Renukaswamy Case: ದರ್ಶನ್ʼಗೆ ಹೆಚ್ಚಿದ ಸಂಕಷ್ಟ? ‘ಸತ್ಯ ಹೇಳುತ್ತೇನೆ’ ಎಂದು ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ ಆರೋಪಿ ಪ್ರದೋಷ್

0
147

Renukaswamy Case: ದರ್ಶನ್ʼಗೆ ಹೆಚ್ಚಿದ ಸಂಕಷ್ಟ? ‘ಸತ್ಯ ಹೇಳುತ್ತೇನೆ’ ಎಂದು ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ ಆರೋಪಿ ಪ್ರದೋಷ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಎ-14 ಆರೋಪಿಯಾಗಿರುವ ಪ್ರದೋಷ್ ತನ್ನನ್ನು ಮಾಫಿ ಸಾಕ್ಷಿ (Approver)ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಬೆಳವಣಿಗೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನು ಹುಟ್ಟುಹಾಕಿದೆ.
ಪ್ರದೋಷ್ ಸಲ್ಲಿಸಿರುವ ಅರ್ಜಿಯಲ್ಲಿ, ಪ್ರಕರಣದ ಕುರಿತು ತಾನು ಸತ್ಯಾಂಶವನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದು, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾನೆ.
ಈ ಸಂಬಂಧ ಆರೋಪಿಯನ್ನು ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ಘಟನಾವಳಿಗಳ ಬಗ್ಗೆ ನ್ಯಾಯಾಲಯದ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ.
ಪೊಲೀಸರ ತನಿಖೆ ಪ್ರಕಾರ, ರೇಣುಕಾಸ್ವಾಮಿ ಮೇಲಿನ ಹಲ್ಲೆ ನಡೆದ ವೇಳೆ ಪ್ರದೋಷ್ ಸ್ಥಳದಲ್ಲಿದ್ದ ಎನ್ನಲಾಗಿದೆ. ಹಲ್ಲೆ ತೀವ್ರವಾಗುತ್ತಿದ್ದ ಸಂದರ್ಭದಲ್ಲಿ, “ಹೊಡೆಯೋದು ಸಾಕು, ನಿಲ್ಲಿಸಿ… ಸತ್ತು ಹೋಗ್ತಾನೆ” ಎಂದು ಪ್ರದೋಷ್ ಹೇಳಿದ್ದಾನೆ ಎಂಬುದು ಪೊಲೀಸರ ದಾಖಲೆಯಲ್ಲಿದೆ.
ಇದೇ ವೇಳೆ, ಮೃತದೇಹ ಸಾಗಿಸುವ ಸಂಬಂಧ ಸಬ್ ಇನ್ಸ್ಪೆಕ್ಟರ್ಗೆ ಕರೆ ಮಾಡಿದ್ದಲ್ಲದೆ, ಶವ ಸಾಗಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪ್ರದೋಷ್ ದರ್ಶನ್ ಜೊತೆಯಲ್ಲೇ ಇದ್ದನು ಎಂದು ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದ ಉದಾಹರಣೆಯನ್ನು ಉಲ್ಲೇಖಿಸಲಾಗುತ್ತಿದ್ದು, ಆ ಪ್ರಕರಣದ ವಿಚಾರಣೆಯಲ್ಲಿ ಅದು ಮಹತ್ವದ ಪಾತ್ರ ವಹಿಸಿತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಪ್ರದೋಷ್ನ ಅರ್ಜಿಯ ಬಗ್ಗೆ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.