ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಪುರುಷರಿಗೂ 15 ದಿನಗಳ ಪಿತೃತ್ವ ರಜೆ ಘೋಷಿಸಿದ ಸಿಎಂ ವಿಜಯ್
ಚೆನ್ನೈ: ತಮಿಳುನಾಡಿನ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಹತ್ವದ ಸೌಲಭ್ಯವೊಂದನ್ನು ಘೋಷಿಸಿದ್ದಾರೆ. ರಾಜ್ಯದ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಪುರುಷ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ಸೌಲಭ್ಯ ಜಾರಿಗೆ ಬಂದಿದೆ.
ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ವಿವಾಹಿತ ಪುರುಷ ಸರ್ಕಾರಿ ನೌಕರರು ಮಗುವಿನ ನಿರೀಕ್ಷಿತ ಜನನ ದಿನಾಂಕಕ್ಕೆ 15 ದಿನಗಳ ಮೊದಲು ಅಥವಾ ಮಗು ಜನಿಸಿದ ಆರು ತಿಂಗಳ ಅವಧಿಯೊಳಗೆ 15 ದಿನಗಳ ರಜೆ ಪಡೆಯಬಹುದು.
ತಾಯಿ ಮತ್ತು ಮಗುವಿನ ಆರೈಕೆಗೆ ತಂದೆಯ ಬೆಂಬಲ
ಮಗುವಿನ ಜನನದ ಸುತ್ತಮುತ್ತಲಿನ ಅವಧಿಯು ತಾಯಿ ಮತ್ತು ನವಜಾತ ಶಿಶುವಿನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಸಂದರ್ಭದಲ್ಲಿ ತಾಯಿಗೆ ದೈಹಿಕ ಹಾಗೂ ಭಾವನಾತ್ಮಕ ಬೆಂಬಲ ನೀಡುವುದು ಮಾತ್ರವಲ್ಲದೆ, ಮಗುವಿನ ಆರೈಕೆಯಲ್ಲಿಯೂ ತಂದೆಯ ಪಾತ್ರ ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಸರ್ಕಾರ ವ್ಯಕ್ತಪಡಿಸಿದೆ.
ಪುರುಷ ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದನೆ
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಪುರುಷ ಸರ್ಕಾರಿ ನೌಕರರಿಗೂ ಪಿತೃತ್ವ ರಜೆ ನೀಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿತ್ತು.
ಪುರುಷ ನೌಕರರ ಮನವಿಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಮಗುವಿನ ಜನನದ ಸಂದರ್ಭದಲ್ಲಿ ತಂದೆಯೂ ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ.



