ಜೀವಾವಧಿ ಕೈದಿ ಜೈಲಿನಿಂದ ಹೊರಬಂದಿದ್ದೇಗೆ? 8 ವರ್ಷದ ಬಳಿಕ ಬಯಲಾಯ್ತು ನಕಲಿ ಆದೇಶದ ರಹಸ್ಯ, DIG ಅರೆಸ್ಟ್
ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದ ನಕಲು ಸೃಷ್ಟಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕೈದಿಯೊಬ್ಬನನ್ನು ಬಿಡುಗಡೆ ಮಾಡಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೈದಿ ಶಂಕರ್ನ ಪತ್ನಿಯನ್ನು ಜೈಲು ಅಧಿಕಾರಿಗಳು ಲೈಂಗಿಕವಾಗಿ ಬಳಸಿಕೊಂಡು, ಆಕೆಯ ಬ್ಲ್ಯಾಕ್ಮೇಲ್ಗೆ ಹೆದರಿ ಶಂಕರ್ನನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಲಬುರಗಿ ಉತ್ತರ ವಲಯದ ಕಾರಾಗೃಹ ಇಲಾಖೆಯ ಡಿಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಹಿಂದೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಾಗಿದ್ದ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ವೇಳೆ ಕೈದಿ ಶಂಕರ್ನ ಬಿಡುಗಡೆ ಹಿಂದಿನ ಹಲವು ಅಂಶಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2004ರ ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ
2004ರಲ್ಲಿ ಚಿಕ್ಕಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಹರಣ ಪ್ರಕರಣದಲ್ಲಿ ಶಂಕರ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ರದ್ದುಪಡಿಸುವಂತೆ ಶಂಕರ್ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಮೇಲ್ಮನವಿ ನ್ಯಾಯಾಲಯಗಳು ಖಾಯಂಗೊಳಿಸಿದ್ದವು. ಹೀಗಾಗಿ ಶಂಕರ್ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಗಂಡನನ್ನು ಭೇಟಿಯಾಗಲು ಶಂಕರ್ನ ಪತ್ನಿ ಆಗಾಗ್ಗೆ ಜೈಲಿಗೆ ಬರುತ್ತಿದ್ದರು. ಈ ವೇಳೆ ಜೈಲಿನಲ್ಲಿದ್ದ ಎಸ್ಡಿಎ ಶ್ರೀಕಾಂತ್ ಆಕೆಯ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ನಿನ್ನ ಗಂಡನನ್ನು ಜೈಲಿನಿಂದ ಬಿಡಿಸುವುದಾಗಿ ಭರವಸೆ ನೀಡಿ, ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸೋಮಶೇಖರ್ಗೂ ಪರಿಚಯ ಮಾಡಿಸಿದ ಶ್ರೀಕಾಂತ್?
ತನಿಖೆಯ ಪ್ರಕಾರ, ಶ್ರೀಕಾಂತ್ ನಂತರ ಶಂಕರ್ನ ಪತ್ನಿಯನ್ನು ಅಂದಿನ ಜೈಲು ಮುಖ್ಯ ಅಧೀಕ್ಷಕ ಸೋಮಶೇಖರ್ಗೆ ಪರಿಚಯ ಮಾಡಿಸಿದ್ದ ಎನ್ನಲಾಗಿದೆ. ಬಳಿಕ ಆಕೆಯೊಂದಿಗೆ ಲೈಂಗಿಕವಾಗಿ ನಡೆದುಕೊಂಡಿರುವುದರ ಜೊತೆಗೆ ಹಣದ ವ್ಯವಹಾರವೂ ನಡೆದಿತ್ತು ಎಂಬ ಆರೋಪವಿದೆ.
ಆರೋಪದ ಪ್ರಕಾರ, ಸೋಮಶೇಖರ್ ಹಾಗೂ ಶ್ರೀಕಾಂತ್ ಸೇರಿಕೊಂಡು ಜೈಲಿನ ದಾಖಲೆಗಳಲ್ಲಿ ಬದಲಾವಣೆ ಮಾಡಿ ಶಂಕರ್ನನ್ನು ಹಲವು ಬಾರಿ ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರು. ಸುಮಾರು ಐದಾರು ಬಾರಿ ಶಂಕರ್ ಪೆರೋಲ್ ಮೇಲೆ ಹೊರಬಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್?
ನಂತರದ ದಿನಗಳಲ್ಲಿ ಶಂಕರ್ನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರೆನ್ನಲಾಗಿದೆ. ಈ ವೇಳೆ ಶಂಕರ್ನ ಪತ್ನಿ ಸೋಮಶೇಖರ್ ಹಾಗೂ ಶ್ರೀಕಾಂತ್ ಜೊತೆಗಿನ ಖಾಸಗಿ ಕ್ಷಣಗಳನ್ನು ಅವರ ಗಮನಕ್ಕೆ ಬಾರದಂತೆ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಕೆಲವು ದಿನಗಳ ಬಳಿಕ ಆ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ, ತನ್ನ ಗಂಡನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಆಕೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ತಾನು ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಪೆರೋಲ್ ಬದಲು ಸಂಪೂರ್ಣ ಬಿಡುಗಡೆಗೆ ಪ್ಲಾನ್?
ಈ ಬ್ಲ್ಯಾಕ್ಮೇಲ್ನಿಂದಾಗಿ ಶಂಕರ್ನನ್ನು ಬಿಡುಗಡೆ ಮಾಡಲು ಸೋಮಶೇಖರ್ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಪೆರೋಲ್ ಬದಲಿಗೆ ಸಂಪೂರ್ಣವಾಗಿ ಜೈಲಿನಿಂದಲೇ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಸೋಮಶೇಖರ್ ಸೂಚನೆಯ ಮೇರೆಗೆ ಶ್ರೀಕಾಂತ್ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದಾನೆ ಎನ್ನಲಾಗಿದೆ. 2018ರ ನವೆಂಬರ್ 2ರಂದು ಸುಪ್ರೀಂಕೋರ್ಟ್ ಆದೇಶ ನೀಡಿದಂತೆ ಕಾಣುವ ನಕಲಿ ಆದೇಶವನ್ನು ಸಿದ್ಧಪಡಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನವೆಂಬರ್ 13ರಂದು ಜೈಲಿನಿಂದ ಶಂಕರ್ ಬಿಡುಗಡೆ
ನಕಲಿ ಸುಪ್ರೀಂಕೋರ್ಟ್ ಆದೇಶದ ಆಧಾರದ ಮೇಲೆ 2018ರ ನವೆಂಬರ್ 13ರಂದು ಶಂಕರ್ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಶಂಕರ್ ತನ್ನ ಪತ್ನಿಯೊಂದಿಗೆ ಮೈಸೂರಿಗೆ ತೆರಳಿದ್ದ ಎಂದು ತಿಳಿದುಬಂದಿದೆ.
ಈ ನಡುವೆ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸಿದಾಗ ಶಂಕರ್ನನ್ನು ನಕಲಿ ದಾಖಲೆಗಳ ಮೂಲಕ ಜೈಲಿನಿಂದ ಬಿಡುಗಡೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಡಿಜಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಎಫ್ಐಆರ್
ಪ್ರಕರಣದ ತನಿಖೆಯ ವೇಳೆ ನಕಲಿ ದಾಖಲೆಗಳ ಮೂಲಕ ಕೈದಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ತಕ್ಷಣ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಶಂಕರ್ನ ಪತ್ನಿಯನ್ನು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಇತರೆ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಜಿ ಅಲೋಕ್ ಕುಮಾರ್, ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ಹಿರಿಯ ಜೈಲು ಅಧಿಕಾರಿಗಳಿಗೆ ನಕಲಿ ದಾಖಲೆಗಳನ್ನು ಬಳಸಿ ಪತ್ರ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ಬಾಕಿ ಇತ್ತು. ತಾವು ಅಧಿಕಾರ ವಹಿಸಿಕೊಂಡ ಬಳಿಕ ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.



