ಬಿಡದಿ ಟೌನ್ಶಿಪ್ ಭೂಸ್ವಾಧೀನ ವಿವಾದ; ರೈತರ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ರೈತರು ನಡೆಸಿದ್ದ ‘ಪೊರಕೆ ಚಳವಳಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಿಡದಿ ಹೋಬಳಿಯ ವಿವಿಧ ಗ್ರಾಮಗಳ ನಿವಾಸಿಗಳಾದ ಹೆಚ್.ಆರ್. ನಾಗರಾಜು, ಹೆಚ್.ಸಿ. ಕೃಷ್ಣಪ್ಪ, ಜಯಮ್ಮ, ಕೆ. ಮೋಹನ್, ವರಲಕ್ಷ್ಮಮ್ಮ ಹಾಗೂ ಹರೀಶ್ ಕುಮಾರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ.
ಪ್ರಕರಣದ ದೂರು ದಾಖಲಿಸಿರುವ ವ್ಯಕ್ತಿಯು ಜಂಟಿ ಮಾಪನ ಸಮಿತಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದ ಬಾಡಿಗೆ ಕಾರಿನ ಚಾಲಕನಾಗಿದ್ದಾರೆ ಎಂದು ನ್ಯಾಯಪೀಠ ಗಮನಿಸಿದೆ. ಆದರೆ, ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿರುವ ವ್ಯಕ್ತಿಗಳಿಂದ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿರುವ ರೀತಿಯೇ ಮೇಲ್ನೋಟಕ್ಕೆ ಶಂಕಾಸ್ಪದವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಪೊರಕೆ ಚಳವಳಿ’ ಹಿನ್ನೆಲೆ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ರೈತರಾಗಿದ್ದು, ತಮ್ಮ ಜಮೀನುಗಳ ಸ್ವಾಧೀನಕ್ಕೆ ಬಂದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು ಎಂದು ವಾದಿಸಿದರು.
ಬಿಡದಿ ಟೌನ್ಶಿಪ್ ಯೋಜನೆಗಾಗಿ ಜಮೀನು ಬಿಟ್ಟುಕೊಡಲು ಸಿದ್ಧರಿಲ್ಲದ ರೈತರ ಜಮೀನುಗಳನ್ನು ಯಾವುದೇ ರೀತಿಯಲ್ಲಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸರ್ಕಾರವೇ ಹೇಳಿಕೆ ನೀಡಿತ್ತು. ಈ ಹೇಳಿಕೆಯ ಹೊರತಾಗಿಯೂ ಜಂಟಿ ಮಾಪನ ಸಮಿತಿಯ ಅಧಿಕಾರಿಗಳು ಅರ್ಜಿದಾರರ ಜಮೀನುಗಳತ್ತ ತೆರಳಿ ಮಾಪನಕ್ಕೆ ಮುಂದಾಗಿದ್ದರು ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ವಿರೋಧಿಸಿ ಅರ್ಜಿದಾರರು ಸೇರಿದಂತೆ ಹಲವು ರೈತರು ಸ್ಥಳದಲ್ಲಿ ‘ಪೊರಕೆ ಚಳವಳಿ’ ನಡೆಸಿದ್ದರು. ಇದೇ ಘಟನೆ ಆಧರಿಸಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109 ಹಾಗೂ 74ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ವಾದಿಸಿದರು.
ಸರ್ಕಾರವು ಜಮೀನು ಬಿಟ್ಟುಕೊಡಲು ಇಚ್ಛಿಸದ ರೈತರಿಂದ ಭೂಮಿ ವಶಪಡಿಸಿಕೊಳ್ಳುವುದಿಲ್ಲ ಎಂದು ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಆದರೂ ಜಂಟಿ ಮಾಪನ ಸಮಿತಿಯ ಅಧಿಕಾರಿಗಳು ಖಾಸಗಿ ಕಾರನ್ನು ಬಾಡಿಗೆಗೆ ಪಡೆದು ರೈತರ ಜಮೀನುಗಳಿಗೆ ತೆರಳಿದ್ದರು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅರ್ಜಿದಾರರು ಸೇರಿದಂತೆ ಹಲವು ರೈತರು ಪೊರಕೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಪೊರಕೆ ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯೂ ಆಗಿರುವುದರಿಂದ ರೈತರು ಸಾಂಕೇತಿಕವಾಗಿ ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದರು ಎಂದು ವಕೀಲರು ಸಮರ್ಥಿಸಿಕೊಂಡರು.
ದೂರು ದಾಖಲಿಸಿದವರ ಬಗ್ಗೆ ಪ್ರಶ್ನೆ
ಭೂಸ್ವಾಧೀನ ವಿಚಾರದಲ್ಲಿ ಸರ್ಕಾರ ನೀಡಿದ್ದ ಹೇಳಿಕೆಯನ್ನೇ ಆಧರಿಸಿ ರೈತರು ಅಧಿಕಾರಿಗಳನ್ನು ತಮ್ಮ ಜಮೀನಿಗೆ ಪ್ರವೇಶಿಸದಂತೆ ತಡೆದಿದ್ದರು. ಘಟನೆಯ ಬಳಿಕ ಜಂಟಿ ಮಾಪನ ಸಮಿತಿಯ ಕೆಲಸಕ್ಕಾಗಿ ಬಾಡಿಗೆಗೆ ಪಡೆದಿದ್ದ ಖಾಸಗಿ ಕಾರಿನ ಚಾಲಕ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ಆದರೆ, ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ಯಾವುದೇ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ವಾದ ಆಲಿಸಿದ ನ್ಯಾಯಪೀಠ, ದೂರು ದಾಖಲಿಸಿರುವ ವಿಧಾನದ ಕುರಿತು ಪ್ರಶ್ನೆಗಳನ್ನು ಎತ್ತಿತು. ಇದೇ ಹಿನ್ನೆಲೆಯಲ್ಲಿ ಅರ್ಜಿದಾರರಾದ ಆರು ರೈತರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆಯವರೆಗೆ ಆರು ರೈತರ ವಿರುದ್ಧದ ತನಿಖೆ ಮುಂದುವರಿಸದಂತೆ ಹೈಕೋರ್ಟ್ ಆದೇಶಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.



