No menu items!
19.6 C
Munich
Thursday, July 23, 2026

ತೆಲುಗು, ಹಿಂದಿ, ಮರಾಠಿಯಲ್ಲಿ ಕನ್ನಡದ ‘ರಾಯರ ದರ್ಶನ’ ಹಾಡಿಗೆ ಭಾರೀ ಬೇಡಿಕೆ ; ಕಮರ್ಷಿಯಲ್‌ ಯುಗದಲ್ಲೊಂದು ಭಕ್ತಿ ಕ್ರಾಂತಿ

Must read

ಯುಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವ್ಯೂವ್ಸ್ ಬೇಕು ಅಂದರೆ ಹಾಡಿನಲ್ಲಿ ಗ್ಲಾಮರ್ ಇರಬೇಕು, ಇಲ್ಲವಾದಲ್ಲಿ ಅಬ್ಬರದ ಸಂಗೀತ ಅಥವಾ ಐಟಂ ಡ್ಯಾನ್ಸ್‌ಗಳೇ ಬೇಕು ಅನ್ನುವ ಭ್ರಮೆಯನ್ನು ”ರಾಯರ ದರ್ಶನ” ಆಲ್ಬಂ ಸಾಂಗ್ ಸಂಪೂರ್ಣವಾಗಿ ಸುಳ್ಳು ಮಾಡಿದೆ. ಕಮರ್ಷಿಯಲ್ ಸಾಂಗ್ಸ್‌ಗಳೇ ತುಂಬಿ ತುಳುಕುತ್ತಿರುವ ಈ ಕಾಲದಲ್ಲಿ, ಕೇವಲ ಶುದ್ಧ ಭಕ್ತಿ ಮತ್ತು ಕಣ್ಮನ ಸೆಳೆಯುವ ವಿಶ್ಯುವಲ್ಸ್‌ನಿಂದಲೇ ಈ ಗೀತೆ ಸೋಶಿಯಲ್ ಮೀಡಿಯಾದಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಆಲ್ಬಂ, ಈಗ ಕನ್ನಡಿಗರಷ್ಟೇ ಅಲ್ಲದೆ ಗಡಿ ದಾಟಿಯೂ ಭಕ್ತರ ಹೃದಯ ಗೆಲ್ಲುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಯುಟ್ಯೂಬ್‌ನಲ್ಲಿ ಈ ಹಾಡು 8 ಲಕ್ಷದ ಗಡಿಯತ್ತ ಮುನ್ನುಗ್ಗುತ್ತಿದೆ.

ಹೌದು, ಎಲ್ಲಾ ಬಿಸಿನೆಸ್ ಲೆಕ್ಕಾಚಾರಗಳನ್ನು ಬದಿಗಿಟ್ಟು, ಸಂಪೂರ್ಣ ದೈವಿಕ ಭಾವನೆಯಿಂದ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಇಡೀ ಡಿಜಿಟಲ್ ಲೋಕದಲ್ಲಿ ಬೃಹತ್ ಸಂಚಲನ ಮೂಡಿಸಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಹಾಗೂ ಮಠದ ಶ್ರದ್ಧಾ ಭಕ್ತಿಯನ್ನು ಅನಾವರಣಗೊಳಿಸಿರುವ ಈ ಗೀತೆ, ಜನರ ಮನಸ್ಸಿಗೆ ನೇರವಾಗಿ ತಲುಪುತ್ತಿದೆ.

ಕಮರ್ಷಿಯಲ್ ಹಾವಳಿಯ ನಡುವೆ ಒಂದು ಅಪರೂಪದ ಪ್ರಯತ್ನ

ಸಿನಿಮಾ ಹಾಗೂ ಆಲ್ಬಂ ಅಂದಕೂಡಲೇ ಹಾಕಿದ ಬಂಡವಾಳದ ಮೇಲೆ ಕೋಟಿ ಕೋಟಿ ಲಾಭ, ಕ್ಯಾಚಿ ಬೀಟ್ಸ್, ಗ್ಲಾಮರ್ ಎಂದೇ ಹಲವರು ಲೆಕ್ಕಾಚಾರ ಹಾಕುತ್ತಾರೆ. ಆದರೆ, ರಘು ಭಟ್ ಅವರ ನಿರ್ದೇಶನ ಹಾಗೂ ಸುಗುಣ ರಘು ಭಟ್ ಅವರ ನಿರ್ಮಾಣದಲ್ಲಿ ರೂಪುಗೊಂಡ ಈ ‘ರಾಯರ ದರ್ಶನ’ ಸಾಂಗ್ ಯಾವುದೇ ಕಮರ್ಷಿಯಲ್ ಆಡಂಬರಗಳಿಲ್ಲದೆ, ರಾಯರ ಮೇಲಿನ ಅಪಾರ ನಂಬಿಕೆಯಿಂದಲೇ ಸೃಷ್ಟಿಯಾಗಿದೆ.

ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಅಬ್ಬಿ ವಿ ಅವರ ಚಿನ್ನದಂತಹ ಕಂಠ ಈ ಹಾಡಿಗೆ ಜೀವ ತುಂಬಿದೆ. ಮಂತ್ರಾಲಯದ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಪೂರ್ಣ ಆಶೀರ್ವಾದದೊಂದಿಗೆ ಮೂಡಿಬಂದಿರುವ ಈ ವಿಡಿಯೋದಲ್ಲಿ, ಮಠದಲ್ಲಿ ನಡೆಯುವ ಧಾರ್ಮಿಕ ಉತ್ಸವ ಮತ್ತು ಪೂಜಾ ಕೈಂಕರ್ಯಗಳನ್ನು ಅಷ್ಟೇ ನೈಜವಾಗಿ ಸೆರೆಹಿಡಿಯಲಾಗಿದೆ. ಇಡೀ ಭಾರತದಲ್ಲೇ ಮಠವೊಂದರ ಸಂಪೂರ್ಣ ವಾತಾವರಣವನ್ನು ಇಷ್ಟು ದಿವ್ಯವಾಗಿ ವಿಶ್ಯುವಲ್ ಆಲ್ಬಂ ರೂಪದಲ್ಲಿ ತಂದಿದ್ದು ಇದೇ ಮೊದಲು ಎನ್ನಬಹುದು.

ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ‘ರಾಯರ ದರ್ಶನ’!

ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ಗಳಲ್ಲಿ ಈ ಹಾಡು ರಿಲೀಸ್ ಆದ ಕ್ಷಣದಿಂದಲೇ ಭಕ್ತರ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. “ಹಾಡು ಕೇಳುತ್ತಿದ್ದರೆ ಮನಸ್ಸಿಗೆ ತಕ್ಷಣ ಶಾಂತಿ ಸಿಗುತ್ತದೆ”, “ಮಂತ್ರಾಲಯಕ್ಕೇ ನೇರವಾಗಿ ಹೋಗಿ ರಾಯರ ದರ್ಶನ ಪಡೆದ ಅನುಭವವಾಯಿತು” ಎಂಬಂತಹ ಸಾವಿರಾರು ಮನದಾಳದ ಮಾತುಗಳು ಕಾಮೆಂಟ್ ಬಾಕ್ಸ್‌ನಲ್ಲಿ ತುಂಬಿ ತುಳುಕುತ್ತಿವೆ.

ಕೇವಲ ಹಿರಿಯರು ಮಾತ್ರವಲ್ಲದೆ, ಇಂದಿನ ಯುವಪೀಳಿಗೆ ಕೂಡ ಈ ಭಕ್ತಿಗೀತೆಗೆ ಫಿದಾ ಆಗಿದ್ದು, ರೀಲ್ಸ್ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ‘ರಾಯರ ದರ್ಶನ’ ಸಾಲುಗಳೇ ವೈರಲ್ ಆಗುತ್ತಿವೆ. ಬರೀ ಭಕ್ತಿ ಮತ್ತು ವಿಶ್ಯುವಲ್ ಕ್ವಾಲಿಟಿಯಿಂದಲೇ ಈ ಹಾಡು ಕೋಟ್ಯಾಂತರ ಹೃದಯಗಳನ್ನು ಗೆಲ್ಲುತ್ತಿದೆ.

ಭಾಷೆಯ ಗಡಿ ದಾಟಿದ ಆಲ್ಬಂ: ತೆಲುಗು, ಹಿಂದಿ, ಮರಾಠಿಯಿಂದ ಬಂತು ಭಾರಿ ಬೇಡಿಕೆ

ವಿಶೇಷವೆಂದರೆ, ಕನ್ನಡದಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಈಗ ನೆರೆರಾಜ್ಯಗಳ ಭಕ್ತರನ್ನೂ ತನ್ನತ್ತ ಸೆಳೆಯುತ್ತಿದೆ. ರಾಘವೇಂದ್ರ ಸ್ವಾಮಿಗಳ ಭಕ್ತರು ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದಲ್ಲೂ ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಹಾಡನ್ನು ನೋಡಿದ ಹೊರರಾಜ್ಯದ ಭಕ್ತರು, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಕಮೆಂಟ್‌ಗಳ ಮೂಲಕ “ಈ ಹಾಡನ್ನು ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳಿಗೂ ಡಬ್ ಮಾಡಿ ” ಎಂದು ಸತತವಾಗಿ ನಿರ್ದೇಶಕ ರಘು ಭಟ್ ಮತ್ತು ನಿರ್ಮಾಪಕಿ ಸುಗುಣ ಅವರಲ್ಲಿ ಮನವಿ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಹಿಟ್ ಸಿನಿಮಾಗಳಿಗೆ ಅಥವಾ ಮಾಸ್ ಆಲ್ಬಂ ಸಾಂಗ್‌ಗಳಿಗೆ ಬೇರೆ ಭಾಷೆಯಿಂದ ರೀಮೇಕ್ ಆಫರ್‌ಗಳು ಬರುವುದುಂಟು. ಆದರೆ, ಜನಸಾಮಾನ್ಯರೇ ಹಾಗೂ ಭಕ್ತರೇ ಸ್ವತಃ ಮುಂದಾಗಿ ಒಂದು ಭಕ್ತಿಪ್ರಧಾನ ಆಲ್ಬಂ ಸಾಂಗ್ ಅನ್ನು ‘ನಮ್ಮ ಭಾಷೆಯಲ್ಲೂ ಮಾಡಿ’ ಎಂದು ಡಿಮ್ಯಾಂಡ್ ಮಾಡುತ್ತಿರುವುದು ಇಂಡಿಯನ್ ಆಲ್ಬಂ ಹಿಸ್ಟರಿಯಲ್ಲೇ ಅತ್ಯಂತ ಅಪರೂಪದ ಸಂಗತಿ ಎಂದರೆ ಅದು ಅತಿಶಯೋಕ್ತಿಯಲ್ಲ.

ಡಬ್ಬಿಂಗ್ ಬಗ್ಗೆ ಚಿತ್ರತಂಡದ ಚಿಂತನೆ

ಹೊರರಾಜ್ಯಗಳ ಭಕ್ತರಿಂದ ಮತ್ತು ಸೋಶಿಯಲ್ ಮೀಡಿಯಾದಿಂದ ಬಂದಿರುವ ಈ ಅನಿರೀಕ್ಷಿತ ಬೇಡಿಕೆಯನ್ನು ಕಂಡು ಚಿತ್ರತಂಡ ಕೂಡ ಅಚ್ಚರಿಗೊಂಡಿದೆ. ”ನ್ಯೂಸೋ ನ್ಯೂಸು” ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮಗೆ ಸಿಕ್ಕ ಅತ್ಯದ್ಭುತ ಪ್ರತಿಕ್ರಿಯೆಗಳ ಕುರಿತು ಮಾತನಾಡಿದ್ದಾರೆ. ”ರಾಯರ ದರ್ಶನ” ಹಾಡು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನರ ಮನ ಮತ್ತು ಮನೆ ತಲುಪಿರುವುದನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತೆ ಎಂದಿದ್ದಾರೆ.

ಈ ಕುರಿತು ”ನ್ಯೂಸೋ ನ್ಯೂಸು” ಪಾಡ್‌ಕಾಸ್ಟ್‌ ನಲ್ಲಿ ಮಾತನಾಡಿರುವ ರಘು ಭಟ್ , “ರಾಯರ ಕೃಪೆ ಇದ್ದರೆ ಎಲ್ಲವೂ ಸಾಧ್ಯ. ನೆರೆಯ ತೆಲುಗು ಮತ್ತು ಮರಾಠಿ ಪ್ರಾಂತ್ಯಗಳಲ್ಲಿ ರಾಯರ ಭಕ್ತರ ಸಂಖ್ಯೆ ಅಪಾರವಾಗಿದೆ. ಹೀಗಾಗಿ ಅಲ್ಲಿನ ಸ್ಥಳೀಯ ಭಾಷಿಕರಿಗೂ ರಾಯರ ಈ ದಿವ್ಯ ದರ್ಶನ ತಲುಪಲಿ ಎಂಬ ಉದ್ದೇಶದಿಂದ ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಹಾಡನ್ನು ತರುವ ಪ್ಲಾನ್ ನಮಗಿದೆ” ಎಂದಿದ್ದಾರೆ.

ಸೇಮ್ ಮ್ಯೂಸಿಕ್ ಹಾಗೂ ವಿಶ್ಯುವಲ್ ಕಾಂಸೆಪ್ಟ್ ಇಟ್ಟುಕೊಂಡು, ಆಯಾ ಭಾಷೆಯ ಸಾಹಿತ್ಯಕ್ಕೆ ತಕ್ಕಂತೆ ಸಂಗೀತವನ್ನು ಮರು-ಸಂಯೋಜನೆ ಮಾಡಿ ಬಿಡುಗಡೆ ಮಾಡಲು ತಂಡ ಸಜ್ಜಾಗುತ್ತಿದೆ. ಇದರಿಂದ ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ಈ ”ರಾಯರ ದರ್ಶನ”, ಶೀಘ್ರದಲ್ಲೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಕ್ತಿಯ ಅಲೆಯೆಬ್ಬಿಸುವುದು ಖಚಿತವಾಗಿದೆ.

ಟ್ರೆಂಡ್‌ಗಳ ನಡುವೆ ಗೆದ್ದುಬೀಗಿದ ನಿಜವಾದ ಭಕ್ತಿ!

ಒಟ್ನಲ್ಲಿ ಹೊಡಿ ಬಡಿ ಕಡಿ ಸಿನಿಮಾಗಳು ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ, ಈ ಕಮರ್ಷಿಯಲ್ ಯುಗದಲ್ಲೂ ಶ್ರದ್ಧೆಯಿಂದ ಪ್ರಯತ್ನ ಮಾಡಿದರೆ ಜನ ಯಾವತ್ತೂ ಕೈಹಿಡಿಯುತ್ತಾರೆ ಎಂಬುದಕ್ಕೆ ”ರಾಯರ ದರ್ಶನ” ಆಲ್ಬಂ ಸಾಂಗ್ ಅತ್ಯುತ್ತಮ ನಿದರ್ಶನ. ಚಿತ್ರರಂಗದಲ್ಲಿ ಅಥವಾ ಸಂಗೀತ ಲೋಕದಲ್ಲಿ ಹಲವಾರು ಕಮರ್ಷಿಯಲ್ ಹಾಡುಗಳು ಬರುತ್ತವೆ, ಹೋಗುತ್ತವೆ. ಟ್ರೆಂಡ್‌ಗಳು ಕೂಡ ಬರುತ್ತವೆ, ಹೋಗುತ್ತವೆ. ಆದರೆ ರಾಯರ ಕೃಪೆಯಿಂದ ಮೂಡಿಬಂದ ಇಂತಹ ಗೀತೆಗಳು ದಶಕಗಳ ಕಾಲ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ”ರಾಯರಿದ್ದಾರೆ” ಎಂಬ ನಂಬಿಕೆಗೆ ಈ ಆಲ್ಬಂಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸೇ ಸಾಕ್ಷಿ.

- Advertisement -spot_img

More articles

- Advertisement -spot_img

Latest article