No menu items!
29.1 C
Munich
Tuesday, July 28, 2026

ಇನ್ಫೋಸಿಸ್‌ಗೆ ₹2 ಕೋಟಿ ದಂಡ ಹಾಕಿದ ಫ್ರಾನ್ಸ್ : ನಾರಾಯಣ ಮೂರ್ತಿಯ ‘70 ಗಂಟೆಗಳ ಕೆಲಸ’ದ ಪಾಲಿಸಿಗೆ ವಿದೇಶದಲ್ಲಿ ಪೆಟ್ಟು

Must read

ಭಾರತದ ಐಟಿ ರಂಗದ ದೈತ್ಯ ಸಂಸ್ಥೆ ಇನ್ಫೋಸಿಸ್‌ಗೆ ವಿದೇಶದಲ್ಲಿ ದೊಡ್ಡ ಆಘಾತವಾಗಿದೆ. ಉದ್ಯೋಗಿಗಳು ಕೆಲಸ ಮಾಡುವ ಸಮಯವನ್ನು ಸರಿಯಾಗಿ ದಾಖಲಿಸದೇ ಸ್ಥಳೀಯ ಕಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಫ್ರಾನ್ಸ್ ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ಸುಮಾರು ₹2 ಕೋಟಿ (1,75,000 ಯುರೋ) ದಂಡ ವಿಧಿಸಿದೆ. ಈ ಕುರಿತು ಫ್ರಾನ್ಸ್‌ನ ಪ್ರಾದೇಶಿಕ ಕಾರ್ಮಿಕ ಪ್ರಾಧಿಕಾರದಿಂದ ನೋಟಿಸ್ ಬಂದಿರುವುದನ್ನು ಇನ್ಫೋಸಿಸ್ ಸ್ವತಃ ಷೇರು ಮಾರುಕಟ್ಟೆಗೆ ನೀಡಿದ ವರದಿಯಲ್ಲಿ ಅಧಿಕೃತವಾಗಿ ಖಚಿತಪಡಿಸಿದೆ.

ಇನ್ಫೋಸಿಸ್‌ ಉದ್ಯೋಗಿಗಳ ಟ್ರ್ಯಾಕಿಂಗ್ ಸಿಸ್ಟಮ್ ಫೇಲ್

ಜುಲೈ 25 ರಂದು ಇನ್ಫೋಸಿಸ್ ಹಂಚಿಕೊಂಡ ವರದಿಯ ಪ್ರಕಾರ, ಕಂಪನಿಯು ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸಲು ಬಳಸುತ್ತಿದ್ದ ಸಿಸ್ಟಮ್, ಫ್ರಾನ್ಸ್‌ನ ಕಾರ್ಮಿಕ ಕಾಯ್ದೆಗೆ ತಕ್ಕಂತೆ ಇರಲಿಲ್ಲ. ನಿರ್ದಿಷ್ಟ ವಿಭಾಗದ ಉದ್ಯೋಗಿಗಳು ಎಷ್ಟು ಗಂಟೆ ಕೆಲಸ ಮಾಡಿದ್ದಾರೆ ಎಂಬುದನ್ನು ಸರಿಯಾಗಿ ಟ್ರ್ಯಾಕ್ ಮಾಡದಿರುವುದು, ಆಡಿಟಿಂಗ್ ಮಾಡಲು ಸೂಕ್ತ ದಾಖಲೆಗಳಿಲ್ಲದಿರುವುದು ಹಾಗೂ ಸಿಸ್ಟಮ್‌ನ ನಂಬಿಕಾರ್ಹತೆಯ ಲೋಪಗಳನ್ನು ಕಾರ್ಮಿಕ ಇಲಾಖೆ ಎತ್ತಿ ತೋರಿಸಿದೆ. ಹೀಗಾಗಿ ಕಂಪನಿಗೆ ಈ ದೊಡ್ಡ ಮೊತ್ತದ ದಂಡದ ಬಿಸಿ ತಟ್ಟಿದೆ.

ಕಂಪನಿ ಆರ್ಥಿಕತೆಗೆ ದೊಡ್ಡ ಧಕ್ಕೆಯಿಲ್ಲ: ಇನ್ಫೋಸಿಸ್ ಸಮಾಜಾಯಿಷಿ

ಫ್ರಾನ್ಸ್ ಕಾರ್ಮಿಕ ಇಲಾಖೆಯಿಂದ ದಂಡ ಬಿದ್ದ ತಕ್ಷಣವೇ ಪ್ರತಿಕ್ರಿಯಿಸಿರುವ ಇನ್ಫೋಸಿಸ್, ಇದರಿಂದ ಕಂಪನಿಯ ಆರ್ಥಿಕ ಸ್ಥಿತಿ, ದಿನನಿತ್ಯದ ಕೆಲಸ ಅಥವಾ ವ್ಯವಹಾರದ ಮೇಲೆ ಯಾವುದೇ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮ ಬೀರಲ್ಲ ಎಂದು ಹೇಳಿಕೊಂಡಿದೆ. ಪ್ರಸ್ತುತ ಅಧಿಕಾರಿಗಳಿಂದ ಬಂದಿರುವ ನೋಟಿಸ್ ಅನ್ನು ಕಂಪನಿಯ ಕಾನೂನು ತಂಡ ಪರಿಶೀಲಿಸುತ್ತಿದ್ದು, ಮುಂದಿನ ಹಂತದಲ್ಲಿ ಯಾವ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುವುದಾಗಿ ತಿಳಿಸಿದೆ.

ವಾರಕ್ಕೆ 35 ಗಂಟೆ ಕೆಲಸ: ಫ್ರಾನ್ಸ್ ಕಾರ್ಮಿಕ ಕಾನೂನು ಹೇಳೋದೇನು..?

ಫ್ರಾನ್ಸ್‌ನಲ್ಲಿ ಉದ್ಯೋಗಿಗಳ ಹಿತರಕ್ಷಣೆಗೆ ಅತ್ಯಂತ ಕಠಿಣ ಕಾನೂನುಗಳಿವೆ. ಫ್ರೆಂಚ್ ನಿಯಮಗಳ ಪ್ರಕಾರ, ಉದ್ಯೋಗಿಗಳು ವಾರಕ್ಕೆ ಕೇವಲ 35 ಗಂಟೆಗಳ ಕಾಲ ಕೆಲಸ ಮಾಡಬೇಕು (ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಇದನ್ನು 48 ಗಂಟೆಗಳವರೆಗೆ ವಿಸ್ತರಿಸಲು ಅವಕಾಶವಿದೆ). ಒಂದು ವೇಳೆ ವಾರಕ್ಕೆ 35 ಗಂಟೆಗಿಂತ ಹೆಚ್ಚು ಕೆಲಸ ಮಾಡಿದರೆ, ಮೊದಲ 8 ಗಂಟೆಗಳ ಓವರ್‌ಟೈಮ್‌ಗೆ ಶೇ. 125 ರಷ್ಟು ಹಾಗೂ ಆ ನಂತರದ ಸಮಯಕ್ಕೆ ಶೇ. 150 ರಷ್ಟು ಹೆಚ್ಚುವರಿ ಸಂಬಳ ನೀಡಬೇಕಾಗುತ್ತದೆ. ಪ್ರತಿಯೊಬ್ಬ ಉದ್ಯೋಗಿಯ ಪ್ರತಿದಿನದ ಕೆಲಸದ ಅವಧಿ ಹಾಗೂ ಕಡ್ಡಾಯ ವಿಶ್ರಾಂತಿಯ ಸಮಯವನ್ನು ಕಂಪನಿಗಳು ಕಟುವಾಗಿ ದಾಖಲಿಸಿಡಲೇಬೇಕು.

70 ಗಂಟೆಗಳ ಥಿಯರಿ: ಸೋಶಿಯಲ್ ಮೀಡಿಯಾದಲ್ಲಿ ಮೂರ್ತಿ ಕಾಲೆಳೆದ ನೆಟ್ಟಿಗರು

ಫ್ರಾನ್ಸ್ ಸರ್ಕಾರದ ಈ ಕ್ರಮದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇನ್ಫೋಸಿಸ್ ಹಾಗೂ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. 2023 ರಲ್ಲಿ ನಾರಾಯಣ ಮೂರ್ತಿಯವರು ದೇಶದ ಅಭಿವೃದ್ಧಿಗಾಗಿ ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ನೀಡಿದ್ದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈಗ ಫ್ರಾನ್ಸ್‌ನಲ್ಲಿ ದಂಡ ಬೀಳುತ್ತಿದ್ದಂತೆಯೇ, ಈಗ ಮೂರ್ತಿಯವರು ಫ್ರಾನ್ಸ್‌ಗೆ ಹೋಗಿ ತಮ್ಮ 70 ಗಂಟೆಗಳ ಕೆಲಸದ ಥಿಯರಿ ಬಗ್ಗೆ ವಿವರಣೆ ಕೊಡ್ತಾರಾ? ಎಂದು ನೆಟ್ಟಿಗರು ‘X’ (ಟ್ವಿಟರ್) ನಲ್ಲಿ ಕಾಲೆಳೆಯುತ್ತಿದ್ದಾರೆ.

ಆಫೀಸ್‌ಗೆ ಬರೋದು ಕಡ್ಡಾಯ ಮಾಡಿದ ಬೆನ್ನಲ್ಲೇ ಬೆನ್ನಿಗೆ ಬಿದ್ದ ದಂಡ

ಇನ್ನೊಂದೆಡೆ, ಭಾರತದಲ್ಲಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಬಂದ್ ಮಾಡಿ, ಆಫೀಸ್‌ಗೆ ಬರುವುದನ್ನು ಕಡ್ಡಾಯಗೊಳಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಈಗಾಗಲೇ ಜಾಬ್ ಲೆವಲ್ 7 ಹಾಗೂ 6A ಬ್ಯಾಂಡ್ ಉದ್ಯೋಗಿಗಳಿಗೆ ವಾರದಲ್ಲಿ 4 ದಿನ ಆಫೀಸ್‌ಗೆ ಬರುವುದು ಕಡ್ಡಾಯವಾಗಿದ್ದು, ತಿಂಗಳಿಗೆ ಕನಿಷ್ಠ 10 ದಿನ ಆಫೀಸ್‌ಗೆ ಬರದವರ ವಿರುದ್ಧ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಒಂದು ಕಡೆ ಭಾರತದಲ್ಲಿ ಆಫೀಸ್ ಹಾಜರಾತಿ ಕಡ್ಡಾಯ ಮಾಡ್ತಿರೋ ಇನ್ಫೋಸಿಸ್‌ಗೆ, ಇನ್ನೊಂದೆಡೆ ವಿದೇಶದಲ್ಲಿ ಟ್ರ್ಯಾಕಿಂಗ್ ಲೋಪಕ್ಕೆ ದಂಡ ಬಿದ್ದಿರುವುದು ಉದ್ಯೋಗಿಗಳ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಫ್ರೆಂಚ್ ಫೈನ್ ನೀಡಿದ ಎಚ್ಚರಿಕೆಯ ಸಂದೇಶ

ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೇನೆಂದರೆ, ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ದಂಡ ಬಿದ್ದಿರುವುದು ಉದ್ಯೋಗಿಗಳು ಎಷ್ಟು ಗಂಟೆ ಹೆಚ್ಚು ಕೆಲಸ ಮಾಡುತ್ತಾರೆ ಎನ್ನುವುದಕ್ಕಿಂತ, ಕಂಪನಿಯು ಅವರ ಕೆಲಸದ ಸಮಯವನ್ನು ಸರಿಯಾಗಿ, ಪಾರದರ್ಶಕವಾಗಿ ಮತ್ತು ಅಲ್ಲಿನ ಕಾನೂನಿಗೆ ತಕ್ಕಂತೆ ದಾಖಲಿಸುತ್ತಿದೆಯೇ ಇಲ್ಲವೇ ಎಂಬುದಕ್ಕೆ. ಪ್ರತಿಯೊಬ್ಬ ಉದ್ಯೋಗಿಯ ಶ್ರಮ ಹಾಗೂ ವಿಶ್ರಾಂತಿಯ ಹಕ್ಕನ್ನು ಗೌರವಿಸುವ ದೇಶಗಳಲ್ಲಿ ಐಟಿ ದೈತ್ಯ ಸಂಸ್ಥೆಗಳು ಹೆಜ್ಜೆ ಇಡುವಾಗ ಎಷ್ಟೊಂದು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

- Advertisement -spot_img

More articles

- Advertisement -spot_img

Latest article