No menu items!
25.8 C
Munich
Sunday, July 26, 2026

ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ

Must read

ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾದೇಶಿ ದಂಪತಿಯ ಮೇಲೆ ವೈದ್ಯರೊಬ್ಬರು ನಡೆಸಿದ ಸಾರ್ವಜನಿಕ ಹಲ್ಲೆ ಪ್ರಕರಣ ತೀವ್ರ ಸಂಚಲನ ಮೂಡಿಸಿದೆ. ನೀವು ಈ ಹಿಂದೆ ಭಾರತದಿಂದ ಗಡಿಪಾರಾಗಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಆರೋಪಿಸಿ ರಸ್ತೆಯಲ್ಲೇ ದಂಪತಿಯನ್ನು ತಡೆದು ನಿಲ್ಲಿಸಿದ ಡಾಕ್ಟರ್, ಅವರ ಮೇಲೆ ದೌರ್ಜನ್ಯ ಎಸಗಿದ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಯಿ ಕ್ಲಿನಿಕ್ ವೈದ್ಯನ ದರ್ಪ, ಬೆಳ್ಳಂದೂರಿನಲ್ಲಿ ಹೈಡ್ರಾಮಾ

ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಡಾ. ನಾಗೇಂದ್ರಪ್ಪ ಅಲಿಯಾಸ್ ಡಾ. ನಾಗೇಂದ್ರ ಎಂಬಾತನೇ ಈ ದೌರ್ಜನ್ಯ ಎಸಗಿದ ಆರೋಪಿ. ಬುಧವಾರ ಬೆಳಿಗ್ಗೆ ರಸ್ತೆಯಲ್ಲಿ ಸಾಗುತ್ತಿದ್ದ ನಸ್ರೀನಾ (23) ಹಾಗೂ ಆಕೆಯ ಪತಿ, ವೃತ್ತಿಯಲ್ಲಿ ಚಾಲಕನಾಗಿರುವ ಮೊಹಮ್ಮದ್ ಬಿಲಾಲ್ ಅವರನ್ನು ವೈದ್ಯ ನಾಗೇಂದ್ರಪ್ಪ ತಡೆದು ನಿಲ್ಲಿಸಿದ್ದಾನೆ. ರಾಷ್ಟ್ರೀಯತೆ ವಿಷಯ ತೆಗೆದು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾನೆ.

ಮಹಿಳೆ ಎಳೆದಾಡಿ, ಪತಿಗೆ ಕಪಾಳಮೋಕ್ಷ: ರಸ್ತೆಯಲ್ಲೇ ರಕ್ತಸ್ರಾವ

ಬಾಂಗ್ಲಾದೇಶಿಯರು ಎಂದು ಕೂಗಾಡಿದ ವೈದ್ಯ, ಮೊದಲು ನಸ್ರೀನಾ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಬಳಿಕ ಪತಿ ಬಿಲಾಲ್ ಕಡೆ ತಿರುಗಿ ಆತನ ತಲೆ ಮತ್ತು ಬೆನ್ನಿನ ಭಾಗಕ್ಕೆ ಮನಸೋಇಚ್ಛೆ ಹೊಡೆದು ನೆಲಕ್ಕೆ ತಳ್ಳಿ ಒದ್ದಿದ್ದಾನೆ. ಅಷ್ಟೇ ಅಲ್ಲದೆ, ಈ ಘಟನೆ ಬಗ್ಗೆ ಎಲ್ಲಾದರೂ ಪೊಲೀಸ್ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ನಸ್ರೀನಾ ದೂರಿನಲ್ಲಿ ತಿಳಿಸಿದ್ದಾರೆ.

“20 ವರ್ಷದಿಂದ ಇಲ್ಲೇ ಇದ್ದೀನಿ”: ಕನ್ನಡದಲ್ಲೇ ಉತ್ತರಿಸಿದ ಸಂತ್ರಸ್ತ


ಈ ಇಡೀ ಹೈಡ್ರಾಮಾವನ್ನು ವೈದ್ಯ ನಾಗೇಂದ್ರಪ್ಪ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿ, ಪೊಲೀಸರ ಕೈಗೆ ಸಿಕ್ಕಿಬೀಳುವ ಮುನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ವಿಡಿಯೋದಲ್ಲಿ, “ನಿಮ್ಮನ್ನು ಹಿಂದೆ ಗಡಿಪಾರು ಮಾಡಲಾಗಿತ್ತು, ಆದರೂ ಮತ್ತೆ ಬಂದಿದ್ದೀರಾ” ಎಂದು ವೈದ್ಯ ಕೂಗಾಡುತ್ತಿದ್ದರೆ, ಸಂತ್ರಸ್ತ ಬಿಲಾಲ್, “ನಾನು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇನೆ” ಎಂದು ಸ್ಪಷ್ಟ ಕನ್ನಡದಲ್ಲೇ ಉತ್ತರ ನೀಡಿರುವುದು ಸೆರೆಯಾಗಿದೆ. ಆದರೂ ಕೋಪಗೊಂಡ ವೈದ್ಯ ಬಿಲಾಲ್ ಕೆನ್ನೆಗೆ ಬಾರಿಸುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಪೊಲೀಸ್ ಕಂಪ್ಲೇಂಟ್ ಬೆನ್ನಲ್ಲೇ ಆ್ಯಕ್ಷನ್, ವೈದ್ಯ ಅರೆಸ್ಟ್


ಘಟನೆಯಿಂದ ಆಘಾತಕ್ಕೊಳಗಾದ ನಸ್ರೀನಾ ತಕ್ಷಣವೇ ಬೆಳ್ಳಂದೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಲ್ಲೆ, ಮಹಿಳೆಗೆ ಅಪಮಾನ, ಅಕ್ರಮ ತಡೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಡಾ. ನಾಗೇಂದ್ರಪ್ಪನನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತ ವೈದ್ಯನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಆತನಿಗೆ ಜಾಮೀನು ಮಂಜೂರಾಗಿದೆ.

“ಕಾನೂನು ಕೈಗೆ ತಗೋಬಾರದಿತ್ತು”: ಪೊಲೀಸ್ ಅಧಿಕಾರಿಗಳ ಖಡಕ್ ವಾರ್ನಿಂಗ್


ಘಟನೆ ಕುರಿತು ಪ್ರತಿಕ್ರಿಯಿಸಿರುವ ತನಿಖಾಧಿಕಾರಿಗಳು, “ಪ್ರದೇಶದಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದಾರೆಂಬ ಭಾವೋದ್ವೇಗದಿಂದ ವೈದ್ಯ ಈ ರೀತಿ ವರ್ತಿಸಿರುವುದು ಕಂಡುಬಂದಿದೆ. ದಂಪತಿ ಬಾಂಗ್ಲಾದೇಶದವರೇ ಆಗಿದ್ದರೂ ಅವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುವುದು ಅಪರಾಧ. ವೈದ್ಯರಾದವರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬದಲು ನಮಗೆ ಮಾಹಿತಿ ನೀಡಬೇಕಿತ್ತು” ಎಂದು ಹೇಳಿದ್ದಾರೆ.

ದಂಪತಿಯ ಅಸಲಿ ಪೌರತ್ವದ ಬಗ್ಗೆ ಪೊಲೀಸರ ತನಿಖೆ ಚುರುಕು


ಪ್ರಸ್ತುತ ವೈಟ್‌ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ವಾಸಿಸುತ್ತಿರುವ ಈ ದಂಪತಿಯ ಹಿನ್ನೆಲೆ ಮತ್ತು ಇಮಿಗ್ರೇಷನ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದಂಪತಿ ನಿಜಕ್ಕೂ ಬಾಂಗ್ಲಾದೇಶಿ ಮೂಲದವರಾ ಅಥವಾ ಹಲವು ವರ್ಷಗಳಿಂದ ಇಲ್ಲೇ ನೆಲೆಸಿದವರಾ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article