ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಲಿನ ಪ್ರತಿಯೊಂದು ಬೆಳವಣಿಗೆಯೂ ತೀವ್ರ ಕುತೂಹಲ ಮೂಡಿಸುತ್ತಿದೆ. ದರ್ಶನ್ ಅವರ ಕಷ್ಟದ ಸಮಯದಲ್ಲಿ ನೆರಳಿನಂತೆ ಜೊತೆಗಿದ್ದ ಅತ್ಯಾಪ್ತ ನಟ ಧನ್ವೀರ್ ಗೌಡ, ಇತ್ತೀಚಿನ ದಿನಗಳಲ್ಲಿ ದರ್ಶನ್ ಬಳಗದಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿನ್ನೆಲೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಹ ಮಾತುಗಳು ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದ್ದವು. ಈ ಎಲ್ಲಾ ರೂಮರ್‌ಗಳ ನಡುವೆಯೇ ಇಂದು (ಜುಲೈ 28) ನಟ ಧನ್ವೀರ್ ದಿಢೀರನೆ ಪರಪ್ಪನ ಅಗ್ರಹಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಇವರ ಈ ಭೇಟಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಊಹಾಪೋಹಗಳಿಗೆ ಬ್ರೇಕ್
ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕುವಂತೆ ನಟ ಧನ್ವೀರ್ ಗೌಡ ಇಂದು ಒಂಟಿಯಾಗಿಯೇ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಾಗಲೀ ಅಥವಾ ದರ್ಶನ್ ಗ್ಯಾಂಗ್‌ನ ಇತರ ಸದಸ್ಯರಾಗಲೀ ಈ ವೇಳೆ ಜೊತೆಗಿರಲಿಲ್ಲ.
ಅಂತರ ಕಾಯ್ದುಕೊಂಡಿದ್ದ ಧನ್ವೀರ್
ದರ್ಶನ್ ಜೈಲು ಪಾಲಾದ ಆರಂಭದ ದಿನಗಳಲ್ಲಿ ನಟ ಧನ್ವೀರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ವಿಜಯಲಕ್ಷ್ಮಿ ಜೈಲಿಗೆ ಬರಲಿ, ದೇವಸ್ಥಾನಗಳಿಗೆ ಭೇಟಿ ನೀಡಲಿ ಧನ್ವೀರ್ ಅವರ ಜೊತೆಯಲ್ಲೇ ಇರುತ್ತಿದ್ದರು. ಒಂದು ಅರ್ಥದಲ್ಲಿ ವಿಜಯಲಕ್ಷ್ಮಿ ಅವರಿಗೆ ಕಾವಲಾಗಿದ್ದರು ಧನ್ವೀರ್. ಆದರೆ, ಇತ್ತೀಚೆಗೆ ಅದ್ಯಾಕೋ ಏನೋ ಧನ್ವೀರ್ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ವಿಜಯಲಕ್ಷ್ಮಿ ಕೂಡ ಒಂಟಿಯಾಗಿಯೇ ಓಡಾಡಲು ಶುರು ಮಾಡಿದ್ದರು. ಇದು ದರ್ಶನ್ ಕುಟುಂಬ ಮತ್ತು ಧನ್ವೀರ್ ನಡುವೆ ಬಿರುಕು ಮೂಡಿದೆ ಎಂಬ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಹಣಕಾಸಿನ ವ್ಯವಹಾರವೇ ಇಬ್ಬರ ನಡುವಿನ ಮುನಿಸಿಗೆ ಕಾರಣವಾಯ್ತಾ?
ದರ್ಶನ್ ಬಳಗದಲ್ಲೇ ಹರಿದಾಡುತ್ತಿದ್ದ ಗುಸುಗುಸುವಿನ ಪ್ರಕಾರ, ದರ್ಶನ್ ಮತ್ತು ಧನ್ವೀರ್ ನಡುವೆ ಅಂತರ ಹೆಚ್ಚಾಗಲು ಹಣಕಾಸಿನ ವ್ಯವಹಾರವೇ ಮುಖ್ಯ ಕಾರಣ ಎನ್ನಲಾಗುತ್ತಿತ್ತು. ಆದರೆ ಈ ಗಾಳಿ ಸುದ್ದಿಗಳ ಬಗ್ಗೆ ಇಬ್ಬರೂ ಎಲ್ಲೂ ತುಟಿಪಿಟಿಕ್ ಅಂದಿರಲಿಲ್ಲ. ಇಬ್ಬರ ನಡುವಿನ ಈ ನಿಗೂಢ ಮೌನವೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ, ಇಂದಿನ ಇವರ ಈ ಸಡನ್ ಜೈಲು ಭೇಟಿಯಿಂದಾಗಿ ಅಂತೆ-ಕಂತೆಗಳೆಲ್ಲ ದೂರವಾದಂತಾಗಿವೆ.
ಕಷ್ಟದಲ್ಲಿದ್ದಾಗ ಜಾರಿಕೊಂಡವರ ಮಧ್ಯೆ ಧನ್ವೀರ್ ವಿಭಿನ್ನ: ಪ್ರೀತಿ ತೋರಿದ ಆಪ್ತ
ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಜೊತೆ ದಿನವಿಡೀ ಸುತ್ತಾಡುತ್ತಿದ್ದ, ಅವರಿಂದಲೇ ಅದೆಷ್ಟೋ ಲಾಭ ಪಡೆದುಕೊಂಡಿದ್ದ ಹಲವು ‘ಆಪ್ತ’ ನಟರು, ದರ್ಶನ್ ಜೈಲಿಗೆ ಹೋಗುತ್ತಿದ್ದಂತೆಯೇ ಮುಖ ತಿರುಗಿಸಿದ್ದಾರೆ. ಸಂದರ್ಶನಗಳಲ್ಲಿ ದರ್ಶನ್ ಹೆಸರು ಎತ್ತಲೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲ ನಿಯಮಗಳನ್ನು ಬದಿಗೊತ್ತಿ, ರೂಮರ್‌ಗಳ ಮಧ್ಯೆಯೂ ಧನ್ವೀರ್ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಿರುವುದು, ನಮ್ಮ ನಡುವಿನ ಸ್ನೇಹ-ಗೌರವ ಹಾಗೆಯೇ ಇದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಂತಾಗಿದೆ.
ಜೈಲಿನೊಳಗೆ ಚರ್ಚೆಯಾಗಿದ್ದೇನು? ಹೊರಬರದ ರಹಸ್ಯ
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ದರ್ಶನ ಪಡೆದು ಬಂದ ಧನ್ವೀರ್, ದರ್ಶನ್ ಜೊತೆ ನಿಖರವಾಗಿ ಏನು ಚರ್ಚೆ ನಡೆಸಿದರು ಎಂಬುದು ಗೊತ್ತಿಲ್ಲ. ನಿಜ ಹೇಳಬೇಕು ಅಂದರೆ ಈ ವಿಚಾರ ಅವರಿಬ್ಬರ ಹೊರತಾಗಿ ಮತ್ಯಾರಿಗೂ ಗೊತ್ತಿಲ್ಲ. ಜಾಮೀನು ಪ್ರಕ್ರಿಯೆ, ಕಾನೂನು ಹೋರಾಟದ ಮುಂದಿನ ಹಂತಗಳು ಹಾಗೂ ಹೊರಗಿನ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆದಿರಬಹುದು ಎನ್ನಲಾಗಿದೆ. ಜೈಲಿನಿಂದ ಧನ್ವೀರ್ ಒಂಟಿಯಾಗಿ ಹೊರಬರುತ್ತಿದ್ದ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ದರ್ಶನ್ ಫ್ಯಾನ್ಸ್ ನಿರಾಳ
ದರ್ಶನ್ ಹಾಗೂ ಧನ್ವೀರ್ ಮಧ್ಯೆ ಎಲ್ಲವೂ ಮುಗಿಯಿತು, ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದವರಿಗೆ ಈ ಭೇಟಿ ಉತ್ತರ ನೀಡಿದಂತೆ ಇದೆ. ದರ್ಶನ್ ಅವರ ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲಲು ಧನ್ವೀರ್ ಹಿಂದೇಟು ಹಾಕಿಲ್ಲ ಎಂಬುದು ದರ್ಶನ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮತ್ತು ಖುಷಿಯನ್ನು ತಂದಿದೆ. ಮುಂದಿನ ದಿನಗಳಲ್ಲಿ ಈ ಭೇಟಿಯ ಬಗ್ಗೆ ಧನ್ವೀರ್ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.



