ಮನರೇಗಾ ರದ್ದು, ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ರಾಜ್ಯದ ರೈತರು ಒಗ್ಗಟ್ಟಾಗಿ ವಿರೋಧಿಸಬೇಕು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮನರೇಗಾ ಯೋಜನೆಯನ್ನು ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕುತಂತ್ರವನ್ನು ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಂದು ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ–2026, ಉತ್ಪಾದನೋತ್ತರ ಕೃಷಿ–ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸದಾ ಬೆಂಬಲವಾಗಿ ನಿಂತಿದೆ. ಕೃಷಿಯನ್ನು ಲಾಭದಾಯಕಗೊಳಿಸುವುದು ಮತ್ತು ಕೃಷಿಕರ ಸಬಲೀಕರಣ ನಮ್ಮ ಪ್ರಮುಖ ಗುರಿಯಾಗಿದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದು.
ರೈತರು ಕೇವಲ ಬೆಳೆ ಬೆಳೆಯುವವರಾಗಿರದೆ ಉದ್ಯಮಿಗಳಾಗಬೇಕು. ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ ಮತ್ತು ಉಪಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಅಗತ್ಯವಿದ್ದು, ಇಂದು ಪ್ರಶಸ್ತಿ ಪಡೆದ ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಿಗಳನ್ನು ಸರ್ಕಾರ ಒದಗಿಸುತ್ತಿದೆ. ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಬೆಳೆ ವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದ್ದು, ಇದುವರೆಗೆ 6,000 ಕೋಟಿ ರೂಪಾಯಿ ವಿಮೆ ಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಕಬ್ಬು, ರಾಗಿ ಸೇರಿದಂತೆ ಕೆಲವೇ ಬೆಳೆಗಳಿಗೆ ಸೀಮಿತವಾಗದೆ, ಬೆಳೆ ನಂತರದ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳಬೇಕು. ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಬೆಲೆ ನಿಗದಿಪಡಿಸಲಾಗಿದೆ. ತೊಗರಿ ಬೆಳೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆಯಲಾಗಿದೆ. ಈ ವರ್ಷ ಮೆಕ್ಕೆಜೋಳ ಹೆಚ್ಚುವರಿ ಇಳುವರಿಯಿಂದ 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 2,400 ರೂ. ಬೆಲೆ ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಕೆ ಮಾಡುವ ಕಾರ್ಖಾನೆಗಳು ಹಾಗೂ ಎಥನಾಲ್ ತಯಾರಕರೊಂದಿಗೆ ಚರ್ಚಿಸಿ 40 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿದರು.






