ಮಂತ್ರಾಲಯ ರಾಯರ ಮಠಕ್ಕೆ 19 ದಿನದಲ್ಲೇ ಭಕ್ತರಿಂದ ₹2.81 ಕೋಟಿ ಕಾಣಿಕೆ ಸಮರ್ಪಣೆ
ರಾಯಚೂರು: ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧವಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಗಸ್ಟ್ ತಿಂಗಳ 19 ದಿನಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬರೋಬ್ಬರಿ ₹2.81 ಕೋಟಿ ಕಾಣಿಕೆ ಸಂಗ್ರಹವಾಗಿದೆ.ಪ್ರತಿ ತಿಂಗಳಿನಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭಕ್ತರ ದಂಡೇ ಹರಿದುಬಂದಿದ್ದು, ಕೇವಲ 19 ದಿನಗಳಲ್ಲಿ ಒಟ್ಟು ₹2,81,69,135 ಕಾಣಿಕೆ ಸಂಗ್ರಹವಾಗಿದೆ.ಸಂಗ್ರಹವಾದ ಕಾಣಿಕೆಯಲ್ಲಿ ₹2,73,34,635 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ₹8,34,500 ಮೌಲ್ಯದ ನಾಣ್ಯಗಳು ಸೇರಿವೆ. ಇದರ ಜೊತೆಗೆ ಭಕ್ತರು 94 ಗ್ರಾಂ ಚಿನ್ನ ಹಾಗೂ 515 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದಾರೆ.ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಶ್ರೀಮಠದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ನಡೆಸಲಾಯಿತು.ಇನ್ನು ಆಗಸ್ಟ್ 27ರಿಂದ ಏಳು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಮುಕ್ತಾಯಗೊಳಿಸಲಾಗಿದೆ.



