ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ವಿರೋಧ ಪಕ್ಷದವರಿಗೆ ನಡುಕ ಶುರುವಾಗುತ್ತೆ. ಯಾಕೆಂದರೆ.. ರಾಜಕೀಯ ಮತ್ತು ತನಿಖಾ ಸಂಸ್ಥೆಗಳ ದಾಳಿಗಳ ನಡುವೆ ಅವಿನಾಭಾವ ಸಂಬಂಧ ಇದ್ದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ 2017ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಇಡಿ ಮತ್ತು ಐಟಿ ದಾಳಿ ನಡೆದಿತ್ತು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಲಾಗಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿತ್ತು. ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ದಿನ ಇದ್ದಾಗ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಅದಕ್ಕೂ ಮೊದಲು ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಅವರ ಮೇಲೂ ಕ್ರಮ ಕೈಗೊಳ್ಳಲಾಗಿತ್ತು.
ಈಗ ಬೆಂಗಾಲ್, ತಮಿಳುನಾಡು, ಕೇರಳ, ಅಸ್ಸಾಂ, ಮತ್ತು ಪುದುಚೇರಿಯಲ್ಲಿ ಮತದಾನ ಇದೆ. ಆದರೆ ಅದಕ್ಕೂ ಮುನ್ನ ಬೆಂಗಳೂರಿನ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮತ್ತು ಮೊಹಮ್ಮದ್ ನಲಪಾಡ್ ಗೆ ಸೋಮವಾರ ಜಾರಿ ನಿರ್ದೇಶನಾಲಯ( ಇಡಿ) ಶಾಕ್ ನೀಡಿದೆ. ಬೆಂಗಳೂರಿನ ಹ್ಯಾರಿಸ್ ಮತ್ತು ನಲಪಾಡ್ ನಿವಾಸದ ಮೇಲೆ ದಾಳಿ ನಡೆದಿದೆ. ಒಂದಲ್ಲ, ಎರಡಲ್ಲ, 17 ಕಡೆಗಳಲ್ಲಿ ಈ ದಾಳಿ ನಡೆಸಲಾಗಿದೆ.
ಸಹಜವಾಗಿ ಈ ದಾಳಿಯಿಂದ ರಾಜಕಾರಣದ ಪಡಸಾಲೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ‘ಕೇಂದ್ರೀಯ ಸಂಸ್ಥೆಗಳನ್ನು’ ಬಿಜೆಪಿ ಸರ್ಕಾರ ಅಸ್ತ್ರವಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸುತ್ತಿದೆ.
ಬಿಜೆಪಿಯ ಈ “ಸೇಡಿನ ರಾಜಕಾರಣ” ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ವಾದಗಳ ನಡುವೆ ತಮ್ಮ ಮತ್ತು ಶ್ರೀಕಿ ಸಂಬಂಧದ ಕುರಿತು ಹಾಗೂ ತಮ್ಮ ಮೇಲೆ ನಡೆದ ದಾಳಿಯ ಕುರಿತು ಮೊಹಮ್ಮದ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ 37 ಲಕ್ಷದ ವರದಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ನಲಪಾಡ್ ಇಡಿಯನ್ನು ನಾನು ಪ್ರಶ್ನೆ ಮಾಡುವುದಿಲ್ಲ, ಇಡಿ ಅಧಿಕಾರಿಗಳು ಬಂದು ಪರಿಶೀಲನೆ ಮಾಡಬಹುದು. ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ನಾನು ಹಾಗೂ ನನ್ನ ಸಹೋದರ ಯಾವುದೇ ತಪ್ಪು ಮಾಡಿಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಆದರೆ ಮಿಡಿಯಾ ಟ್ರಯಲ್ ಮಾಡುವುದು ಸರಿಯಲ್ಲ ಎಂದು ಹೇಳಿರುವ ಮೊಹಮ್ಮದ್ ನಲಪಾಡ್ 37 ಲಕ್ಷ ಸಿಕ್ಕಿದೆ ಎಂದು ಮಾಧ್ಯಮದಲ್ಲಿ ಬರೆಯಲಾಗಿದೆ. 37 ಲಕ್ಷ ಸಿಕ್ಕಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರಾ? ಎಂದು ಕಿಡಿ ಕಾರಿದ್ಧಾರೆ. ದಾಳಿಯಲ್ಲಿ ಒಂದೇ ಒಂದು ರೂಪಾಯಿ ಸಿಕ್ಕಿಲ್ಲ. ನನ್ನ ವಿರುದ್ಧ ಏನೇ ಆರೋಪ ಇದ್ದರೂ, ನಾನು ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಹೇಳಿದ್ಧಾರೆ. ಇಷ್ಟೇ ಅಲ್ಲ ಇಡಿ ದಾಳಿಯಲ್ಲಿ 37 ಲಕ್ಷ ಸಿಕ್ಕಿಲ್ಲ. ಕೇವಲ ಎರಡು ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ಧಾರೆ.
ಯಾವುದೋ ಒಂದು ಕೇಸ್ ಇಟ್ಟುಕೊಂಡು ನಮ್ಮನ್ನು ಟಾರ್ಗಟ್ ಮಾಡಬೇಕು ಹಾಗೂ ನನ್ನ ತಂದೆಗೆ ಸೂಕ್ತ ಸ್ಥಾನಮಾನ ಸಿಗಬಾರದು ಎಂಬ ಕಾರಣಕ್ಕಾಗಿ ಸಮಯ ನೋಡಿ ಈ ರೀತಿ ಮಾಡುತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿರುವ ನಲಪಾಡ್ ಇದೇ ಸಮಯದಲ್ಲಿಬಿಟ್ ಕಾಯಿನ್ ಹಗರಣದ ರೂವಾರಿ ಹ್ಯಾಕರ್ ಶ್ರೀಕಿ ಜೊತೆಗಿನ ತಮ್ಮ ಸ್ನೇಹದ ಕುರಿತು ಕೂಡ ಮಾತನಾಡಿದ್ಧಾರೆ. ನನಗೆ ಶ್ರೀಕಿ ಪರಿಚಯ ಇದೆ. ಆದರೆ ಯಾರು ಒಳ್ಳೆಯವರು ಕೆಟ್ಟವರು ಎಂದು ಯಾರಿಗೆ ಗೊತ್ತು. ನನಗೆ ಕರ್ನಾಟಕದ ಜನರು ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿರುವ ಮೊಹಮ್ಮದ್ ನಲಪಾಡ್ ನಾನು ಯಾವುದೇ ತಪ್ಪು ಮಾಡಿಲ್ಲ, ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.



