ಬಡ್ಡಿ ಹಣ ಕೊಡಲಿಲ್ಲವೆಂದು ಮಹಿಳೆ ಕಿಡ್ನಾಪ್; ನಗ್ನಗೊಳಿಸಿ ವಿಡಿಯೋ ಮಾಡಿ ಬೆದರಿಕೆ, ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಬೆಂಗಳೂರು: ಬಡ್ಡಿ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ, ನಗ್ನಗೊಳಿಸಿ ಹಲ್ಲೆ ನಡೆಸಿರುವ ಆರೋಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಮಹಿಳೆಯನ್ನು ನಗ್ನಗೊಳಿಸಿ ವಿಡಿಯೋ ಮಾಡಿಕೊಂಡು, ಹಣ ನೀಡದಿದ್ದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಮಹಿಳೆ ಹಾಗೂ ಪ್ರಮುಖ ಆರೋಪಿ ರೇಷ್ಮಾ ಬಾನು ನಡುವೆ ಈ ಹಿಂದೆ ಪರಿಚಯವಿತ್ತು ಎನ್ನಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ರೇಷ್ಮಾ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ರೇಷ್ಮಾ ಮೂಲಕವೇ ನಝತ್ ಎಂಬಾಕೆಯ ಪರಿಚಯವಾಗಿದ್ದು, ಬಳಿಕ ನಝತ್ ಬಳಿಯೂ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ.
ನಝತ್ಗೆ ಪ್ರತಿ ತಿಂಗಳು ಕಂತಿನ ರೂಪದಲ್ಲಿ 5 ಸಾವಿರ ರೂಪಾಯಿ ಪಾವತಿಸುತ್ತಿದ್ದ ಮಹಿಳೆ, ರೇಷ್ಮಾಗೆ ಬಡ್ಡಿ ಹಣ ನೀಡುತ್ತಿದ್ದರು ಎನ್ನಲಾಗಿದೆ. ಆದರೆ, ಹಣಕಾಸಿನ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ರೇಷ್ಮಾಗೆ ಬಡ್ಡಿ ಹಣ ಹಾಗೂ ಎರಡು ತಿಂಗಳಿಂದ ನಝತ್ಗೆ ಕಂತಿನ ಹಣ ಪಾವತಿಸಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರೇಷ್ಮಾ ಪದೇಪದೇ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಆಕೆಯ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು. ಬಳಿಕ ಮನೆ ಖಾಲಿ ಮಾಡಿಕೊಂಡು ತಾಯಿಯ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಈ ನಡುವೆ, ಹಣ ಬರುತ್ತದೆ ಹಾಗೂ ಕೆಲಸವೊಂದಿದೆ ಎಂದು ಹೇಳಿ ನಝತ್ ಸಂತ್ರಸ್ತ ಮಹಿಳೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಮಹಿಳೆ ನಝತ್ ಮನೆಗೆ ತೆರಳಿದ ಬಳಿಕ ಅಲ್ಲಿಗೆ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್ ಬಂದಿದ್ದಾರೆ ಎನ್ನಲಾಗಿದೆ.
ಈ ವೇಳೆ ಮೂವರು ಸೇರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಆಟೋದಲ್ಲಿ ಮಹಿಳೆಯನ್ನು ಅಪಹರಿಸಿ, ಕುಂಬಳಗೋಡು ಸಮೀಪದ ಮನೆಯೊಂದರಲ್ಲಿ ಕೂಡಿ ಹಾಕಿ ಮತ್ತೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಇದೇ ವೇಳೆ ಮಹಿಳೆಯನ್ನು ನಗ್ನಗೊಳಿಸಿ ವಿಡಿಯೋ ಮಾಡಲಾಗಿದೆ. ಹಣ ನೀಡದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಇತ್ತ, ಮಗಳು ಕಾಣೆಯಾಗಿರುವುದಾಗಿ ಸಂತ್ರಸ್ತ ಮಹಿಳೆಯ ತಾಯಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಸಂತ್ರಸ್ತ ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಬಳಿಕ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



