No menu items!
24.8 C
Munich
Thursday, September 3, 2026

SIR ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಕಣ್ಮರೆ! ‘ದ್ವೇಷದ ರಾಜಕಾರಣ’ ಎಂದು ಆರೋಪ, ಎಎಪಿ ತಿರುಗೇಟು

Must read

SIR ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಕಣ್ಮರೆ! ‘ದ್ವೇಷದ ರಾಜಕಾರಣ’ ಎಂದು ಆರೋಪ, ಎಎಪಿ ತಿರುಗೇಟು

ಚಂಡೀಗಢ: ಮೊಹಾಲಿಯಲ್ಲಿ ತಮ್ಮ ಮತದಾರರ ಗುರುತಿನ ಚೀಟಿ ನೋಂದಣಿಯಾಗಿದ್ದರೂ ಪಂಜಾಬ್ನ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಣ್ಮರೆಯಾಗಿದೆ ಎಂದು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಅವರು ದೂರಿದ್ದಾರೆ.
ಪಂಜಾಬ್ನಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಹೆಸರನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ವರ್ಗೀಕರಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಚಡ್ಡಾ, ತಾವು ಪಂಜಾಬ್ನಿಂದ ಆಯ್ಕೆಯಾದ ಹಾಲಿ ರಾಜ್ಯಸಭಾ ಸಂಸದರಾಗಿದ್ದು, ತಮ್ಮ ಮತದಾರರ ಗುರುತಿನ ಚೀಟಿ ಮೊಹಾಲಿಯಲ್ಲಿ ನೋಂದಣಿಯಾಗಿದೆ. ಆದರೂ ಕರಡು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸ್ಥಳಾಂತರಗೊಂಡಿದೆ ಎಂದು ಗುರುತಿಸಿರುವುದು ಕೇವಲ ಕಚೇರಿ ಕೆಲಸದ ದೋಷದಂತೆ ಕಾಣುತ್ತಿಲ್ಲ. ಇದರಲ್ಲಿ ರಾಜಕೀಯ ದ್ವೇಷ ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಅದೃಷ್ಟವಶಾತ್ ಇದು ಇನ್ನೂ ಕರಡು ಮತದಾರರ ಪಟ್ಟಿಯಾಗಿದ್ದು, ಅಂತಿಮ ಪಟ್ಟಿಯಲ್ಲ ಎಂದು ಚಡ್ಡಾ ಹೇಳಿದ್ದಾರೆ. ಹಕ್ಕುಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ ತಮ್ಮ ಹೆಸರನ್ನು ಸರಿಪಡಿಸಿಕೊಳ್ಳಲು ಮುಂದಾಗುವುದಾಗಿ ತಿಳಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಆಮ್ ಆದ್ಮಿ ಪಕ್ಷ ತೊರೆದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಆರೋಪಕ್ಕೆ ಎಎಪಿ ತಿರುಗೇಟು ನೀಡಿದೆ.
ರಾಘವ್ ಚಡ್ಡಾ ಅವರು ಈ ಹಿಂದಿನ ಪ್ರಕ್ರಿಯೆಯಲ್ಲಿ ತಮ್ಮ ಮತದಾರರ ನೋಂದಣಿಯನ್ನು ದೆಹಲಿಗೆ ವರ್ಗಾಯಿಸಲು ಪ್ರಯತ್ನಿಸಿದ್ದರು. ಇದೀಗ ಅದರ ಸಂಪೂರ್ಣ ಹೊಣೆಯನ್ನು ಪಂಜಾಬ್ ಸರ್ಕಾರದ ಮೇಲೆ ಹೊರಿಸಲು ಮುಂದಾಗಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಚಡ್ಡಾ ಅವರು ಪಂಜಾಬ್ನಲ್ಲಿ ಅಲ್ಲ, ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದು ಸಾರ್ವಜನಿಕ ದಾಖಲೆಗಳಲ್ಲಿರುವ ವಿಚಾರ ಎಂದು ಎಎಪಿ ಹೇಳಿದೆ. ಅವರು ಪಂಜಾಬ್ನಲ್ಲಿ ವಾಸಿಸುತ್ತಿಲ್ಲದಿದ್ದರೆ, ತಮ್ಮ ಮತದಾರರ ನೋಂದಣಿಯನ್ನು ಮುಂದುವರಿಸಬೇಕೇ ಅಥವಾ ಬೇರೆಡೆಗೆ ಸ್ಥಳಾಂತರಿಸಬೇಕೇ ಎಂಬುದನ್ನು ಅವರೇ ನಿರ್ಧರಿಸಬೇಕಿತ್ತು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದುಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಘವ್ ಚಡ್ಡಾ ಅವರು ಎಎಪಿ ಅಥವಾ ಪಂಜಾಬ್ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಪಕ್ಷ ತಿರುಗೇಟು ನೀಡಿದೆ.

- Advertisement -spot_img

More articles

- Advertisement -spot_img

Latest article