ಹನೂರು ಎನ್ಕೌಂಟರ್ ಪ್ರಕರಣ ಸಿಐಡಿಗೆ: ನಾಲ್ಕೂ FIRಗಳ ತನಿಖೆ ವರ್ಗಾವಣೆ
ಚಾಮರಾಜನಗರ/ಬೆಂಗಳೂರು: ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಲೀಂ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕೂ ಎಫ್ಐಆರ್ಗಳನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ರಾಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ, ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂವರು ಬೇಟೆಗಾರರ ಎನ್ಕೌಂಟರ್ ಪ್ರಕರಣ ಹಾಗೂ ಅರಣ್ಯ ಪ್ರದೇಶದಲ್ಲಿನ ಅರಣ್ಯ ಇಲಾಖೆಗೆ ಸೇರಿದ ವಸ್ತುಗಳಿಗೆ ಹಾನಿ ಮತ್ತು ಶಿಬಿರಗಳ ನಾಶಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಲಿದೆ.
ಇದೇ ವೇಳೆ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ, ಅರಣ್ಯ ಇಲಾಖೆ ಶಿಬಿರಗಳ ನಾಶ ಹಾಗೂ ಹಾನಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನೂ ಸಿಐಡಿಗೆ ವಹಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಶೂಟೌಟ್ನಲ್ಲಿ ಅಂಥೋಣಿಸಾಮಿ, ಜಾನ್ ಪೀಟರ್ ಹಾಗೂ ಡೇವಿಡ್ ಕುಮಾರ್ ಮೃತಪಟ್ಟಿದ್ದರು. ಮೂವರು ಬೇಟೆಯಾಡುವ ಉದ್ದೇಶದಿಂದ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರು ಹಾಗೂ ಈ ಕಾರಣಕ್ಕಾಗಿಯೇ ನಾಡ ಬಂದೂಕುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸಿದ್ದರು.
ಮೂವರ ಮೃತದೇಹಗಳ ವೈದ್ಯಕೀಯ ಪರೀಕ್ಷೆ ವೇಳೆ ಇದಕ್ಕೆ ಪೂರಕವಾಗಿರುವ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಥೋಣಿಸಾಮಿ ಹಾಗೂ ಪೀಟರ್ ಧರಿಸಿದ್ದ ಒಳ ಉಡುಪಿನ ಜೇಬಿನಲ್ಲಿ ನಾಡ ಬಂದೂಕುಗಳಲ್ಲಿ ಬಳಸುವ ತಲಾ ಐದು ಅಲ್ಯೂಮಿನಿಯಂ ಪ್ರೈಮರ್ಗಳು ಪತ್ತೆಯಾಗಿದ್ದವು ಎಂದು ತಿಳಿದುಬಂದಿದೆ.
ನಾಡ ಬಂದೂಕುಗಳಲ್ಲಿ ಗನ್ಪೌಡರ್ ಸ್ಫೋಟಿಸಲು ಅಲ್ಯೂಮಿನಿಯಂ ಕ್ಯಾಪ್ ಅಥವಾ ಪ್ರೈಮರ್ಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್ಕೌಂಟರ್ನಲ್ಲಿ ಮೃತಪಟ್ಟ ಮೂವರ ಮರಣೋತ್ತರ ಪರೀಕ್ಷೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗುಂಡಿನ ದಾಳಿ ಅತ್ಯಂತ ಸಮೀಪದಿಂದ ನಡೆದಿರುವ ಸಾಧ್ಯತೆಯ ಕುರಿತು ಅಂಶಗಳು ಉಲ್ಲೇಖವಾಗಿವೆ ಎಂದು ತಿಳಿದುಬಂದಿದೆ.
ಮೃತರ ಬಟ್ಟೆ ಹಾಗೂ ಚರ್ಮದ ಮೇಲೆ ಗನ್ಪೌಡರ್ ಕಲೆಗಳು, ಹೊಗೆಯ ಕಪ್ಪು ಕಲೆಗಳು ಮತ್ತು ಸುಟ್ಟ ಗಾಯಗಳು ಕಂಡುಬಂದಿವೆ ಎನ್ನಲಾಗಿದೆ. ಈ ಅಂಶಗಳು ಗುಂಡಿನ ದಾಳಿ ಅತ್ಯಂತ ಸಮೀಪದಿಂದ ನಡೆದಿರಬಹುದು ಎಂಬ ವಾದಕ್ಕೆ ಬಲ ನೀಡಿವೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಮೃತರ ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದ ಅನುಮಾನಗಳಿಗೆ ಮರಣೋತ್ತರ ಪರೀಕ್ಷೆಯ ವರದಿ ಮತ್ತಷ್ಟು ಬಲ ನೀಡಿದೆ ಎಂದು ಹೇಳಲಾಗುತ್ತಿದೆ.
ಇದೀಗ ಪ್ರಕರಣದ ನಾಲ್ಕೂ ಎಫ್ಐಆರ್ಗಳ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿರುವುದರಿಂದ, ಗುಂಡಿನ ದಾಳಿ ನಡೆದ ನಿಖರ ಸಂದರ್ಭ, ಫೈರಿಂಗ್ಗೆ ಕಾರಣ, ಅರಣ್ಯ ಸಿಬ್ಬಂದಿಯ ಕ್ರಮ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಸೇರಿದಂತೆ ಹಲವು ಅಂಶಗಳ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ.



