ಸಂಸಾರ ಅಂದರೆ ಸುಂದರ ಕಾವ್ಯ. ಪ್ರೀತಿ ಮತ್ತು ಹೊಂದಾಣಿಕೆ ಸಮ ಪ್ರಮಾಣದಲ್ಲಿದ್ದರೆ ಮಾತ್ರ ಜೀವನ ಸಾರ್ಥಕ. ಆದರೆ ಈಗ ಕಾಲ ಬದಲಾಗಿದೆ. ಗಂಡ ಹೆಂಡತಿಯ ನಡುವೆ ಸಣ್ಣ ಪುಟ್ಟ ಕಾರಣಕ್ಕೆ ಜಗಳಗಳಾಗುತ್ತಿವೆ. ವಿಕೋಪಕ್ಕೆ ಹೋಗುತ್ತಿವೆ. ಇನ್ನೂ ಸಂಸಾರದಲ್ಲಿ ಈಗ ಬಿರು ಮೂಡಲು ಇನ್ನೆರಡು ಕಾರಣಗಳು ಇವೆ. ಅದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ.ಇದರ ಜೊತೆ ಮನಸ್ಸಿನ ಚಂಚಲತೆ ಮತ್ತೊಂದು ಕಾರಣ.
ಮನೆಯಲ್ಲಿ ಸಿಗುವ ನೈಜ ಪ್ರೀತಿಗಿಂತ ಹೊರಗಿನ ಬಣ್ಣದ ಲೋಕ ಮತ್ತು ಹೊಸ ಆಕರ್ಷಣೆಗಳೇ ಶ್ರೇಷ್ಠವೆಂಬ ಭ್ರಮೆಯಲ್ಲಿ, ಸುಭದ್ರವಾದ ಸಂಸಾರಕ್ಕೆ ಕೊಳ್ಳಿ ಇಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬದ್ಧತೆಯ ಕೊರತೆ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹಂಬಲ, ಸ್ವಾರ್ಥದ ನಿರ್ಧಾರಗಳು, ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಮಂಡ್ಯದಲ್ಲಿ ನಡೆದ ಪ್ರಕರಣ ಇದಕ್ಕೆ ಸದ್ಯದ ಉದಾಹರಣೆ.
ಹೌದು, ಮಂಡ್ಯದಲ್ಲಿ ಸಾಗರ್ ಎಂಬ ವ್ಯಕ್ತಿ ಯುವತಿಯೊಬ್ಬರನ್ನು ಮದುವೆಯಾಗಿದ್ದರು. ಮೂರು ವರ್ಷಗಳ ಪ್ರೇಮ ಇವರದ್ದು. ಹೆತ್ತವರನ್ನು ತೊರೆದು ಪ್ರೀತಿಯ ಹಿಂದೆ ಬಂದಿದ್ದಳು ಯುವತಿ. ಮದುವೆಯಾದ ಒಂದೂವರೆ ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ ಸಾಗರ್ ಗೆ ಸ್ನೇಹಿತನೇ ಮುಳ್ಳಾಗುತ್ತಾನೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಸ್ನೇಹದ ಸೋಗಿನಲ್ಲಿ ಮನೆಗೆ ಬರುತ್ತಿದ್ದ ಸ್ನೇಹಿತ ಸಾಗರ್ ಪತ್ನಿಯನ್ನು ಬಾಯ್ತುಂಬ ತಂಗಿ ಎಂದೇ ಕರೆಯುತ್ತಿದ್ದ.
ಆದರೆ ಮನದಲ್ಲಿನ ಲೆಕ್ಕಾಚಾರ ಬೇರೆಯದ್ದೇ ಇತ್ತು. ಸದ್ಯ ತಂಗಿ ಎಂದು ಕರೆದ ಹುಡುಗಿಯ ಜೊತೆಯೇ ಸ್ನೇಹಿತ ಓಡಿ ಹೋಗಿದ್ದಾನೆ.ಇಷ್ಟೇ ಅಲ್ಲ ದೇವಸ್ಥಾನದಲ್ಲಿ ಮದುವೆಯೂ ಆಗಿದ್ದಾನೆ. ತಮ್ಮ ಮದುವೆಯ ಸುದ್ದಿಯನ್ನು ಯುವತಿ ವಾಟ್ಸಾಫ್ ಮೂಲಕ ಜಗಜ್ಜಾಹೀರು ಮಾಡಿದ್ದು, ಒಂದು ಕಡೆ ನಂಬಿಸಿ ಕತ್ತು ಕೊಯ್ದ ಸ್ನೇಹಿತ ಇನ್ನೊಂದು ಕಡೆ ಪತ್ನಿಯ ನಂಬಿಕೆ ದ್ರೋಹ.. ಇದೆಲ್ಲದರಿಂದ ಕಂಗಾಲಾಗಿರುವ ಸಾಗರ್ ಮಾಧ್ಯಮದವರ ಎದುರು ಕಣ್ಣೀರು ಹಾಕಿದ್ದಾರೆ. ಒಂದು ಲಕ್ಷ ನಗದು ಜೊತೆಯಲ್ಲಿ 22 ಗ್ರಾಂ ಚಿನ್ನ ಬೇರೆ ಕಾಣೆಯಾಗಿದ್ದು ಸಾಗರ್ ಗೆ ಗಾಯದ ಮೇಲೆ ಇದರಿಂದ ಬರೆ ಎಳೆದಂತಾಗಿದೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ನಾನು ಮಾತ್ರ ಯಾವುದೇ ಕಾರಣಕ್ಕೂ ನನ್ನ ಮೊದಲ ಗಂಡ ಸಾಗರ್ ಹತ್ತಿರ ಹೋಗಲ್ಲ ಎಂದು ಯುವತಿ ಹೇಳಿದ್ದಾಳೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.



