ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ದೋಷಿ!
ಪಣಜಿ: 2013ರಲ್ಲಿ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ-ಇನ್-ಚೀಫ್ ತರುಣ್ ತೇಜ್ಪಾಲ್ ಅವರನ್ನು ಬಾಂಬೆ ಹೈಕೋರ್ಟ್ನ ಗೋವಾ ಪೀಠ ದೋಷಿ ಎಂದು ಘೋಷಿಸಿದೆ. ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಹಾಗೂ ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2.30ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(f), 376(2)(k) (ಅತ್ಯಾಚಾರ) ಹಾಗೂ 354A, 354B (ಲೈಂಗಿಕ ಕಿರುಕುಳ) ಅಡಿಯಲ್ಲಿ 62 ವರ್ಷದ ತರುಣ್ ತೇಜ್ಪಾಲ್ ದೋಷಿ ಎಂದು ನ್ಯಾಯಪೀಠ ತೀರ್ಮಾನಿಸಿದೆ.
ಪ್ರಕರಣದ ಹಿನ್ನೆಲೆ
2013ರ ನವೆಂಬರ್ನಲ್ಲಿ ಗೋವಾದ ಪಂಚತಾರಾ ಹೋಟೆಲ್ನಲ್ಲಿ ನಡೆದ ‘ಥಿಂಕ್ಫೆಸ್ಟ್’ ಕಾರ್ಯಕ್ರಮದ ವೇಳೆ, ಲಿಫ್ಟ್ನೊಳಗೆ ತರುಣ್ ತೇಜ್ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಕಿರಿಯ ಮಹಿಳಾ ಸಹೋದ್ಯೋಗಿ ಆರೋಪಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಾಪುಸಾ ಸೆಷನ್ಸ್ ನ್ಯಾಯಾಲಯವು 2021ರಲ್ಲಿ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ನ ಗೋವಾ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ತರುಣ್ ತೇಜ್ಪಾಲ್, ಶಿಕ್ಷೆಯ ಪ್ರಮಾಣ ನಿಗದಿಯಾಗುವ ಮೊದಲು ವಯಸ್ಸು ಹಾಗೂ ವೈಯಕ್ತಿಕ ಪರಿಸ್ಥಿತಿಯನ್ನು ಪರಿಗಣಿಸಿ ಶಿಕ್ಷೆಯಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಿದರು.
“ನನಗೆ ಈಗ 62 ವರ್ಷ. ನನಗೆ ಪತ್ನಿ ಇದ್ದಾರೆ. ಈ ಪ್ರಕರಣದಲ್ಲಿ ನಾನು ಕೂಡ ಸಂತ್ರಸ್ತನೆಂದು ಭಾವಿಸುತ್ತೇನೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಉದ್ದೇಶವಿದೆ. ಆದ್ದರಿಂದ ನನ್ನ ವಯಸ್ಸನ್ನು ಪರಿಗಣಿಸಿ ರಿಯಾಯಿತಿ ನೀಡಬೇಕು” ಎಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು.
ತೇಜ್ಪಾಲ್ ಪರ ಹಿರಿಯ ವಕೀಲ ಆಬಾದ್ ಪೋಂಡಾ ವಾದ ಮಂಡಿಸಿ, ಘಟನೆ ನಡೆದು 13 ವರ್ಷಗಳಾಗಿವೆ. ತೇಜ್ಪಾಲ್ ವಿರುದ್ಧ ಬೇರೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ಶಿಕ್ಷೆಯಲ್ಲಿ ಸಡಿಲಿಕೆ ನೀಡಬೇಕು. ಅಲ್ಲದೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತೀರ್ಪಿನ ಜಾರಿಗೆ ಎಂಟು ವಾರಗಳ ತಡೆ ನೀಡಬೇಕು ಎಂದು ಕೋರಿದರು.
ಆದರೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂತ್ರಸ್ತೆ ಮಗಳ ಸಮಾನ ವಯಸ್ಸಿನವರಾಗಿದ್ದು, ಮಾರ್ಗದರ್ಶನ ನೀಡಬೇಕಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದರೂ ಕಿರುಕುಳ ಮುಂದುವರಿದಿತ್ತು. ಇಂತಹ ಪ್ರಕರಣಗಳಲ್ಲಿ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಕಠಿಣ ಶಿಕ್ಷೆ ಅಗತ್ಯ ಎಂದು ನ್ಯಾಯಾಲಯದ ಗಮನ ಸೆಳೆದರು.



