ಅಕ್ಟೋಬರ್ 17ರಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಸರ್ಕಾರದಿಂದ ₹2 ಕೋಟಿ ಅನುದಾನ
ಕೊಡಗು: ಕೊಡಗಿನ ಪ್ರಸಿದ್ಧ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದೆ. ಅಕ್ಟೋಬರ್ 17ರಂದು ರಾತ್ರಿ 7.50ಕ್ಕೆ ಮಡಿಕೇರಿ ತಾಲೂಕಿನ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದೆ.
ಈ ಬಾರಿ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಇದಕ್ಕಾಗಿ ತಲಕಾವೇರಿ ಕ್ಷೇತ್ರದಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತೀರ್ಥೋದ್ಭವದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಲಿದೆ. ಅಕ್ಟೋಬರ್ 17ರಂದು ನಡೆಯಲಿರುವ ಪವಿತ್ರ ತೀರ್ಥೋದ್ಭವ ಆಚರಣೆಗೆ ರಾಜ್ಯ ಸರ್ಕಾರ ₹2 ಕೋಟಿ ಅನುದಾನ ನೀಡಲು ನಿರ್ಧರಿಸಿದೆ.
ಭಕ್ತರಿಗೆ ಅಗತ್ಯ ಸೌಲಭ್ಯಗಳು ಹಾಗೂ ತೀರ್ಥೋದ್ಭವದ ಸುಗಮ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ವತಿಯಿಂದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.



