ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಮಂದಿ ಜೀವಂತವಾಗಿ ದಹನಗೊಂಡಿದ್ದು, ಈ ಘಟನೆ ಕೇವಲ ಅಪಘಾತವಲ್ಲ, ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆಯಿಂದ ನಡೆದ ಗಂಭೀರ ಅಪರಾಧ ಪ್ರಕರಣ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಹೌಜ್ ರಾಣಿ ಪ್ರದೇಶದ ಐದು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಬಹುತೇಕರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಮಧ್ಯ ಏಷ್ಯಾ ಮತ್ತು ಆಫ್ರಿಕಾ ಮೂಲದ ವಿದೇಶಿ ಪ್ರಜೆಗಳಾಗಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ 8:50ರ ಸುಮಾರಿಗೆ ಕಟ್ಟಡದ ಬೇಸ್‌ಮೆಂಟ್‌ನಲ್ಲಿರುವ ”ಲೆಮನ್ ಗ್ರೀನ್” ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೆಸ್ಟೋರೆಂಟ್‌ನ ಶೆಫ್ ಕೇಶರ್ ಸಿಂಗ್ ಎಂಬುವವರು ಬೆಳಿಗ್ಗೆ ಎಲೆಕ್ಟ್ರಿಕ್ ಸ್ಟವ್ ಆನ್ ಮಾಡಲು ಮುಂದಾದಾಗ ದಿಢೀರನೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಮುಂಜಾನೆ ಸಮಯವಾಗಿದ್ದರಿಂದ ಕಟ್ಟಡದ ಮೇಲಿನ ಅಂತಸ್ತುಗಳಲ್ಲಿದ್ದ ಮಿಕಾಸಾ ಇನ್ ಹಾಗೂ ಫ್ಲರಿಶ್ ಸ್ಟೇ ಹೋಟೆಲ್‌ಗಳಲ್ಲಿದ್ದ 40ಕ್ಕೂ ಹೆಚ್ಚು ಅತಿಥಿಗಳು ಗಾಢ ನಿದ್ರೆಯಲ್ಲಿದ್ದರು. ಕಣ್ಣುಬಿಡುವಷ್ಟರಲ್ಲೇ ಇಡೀ ಕಟ್ಟಡಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ಯಾರಿಗೂ ತಪ್ಪಿಸಿಕೊಳ್ಳಲು ದಾರಿ ಸಿಗದೆ ಉಸಿರುಗಟ್ಟಿ ತಲ್ಲಣದ ವಾತಾವರಣ ಸೃಷ್ಟಿಯಾಗಿದೆ. ಪ್ರಾಣ ಉಳಿಸಿಕೊಳ್ಳಲು ಕೆಲವರು ಕಿಟಕಿಗಳಿಂದ ಕೆಳಗೆ ಜಿಗಿದಿದ್ದು, ಇಡೀ ಆವರಣ ರಕ್ತಸಿಕ್ತವಾಗಿದೆ.
ಅಕ್ರಮ ಕಟ್ಟಡ ನಿರ್ಮಾಣ ಮತ್ತು ಮಾಲೀಕರ ನಿರ್ಲಕ್ಷ್ಯ:
ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್ ಮಾಲೀಕರ ನಿರ್ಲಕ್ಷ್ಯವೇ ಈ 21 ಜನರ ಸಾವಿಗೆ ನೇರ ಕಾರಣ ಎಂಬುದು ಸಾಬೀತಾಗಿದೆ. ಸ್ಥಳೀಯ ಸಂಸ್ಥೆಗಳ ನಿಯಮಾವಳಿಗಳ ಪ್ರಕಾರ, ಈ ಐದು ಅಂತಸ್ತಿನ ಕಟ್ಟಡದಲ್ಲಿ ಕೇವಲ ಆರು ಕೊಠಡಿಗಳನ್ನು ನಡೆಸಲು ಮಾತ್ರ ಅಧಿಕೃತ ಅನುಮತಿ ನೀಡಲಾಗಿತ್ತು. ಆದರೆ, ಹೋಟೆಲ್ ಆಡಳಿತ ಮಂಡಳಿಯು ಹೆಚ್ಚಿನ ಲಾಭದ ಆಸೆಗೆ ಬಿದ್ದು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಅಕ್ರಮವಾಗಿ ಬರೋಬ್ಬರಿ 25 ಕೊಠಡಿಗಳನ್ನು ನಿರ್ಮಿಸಿ ವ್ಯವಹಾರ ನಡೆಸುತ್ತಿತ್ತು.
ಅತ್ಯಂತ ಗಂಭೀರವಾದ ಸಂಗತಿಯೆಂದರೆ, ಇಡೀ ಐದು ಅಂತಸ್ತಿನ ಕಟ್ಟಡದಲ್ಲಿ ತುರ್ತು ಸಂದರ್ಭದಲ್ಲಿ ಹೊರಹೋಗಲು ಯಾವುದೇ ತುರ್ತು ನಿರ್ಗಮನದ (Emergency Exit) ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಅತಿಥಿಗಳು ಕಿರಿದಾದ ಮುಖ್ಯ ಮೆಟ್ಟಿಲುಗಳ ಮೂಲಕವೇ ಕೆಳಗೆ ಇಳಿಯಬೇಕಾದ ಅನಿವಾರ್ಯತೆ ಇತ್ತು. ಆದರೆ ಅಷ್ಟರಲ್ಲೇ ಮೆಟ್ಟಿಲುಗಳ ಮಾರ್ಗ ಪೂರ್ಣವಾಗಿ ಹೊಗೆ ಮತ್ತು ಜ್ವಾಲೆಯಿಂದ ಮುಚ್ಚಿಹೋಗಿದ್ದರಿಂದಲೇ ಅಮಾಯಕರು ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾಯಿತು.
ಮಾಹಿತಿ ಸಿಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಟರ್ ಇಂಜಿನ್‌ಗಳು, ವಾಟರ್ ಬೌಸರ್‌ಗಳು ಹಾಗೂ ತ್ವರಿತ ಸ್ಪಂದನಾ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಕಠಿಣ ಕಾರ್ಯಾಚರಣೆ ನಡೆಸಿದ್ದಾರೆ. ದಟ್ಟ ಹೊಗೆ ತುಂಬಿದ್ದ ನೆಲಮಾಳಿಗೆಗೆ ಪ್ರವೇಶಿಸಿದ ರಕ್ಷಣಾ ತಂಡವು ಒಳಗೆ ಸಿಲುಕಿದ್ದ ಮೂವರನ್ನು ಸುರಕ್ಷಿತವಾಗಿ ಹೊರತಂದಿದೆ. ಒಟ್ಟಾರೆಯಾಗಿ 35ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ದೆಹಲಿಯ ಮೂರು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸದ್ಯ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.
ಈ ಘೋರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯವು ಮೃತರ ವಾರಸುದಾರರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ.ಗಳ ತುರ್ತು ಪರಿಹಾರ ಘೋಷಿಸಿದೆ.
ಇತ್ತ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಹೋಟೆಲ್ ಮಾಲೀಕರ ಬೇಜವಾಬ್ದಾರಿತನ ಹಾಗೂ ಅಕ್ರಮ ನಿರ್ಮಾಣದ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ತಪ್ಪಿತಸ್ಥರ ಬಂಧನಕ್ಕಾಗಿ ತನಿಖೆ ತೀವ್ರಗೊಳಿಸಿದ್ದಾರೆ.



