಜಯ್ ಸಂಪುಟದಲ್ಲಿ ಹೈಪ್ರೊಫೈಲ್ ಸಚಿವ ಸ್ಥಾನ ಸಿಕ್ಕಿದೆ. ಈ ಇಬ್ಬರು ನಾಯಕರು ರಾಹುಲ್ ಗಾಂಧಿ ಅವರ ಜನಪರ ಆಡಳಿತದ ದಿಟ್ಟ ದೃಷ್ಟಿಕೋನವನ್ನು ತಮಿಳುನಾಡಿನಲ್ಲಿ ಮುನ್ನಡೆಸಲಿದ್ದಾರೆ ಎಂದು ಹೈಕಮಾಂಡ್ ವಿಶ್ವಾಸ ವ್ಯಕ್ತಪಡಿಸಿದೆ.
ಅಸಲಿಗೆ, ಚುನಾವಣೆ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಮೈತ್ರಿಕೂಟದ ಪಾಲುದಾರರಾದ ಕಾಂಗ್ರೆಸ್, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳಿಗೆ ಸರ್ಕಾರದಲ್ಲಿ ಸಮಾನ ಪಾಲು ನೀಡುವುದಾಗಿ ಬಹಿರಂಗ ಆಹ್ವಾನ ನೀಡಿದ್ದರು. ಕೊಟ್ಟ ಮಾತಿನಂತೆ ಮೈತ್ರಿ ಧರ್ಮವನ್ನು ಉಳಿಸಿಕೊಂಡು ಕಾಂಗ್ರೆಸ್‌ಗೆ ಮಂತ್ರಿ ಸ್ಥಾನ ನೀಡಿರುವ ಮುಖ್ಯಮಂತ್ರಿ ವಿಜಯ್ ಅವರ ರಾಜಕೀಯ ನಡೆಗೆ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲದಿಂದ ಬರೀ ಪ್ರಾದೇಶಿಕ ಪಕ್ಷಗಳೇ ಕಟ್ಟಿಹಾಕಿದ್ದ ತಮಿಳುನಾಡು ರಾಜಕೀಯದ ದ್ರಾವಿಡ ಮಣ್ಣಿನಲ್ಲಿ, ಕಾಂಗ್ರೆಸ್ ಮತ್ತೆ ಸಚಿವ ಸ್ಥಾನದ ಗದ್ದುಗೆ ಏರಿರುವುದು ಆ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ಅಕ್ಷರಶಃ ಹಬ್ಬದ ವಾತಾವರಣ ತಂದಿದೆ. ಖಾದಿ ಧರಿಸಿದ ನಮ್ಮ ಇಬ್ಬರು ನಾಯಕರು ತಮಿಳುನಾಡು ಸಂಪುಟ ಸೇರುತ್ತಿರುವುದು ಅತ್ಯಂತ ಭಾವುಕ ಮತ್ತು ಹೆಮ್ಮೆಯ ಕ್ಷಣ ಎಂದು ತಮಿಳುನಾಡು ಕಾಂಗ್ರೆಸ್ ನಾಯಕರು ಸಂಭ್ರಮಿಸುತ್ತಿದ್ದಾರೆ.
ಒಟ್ಟಾರೆಯಾಗಿ, ದಳಪತಿ ವಿಜಯ್ ಸಿಎಂ ಆದ ಮೇಲೆ ತಮಿಳುನಾಡು ರಾಜಕೀಯದ ಚಿತ್ರಣ ಕಂಪ್ಲೀಟ್ ಬದಲಾಗಿ ಹೋಗಿದೆ. 59 ವರ್ಷಗಳ ಕಾಲ ಅಧಿಕಾರದಿಂದ ಮಾರುದ್ದ ದೂರವಿದ್ದ ಕೈ ಪಾಳಯಕ್ಕೆ ಈಗ ಹೊಸ ಆನೆಬಲ ಬಂದಂತಾಗಿದೆ. ಸಿನಿಮಾ ಸ್ಟೈಲ್‌ನಲ್ಲೇ ರಾಜಕೀಯದಲ್ಲೂ ಭರ್ಜರಿ ಟ್ವಿಸ್ಟ್ ಕೊಡ್ತಿರೋ ವಿಜಯ್ ಅವರ ಈ ಸಮ್ಮಿಶ್ರ ಸರ್ಕಾರ ಮುಂಬರುವ ದಿನಗಳಲ್ಲಿ ತಮಿಳುನಾಡನ್ನು ಯಾವ ಕಡೆ ಮುನ್ನಡೆಸುತ್ತದೆ ಎಂಬುದನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ.



