ಅಲೋಕ್ ಕುಮಾರ್ ಸಲಹೆ ಮೇರೆಗೆ ಯೋಗದ ಮೊರೆ ಹೋದ ದರ್ಶನ್: ಜೈಲಿನಲ್ಲಿ ಪ್ರಾಣಾಯಾಮ, ಶವಾಸನ ಅಭ್ಯಾಸ
ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಅವರ ಸಹ-ಆರೋಪಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದು ವಿಶೇಷ ಗಮನ ಸೆಳೆಯಿತು.
ಜೈಲಿನ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಆಯೋಜಿಸಲಾಗಿತ್ತು. ಆದರೆ ತಮಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಇರುವುದಾಗಿ ತಿಳಿಸಿದ ನಟ ದರ್ಶನ್ ಆರಂಭದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು.
ಈ ವಿಷಯ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿ) ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಕಚೇರಿಗೆ ಕರೆಸಿ ಮಾತುಕತೆ ನಡೆಸಿದರು. ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ ಯೋಗಾಭ್ಯಾಸ ಸಹಕಾರಿ ಆಗಬಹುದು ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಯೋಗ ಅತ್ಯಂತ ಪ್ರಯೋಜನಕಾರಿ ಎಂದು ಮನವರಿಕೆ ಮಾಡಿ ಯೋಗದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
ಡಿಜಿ ಅವರ ಸಲಹೆಯನ್ನು ಸ್ವೀಕರಿಸಿದ ದರ್ಶನ್, ಜೈಲಿನ ಮುಖ್ಯ ಮೈದಾನದಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸದಿದ್ದರೂ, ತಮ್ಮ ಬ್ಯಾರಕ್ನ ಕಾರಿಡಾರ್ನಲ್ಲಿ ಸಹ-ಆರೋಪಿಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ಯೋಗಾಭ್ಯಾಸ ನಡೆಸಿದರು. ಈ ವೇಳೆ ಪ್ರಾಣಾಯಾಮ, ದೀರ್ಘ ದಂಡ ನಮಸ್ಕಾರ ಹಾಗೂ ಶವಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಯೋಗಾಭ್ಯಾಸ ಪೂರ್ಣಗೊಂಡ ಬಳಿಕ ದರ್ಶನ್ ಮತ್ತು ಅವರ ಸಹ-ಆರೋಪಿಗಳು ತಮ್ಮ ಬ್ಯಾರಕ್ಗೆ ಮರಳಿದರು.
ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಮಹಿಳಾ ಕೈದಿಗಳ ವಿಭಾಗದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇತರ ಮಹಿಳಾ ಕೈದಿಗಳೊಂದಿಗೆ ಸಾಲಿನಲ್ಲಿ ಕುಳಿತು ಯೋಗ ಹಾಗೂ ಧ್ಯಾನ ಮಾಡಿದರು.



