ಬೆಂಗಳೂರು: ಕರ್ನಾಟಕದ ಪವರ್ ಪಾಲಿಟಿಕ್ಸ್‌ನಲ್ಲಿ ಸದ್ಯಕ್ಕೆ ಯಾವುದೂ ನೂರಕ್ಕೆ ನೂರು ಫಿಕ್ಸ್ ಅಂತ ಹೇಳಲು ಸಾಧ್ಯವೇ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್ ಅವರು ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ಎನ್ನುವ ಹೈವೋಲ್ಟೇಜ್ ಸುದ್ದಿಯ ಬೆನ್ನಲ್ಲೇ ಈಗ ಸಚಿವ ಸಂಪುಟದ ಪಟ್ಟಿಯ ಕುರಿತು ಅಸಲಿ ಅಪ್ಡೇಟ್ ಹೊರಬಿದ್ದಿದೆ. ಬುಧವಾರ ಡಿ.ಕೆ.ಶಿವಕುಮಾರ್ ಅವರ ಜೊತೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾದ 14 ಶಾಸಕರ ತಾತ್ಕಾಲಿಕ ಪಟ್ಟಿ ಸದ್ಯ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಕುತೂಹಲ ಕೆರಳಿಸಿದೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಇಡೀ ದಿನ ನಡೆದ ಹಗ್ಗಜಗ್ಗಾಟದ ಕಸರತ್ತು ಇನ್ನೂ ಮುಕ್ತಾಯಗೊಂಡಿಲ್ಲ. ಸದ್ಯಕ್ಕೆ ಹರಿದಾಡುತ್ತಿರುವ 12 ರಿಂದ 14 ಸಚಿವರ ಲಿಸ್ಟ್ ಕೇವಲ ಪ್ರಾಥಮಿಕ ಚರ್ಚೆಯ ವೇಳೆ ಸಿದ್ಧವಾಗಿರುವ ತಾತ್ಕಾಲಿಕ ಪಟ್ಟಿಯಾಗಿದೆ. ಇವತ್ತು ರಾತ್ರಿ 9 ಗಂಟೆ ಅಥವಾ ತಡರಾತ್ರಿಯ ವೇಳೆಗೆ ಹೈಕಮಾಂಡ್ ನಾಯಕರು ಅಂತಿಮವಾಗಿ ಯಾರ ಹೆಸರಿಗೆ ಗ್ರೀನ್ ಸಿಗ್ನಲ್ ಕೊಟ್ಟು ಆಫೀಶಿಯಲ್ ಲಿಸ್ಟ್ ಬಿಡುಗಡೆ ಮಾಡ್ತಾರೋ ಅವರಷ್ಟೇ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲಿಯವರೆಗೂ ಈ ಪಟ್ಟಿಯಲ್ಲಿ ಯಾರ ಹೆಸರು ಬೇಕಾದರೂ ಬದಲಾಗಬಹುದು!
ಸದ್ಯಕ್ಕೆ ಹರಿದಾಡುತ್ತಿರುವ ತಾತ್ಕಾಲಿಕ ಲಿಸ್ಟ್ ಪ್ರಕಾರ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ, ಯು.ಟಿ.ಖಾದರ್, ಕೆ.ಹೆಚ್.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರ ಜೊತೆಗೆ ಹಳೇ ಮೈಸೂರು ಹಾಗೂ ಬೆಂಗಳೂರು ಭಾಗದ ಪ್ರಭಾವಿ ನಾಯಕರಾದ ಡಾ. ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ರಾಮಲಿಂಗ ರೆಡ್ಡಿ ಹಾಗೂ ಕೃಷ್ಣ ಬೈರೆಗೌಡ ಅವರ ಹೆಸರುಗಳನ್ನು ತಾತ್ಕಾಲಿಕವಾಗಿ ಸೇರಿಸಲಾಗಿದೆ. ಹಾಗೆಯೇ ಬಿ.ಕೆ.ಹರಿಪ್ರಸಾದ್, ಚಲುವರಾಯ ಸ್ವಾಮಿ ಹಾಗೂ ಬೈರತಿ ಸುರೇಶ್ ಹೆಸರುಗಳೂ ಈ ಶಾರ್ಟ್‌ಲಿಸ್ಟ್‌ನಲ್ಲಿವೆ ಎನ್ನಲಾಗಿದೆ.
ಆದರೆ, ಈ ತಾತ್ಕಾಲಿಕ ಪಟ್ಟಿಯೇ ಈಗ ಬೆಂಗಳೂರುದಿಂದ ದಿಲ್ಲಿವರೆಗೂ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಸದ್ಯಕ್ಕೆ ಹೋಲ್ಡ್‌ನಲ್ಲಿ ಇಡಲಾಗಿದ್ದು, ಅವರಿಗೆ ಡಿ.ಕೆ. ಶಿವಕುಮಾರ್ ಅವರು ತೆರವು ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಗದ್ದುಗೆ ನೀಡುವ ಮಾತುಗಳು ಕೇಳಿಬರುತ್ತಿವೆ. ಆದರೆ ಅಂತಿಮ ಪಟ್ಟಿ ಬರುವಷ್ಟರಲ್ಲಿ ಸತೀಶ್ ಜಾರಕಿಹೊಳಿ ಅವರೇ ನೇರವಾಗಿ ಸಂಪುಟ ಸೇರಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಮೊದಲ ತಾತ್ಕಾಲಿಕ ಲಿಸ್ಟ್‌ನಲ್ಲಿ ಜಮೀರ್ ಅಹ್ಮದ್ ಖಾನ್, ಹೆಚ್.ಸಿ.ಮಹದೇವಪ್ಪ, ಶರಣಪ್ರಕಾಶ್ ಪಾಟೀಲ್, ಹೆಚ್.ಕೆ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಧು ಬಂಗಾರಪ್ಪ ಅವರಂತಹ ಪ್ರಭಾವಿಗಳ ಹೆಸರುಗಳು ಮಿಸ್ ಆಗಿರುವುದು ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಕೇವಲ ತಾತ್ಕಾಲಿಕ ಪಟ್ಟಿ ಆಗಿರುವುದರಿಂದ, ತಮಗೆ ಮೊದಲ ಲಿಸ್ಟ್‌ನಲ್ಲೇ ಜಾಗ ಬೇಕು ಎಂದು ಈ ಘಟಾನುಘಟಿ ನಾಯಕರು ಈಗ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ಮೇಲೆ ಭಾರಿ ಪ್ರೆಶರ್ ಹಾಕುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಈಗ ಹೊರಬಿದ್ದಿರೋ ಪಟ್ಟಿ ಕೇವಲ ‘ರಫ್ ಕಾಪಿ’ ಇದ್ದಂತೆ. ಇವತ್ತು ರಾತ್ರಿ ಹೈಕಮಾಂಡ್ ರಿಲೀಸ್ ಮಾಡಲಿರುವ ಅಂತಿಮ ಅಫೀಶಿಯಲ್ ಲಿಸ್ಟ್‌ನಲ್ಲಿ ಯಾರ್ಯಾರಿಗೆ ಅದೃಷ್ಟ ಖುಲಾಯಿಸಲಿದೆ ಮತ್ತು ಯಾರ ಹೆಸರುಗಳು ಕಟ್ ಆಗಲಿವೆ ಎಂಬುದು ತಡರಾತ್ರಿಯೊಳಗೆ ಕಂಪ್ಲೀಟ್ ಆಗಿ ಕ್ಲಿಯರ್ ಆಗಲಿದೆ. ಡಿ.ಕೆ.ಶಿವಕುಮಾರ್ ಅವರ ಈ ಹೊಸ ಇನಿಂಗ್ಸ್‌ನ ಅಸಲಿ ಕ್ಯಾಬಿನೆಟ್ ಹೇಗಿರಲಿದೆ ಅನ್ನೋದನ್ನು ತಿಳಿಯಲು ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿದೆ. ಉತ್ತರ ನಾಳೆ (ಜೂನ್ 3) ಸಿಗಲಿದೆ.



