ಬೆಂಗಳೂರು: ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ತೀವ್ರಗೊಳ್ಳುತ್ತಿರುವ ನಡುವೆಯೇ, ಆಗಸ್ಟ್ 13ರಂದು ನಡೆಯಲಿರುವ ಅಖಂಡ ಕರ್ನಾಟಕ ಬಂದ್ಗೆ ನಟಿ ರಮ್ಯಾ ಬೆಂಬಲ ಘೋಷಿಸಿದ್ದಾರೆ. ಕಾವೇರಿ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು, ರೈತರ ಹಿತಾಸಕ್ತಿ ವಿಚಾರದಲ್ಲಿ ಸದಾ ಅವರ ಪರ ನಿಲ್ಲುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, “ನಾನು ಮಂಡ್ಯದವಳು. ಕಾವೇರಿ ವಿಚಾರ ಬಂದಾಗ ರೈತರ ಪರವಾಗಿ ನಿಲ್ಲುವುದು ನನ್ನ ಜವಾಬ್ದಾರಿ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ” ಎಂದು ಸ್ಪಷ್ಟಪಡಿಸಿದರು.
ಕಾವೇರಿ ವಿಚಾರದಲ್ಲಿ ಈ ಹಿಂದೆಯೂ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕಾವೇರಿ ನೀರಿನ ವಿವಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದ ಸಂದರ್ಭದಲ್ಲೂ ಹಾಜರಿದ್ದೆ. ರೈತರ ಹಿತದ ಪ್ರಶ್ನೆ ಬಂದಾಗ ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡುತ್ತೇನೆ. ನಾನು ಯಾವಾಗಲೂ ರೈತರ ಪರವಾಗಿಯೇ ಇರುತ್ತೇನೆ ಎಂದು ಅವರು ಹೇಳಿದರು.
ಕಾವೇರಿ ನೀರಿನ ವಿವಾದ ಮತ್ತೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಯ ಕೇಂದ್ರಬಿಂದುವಾಗಿರುವ ಸಂದರ್ಭದಲ್ಲಿ ರಮ್ಯಾ ಅವರ ಈ ಬೆಂಬಲದ ಹೇಳಿಕೆ ಹೋರಾಟಕ್ಕೆ ಹೊಸ ಉತ್ತೇಜನ ನೀಡುವ ಸಾಧ್ಯತೆ ಇದೆ. ಅವರ ಬೆಂಬಲವನ್ನು ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಸ್ವಾಗತಿಸಿದ್ದು, ಬಂದ್ಗೆ ಮತ್ತಷ್ಟು ಬಲ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದೀಗ ಆಗಸ್ಟ್ 13ರಂದು ನಡೆಯಲಿರುವ ಅಖಂಡ ಕರ್ನಾಟಕ ಬಂದ್ನಲ್ಲಿ ನಟಿ ರಮ್ಯಾ ಸ್ವತಃ ಭಾಗವಹಿಸಿ ಬೀದಿಗಿಳಿಯಲಿದ್ದಾರೆಯೇ ಅಥವಾ ನೈತಿಕ ಬೆಂಬಲಕ್ಕೆ ಮಾತ್ರ ಸೀಮಿತವಾಗಲಿದ್ದಾರೆಯೇ ಎಂಬುದರ ಕುರಿತು ಕುತೂಹಲ ಮೂಡಿದೆ.
ಆಗಸ್ಟ್ 13ರ ಕರ್ನಾಟಕ ಬಂದ್ʼಗೆ ನಟಿ ರಮ್ಯಾ ಬೆಂಬಲ: ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಸಾಥ್ ಎಂದ ನಟಿ



