No menu items!
16.9 C
Munich
Monday, June 15, 2026

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ: ಜೂನ್ 21ರಿಂದ ಜುಲೈ 10ರವರೆಗೆ ಅವಕಾಶ

Must read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ: ಜೂನ್ 21ರಿಂದ ಜುಲೈ 10ರವರೆಗೆ ಅವಕಾಶ

ಬೆಂಗಳೂರು: ರಾಜ್ಯಾದ್ಯಂತ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆಗಳ ಇ-ಚಲನ್ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇ.50 ರಿಯಾಯಿತಿ ಘೋಷಿಸಿದೆ. ವಾಹನ ಸವಾರರು ಜೂನ್ 21ರಿಂದ ಜುಲೈ 10ರವರೆಗೆ ಈ ವಿಶೇಷ ಸೌಲಭ್ಯದಡಿ ಬಾಕಿ ದಂಡವನ್ನು ಅರ್ಧ ಮೊತ್ತ ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದಾಗಿದೆ.
ರಾಜ್ಯದಲ್ಲಿ ಬಾಕಿ ಇರುವ ದಂಡ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರದ ಹೆಚ್ಚಿನ ವಾಹನ ಸಂಚಾರವಿರುವ ಪ್ರಮುಖ ಪ್ರದೇಶಗಳಲ್ಲಿ ವಿಶೇಷ ದಂಡ ಪಾವತಿ ಕೌಂಟರ್ಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ.
ಜೂನ್ 4ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ, ಕಳೆದ ವರ್ಷಗಳಲ್ಲಿ ಹಲವು ಬಾರಿ ರಿಯಾಯಿತಿ ಅಭಿಯಾನ ನಡೆಸಿದರೂ ರಾಜ್ಯದಲ್ಲಿ ಇನ್ನೂ ದೊಡ್ಡ ಪ್ರಮಾಣದ ದಂಡ ಬಾಕಿ ಉಳಿದಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಸುಮಾರು ₹2,827 ಕೋಟಿ ಮೌಲ್ಯದ ಸಂಚಾರ ದಂಡ ಇನ್ನೂ ವಸೂಲಿಯಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ಶೇ.50 ರಿಯಾಯಿತಿ ನೀಡಲು ತೀರ್ಮಾನಿಸಿದೆ. ಈ ಅವಕಾಶದಡಿ 2026ರ ಮೇ ತಿಂಗಳಿಗಿಂತ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡವನ್ನು ಪಾವತಿಸಬಹುದಾಗಿದೆ. ಜೊತೆಗೆ, ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ಕೆಲವು ಬಾಕಿ ದಂಡಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ.
ಸಂಚಾರ ನಿಯಮ ಪಾಲನೆ ಹಾಗೂ ದಂಡ ವಸೂಲಾತಿ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ರಿಯಾಯಿತಿ ಅವಧಿಯಲ್ಲಿ ವಾಹನ ತಪಾಸಣೆಯನ್ನು ಕೂಡ ತೀವ್ರಗೊಳಿಸಲಾಗುವುದು ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ವೇಳೆ ವಾಹನದ ವಿರುದ್ಧ ಬಾಕಿ ದಂಡ ಇರುವುದನ್ನು ಪತ್ತೆ ಹಚ್ಚಿದರೆ, ಸ್ಥಳದಲ್ಲೇ ದಂಡ ಪಾವತಿಸುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತದೆ. ಇದರಿಂದ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.
ದಂಡದ ವಿವರ ವೀಕ್ಷಣೆ ಹಾಗೂ ಪಾವತಿಸುವ ವಿಧಾನ:
• ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್
• BTP ಅಸ್ತ್ರಂ ಆ್ಯಪ್
• ಹತ್ತಿರದ ಸಂಚಾರ ಪೊಲೀಸ್ ಠಾಣೆ
• ಸಂಚಾರ ನಿರ್ವಹಣಾ ಕೇಂದ್ರ
• ಕರ್ನಾಟಕ ಒನ್ / ಬೆಂಗಳೂರು ಒನ್ ವೆಬ್ಸೈಟ್
ವಾಹನ ಸವಾರರು ಈ ವಿಶೇಷ ಅವಕಾಶವನ್ನು ಬಳಸಿಕೊಂಡು ಬಾಕಿ ಇರುವ ಸಂಚಾರ ದಂಡವನ್ನು ಕಡಿಮೆ ಮೊತ್ತದಲ್ಲಿ ಪಾವತಿಸಿ ಕಾನೂನು ತೊಂದರೆಗಳಿಂದ ಮುಕ್ತರಾಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article