No menu items!
29.1 C
Munich
Tuesday, July 28, 2026

ಅತ್ಯಾಚಾರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿ ನಮ್ಮ ದೇಶದ ಶಿಕ್ಷಣ ಮಂತ್ರಿ ; ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ, ಸಿಡಿದ್ದೆದ್ದ ಪ್ರಹ್ಲಾದ್ ಜೋಶಿ

Must read

ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ತಿನಲ್ಲೇ ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಆರೋಪ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ನೇರ ವಾಗ್ದಾಳಿ ನಡೆಸಿದ ಹಿನ್ನೆಲೆ, ಸಂಸತ್ತಿನ ಕಲಾಪದಲ್ಲಿ ಕಿಚ್ಚು ಹೊತ್ತಿಕೊಂಡಿದೆ.

‘ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಪ್ರಧಾನಿ ಕೊಡ್ತಿರೋ ಮೆಸೇಜ್ ಏನು?

ಲೋಕಸಭೆಯಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಿಯಾಂಕಾ ಗಾಂಧಿ, ಅತ್ಯಾಚಾರಿಗಳನ್ನು ಬೆಂಬಲಿಸಿದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡುವ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದಾರೆ? ಈ ನಿರ್ಧಾರದ ಹಿಂದೆ ಯಾವುದೇ ಗೊಂದಲವಿಲ್ಲ, ಕೇಂದ್ರ ಸರ್ಕಾರದ ಧೋರಣೆ ಸಂಪೂರ್ಣವಾಗಿ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಕಿಡಿಕಾರಿದರು.

‘ಚಾರಿತ್ಯ್ರ ವಧೆ’ : ರೊಚ್ಚಿಗೆದ್ದು ಪ್ರಿಯಾಂಕಾ ತಡೆದ ಕಿರಣ್ ರಿಜಿಜು

ಪ್ರಿಯಾಂಕಾ ಗಾಂಧಿ ಅವರ ಈ ವಾಗ್ದಾಳಿಗೆ ಬಿಜೆಪಿ ಸದಸ್ಯರು ಹಾಗೂ ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕಾ ಹೇಳಿಕೆಯನ್ನು ತಡೆದು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿರುವ ಹೇಳಿಕೆಗಳು ನೇರವಾಗಿ ‘ಚಾರಿತ್ರ್ಯ ವಧೆ’ಗೆ ಸಮನಾಗಿವೆ. ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದರೂ ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಇಂತಹ ಭಾಷೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ತಕ್ಷಣವೇ ಸದನದ ಕ್ಷಮೆಯಾಚಿಸಬೇಕು ಹಾಗೂ ಈ ಆಕ್ಷೇಪಾರ್ಹ ಹೇಳಿಕೆಗಳನ್ನು ಕಲಾಪದ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಆರೋಪಕ್ಕೆ ಸಾಕ್ಷಿ ಕೇಳಿದ ಬಿಜೆಪಿ: ಕಡೆಗೂ ಲೋಕಸಭೆ ದಾಖಲೆಯಿಂದ ಮಾತು ಡಿಲೀಟ್

ಪ್ರಿಯಾಂಕಾ ಗಾಂಧಿ ಮಾಡಿದ ಗಂಭೀರ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ಈ ಕುರಿತು ಈಗಾಗಲೇ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆಎಂದು ಹೇಳಿದರು. ಆದರೆ ಯಾವುದೇ ಅಧಿಕೃತ ದೃಢೀಕರಣವಿಲ್ಲದೇ ವ್ಯಕ್ತಿತ್ವ ಹರಣ ಮಾಡುವಂತಹ ಹೇಳಿಕೆ ನೀಡಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಿಯಾಂಕಾ ಗಾಂಧಿ ಅವರ ಈ ಹೇಳಿಕೆಯನ್ನು ಸಂಸತ್ತಿನ ಕಲಾಪದಿಂದ ತೆಗೆದುಹಾಕಿದರು.

ನನ್ನ ವಿರುದ್ಧ ಸುಳ್ಳು ಆರೋಪ, ಸಂಸತ್ತಿನಿಂದ ಪ್ರಿಯಾಂಕಾರನ್ನು ವಜಾಗೊಳಿಸಿ: ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ

ತಮ್ಮ ವಿರುದ್ಧ ಸಂಸತ್ತಿನಲ್ಲೇ ಕೇಳಿಬಂದ ಆರೋಪಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತನಾಡುವ ಮುನ್ನ ತಮ್ಮ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕನಿಷ್ಠ ಸೌಜನ್ಯ ಇರಬೇಕಿತ್ತು. ಯಾರೋ ಏನೋ ಹೇಳಿದ್ದನ್ನು ಇಟ್ಟುಕೊಂಡು ಸುಳ್ಳು ಮಾಹಿತಿ ಹರಡುವುದು ಸರಿಯಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಹೇಳಿಕೆ ನೀಡಿರುವ ಪ್ರಿಯಾಂಕಾ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು. ಇಂತಹ ಬೇಜವಾಬ್ದಾರಿ ನಡವಳಿಕೆಗಾಗಿ ಅವರನ್ನು ಸಂಸತ್ತಿನಿಂದಲೇ ವಜಾಗೊಳಿಸಬೇಕು ಎಂದು ಜೋಶಿ ಆಗ್ರಹಿಸಿದರು.

ಮಧ್ಯರಾತ್ರಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡೋದ್ರಿಂದ ಏನೂ ಪ್ರಯೋಜನವಿಲ್ಲ: ಮೋದಿಗೆ ಟಾಂಗ್!

ಇಷ್ಟಕ್ಕೇ ಸುಮ್ಮನಾಗದ ಪ್ರಿಯಾಂಕಾ ಗಾಂಧಿ, ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ರೀಲ್ ಕುರಿತು ತೀವ್ರ ವ್ಯಂಗ್ಯವಾಡಿದರು. ವಿದ್ಯಾರ್ಥಿಗಳು ರಸ್ತೆಯಲ್ಲಿದ್ದಾಗ ಮಧ್ಯರಾತ್ರಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಧಾನಿಯವರು ರೀಲ್ಸ್ ಮಾಡುವಾಗ ಕ್ಯಾಮೆರಾ ಆಂಗಲ್ ಬದಲಾಯಿಸುವ ಬದಲು, ತಮ್ಮ ಮನಸ್ಸಿನ ಧೋರಣೆಯನ್ನು ಬದಲಾಯಿಸಿಕೊಳ್ಳಲಿ ಎಂದರು.

ಸಂಸತ್ತಿನಲ್ಲಿ ಮುಂದುವರಿದ ಕಾವೇರಿದ ರಾಜಕೀಯ ಸಮರ

ಶಿಕ್ಷಣ ಸಚಿವರ ನೇಮಕ, ವಿದ್ಯಾರ್ಥಿಗಳ ಹೋರಾಟ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ವಿಚಾರವಾಗಿ ಇಂದು ಲೋಕಸಭೆಯಲ್ಲಿ ನಡೆದ ಈ ಜಟಾಪಟಿ ದೇಶಾದ್ಯಂತ ಸೌಂಡ್ ಮಾಡುತ್ತಿದೆ. ಒಂದೆಡೆ ಕಾಂಗ್ರೆಸ್ ಪ್ರಧಾನಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಮಹಿಳಾ ವಿರೋಧಿ ಆರೋಪ ಹೊರಿಸುತ್ತಿದ್ದರೆ, ಇನ್ನೊಂದೆಡೆ ಆಡಳಿತಾರೂಢ ಬಿಜೆಪಿ ಸಂಸತ್ತಿನ ಘನತೆಗೆ ಕುಂದು ತಂದಿದ್ದಕ್ಕಾಗಿ ಪ್ರಿಯಾಂಕಾ ವಿರುದ್ಧ ಕಠಿಣ ಕ್ರಮಕ್ಕೆ ಪಟ್ಟು ಹಿಡಿದಿದ್ದು, ಈ ಸಂಘರ್ಷ ಮುಂಬರುವ ದಿನಗಳಲ್ಲಿ ಇನ್ನಷ್ಟು ತಾರಕಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ.

- Advertisement -spot_img

More articles

- Advertisement -spot_img

Latest article