ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾ ಇರಲಿ.. ಕ್ರಿಕೆಟ್ನ ಮೈದಾನ ಇರಲಿ.. ಅಥವಾ ಇನ್ಯಾವುದೋ ಕ್ಷೇತ್ರ ಇರಲಿ. ಹಲವರು ದುಡಿಮೆಯೇ ದೇವರೆಂದು ನಂಬಿದ್ದರು. ತಮ್ಮ ಜೀವನೋಪಾಯಕ್ಕೆ ತಮ್ಮ ತಮ್ಮ ವೃತ್ತಿಯನ್ನು ಮಾತ್ರ ನಂಬಿಕೊಂಡಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ಯೋಚನಾ ಲಹರಿಯೂ ಬದಲಾಗಿದೆ.
ದಿನಗೂಲಿ ನೌಕರಿಯನ್ನು ನೆಚ್ಚಿಕೊಂಡ ಮತ್ತು ಬಡ ಹಾಗೂ ಮಧ್ಯಮ ವರ್ಗದರವನ್ನು ಹೊರತು ಪಡಿಸಿದರೆ ಹಲವರು ಹಲವು ಕ್ಷೇತ್ರಗಳಲ್ಲಿ ಏಕ ಕಾಲಕ್ಕೆ ಕಾಲಿಟ್ಟಿದ್ದಾರೆ. ಇವತ್ತು ಯಾರು ಯಾರ ಮೇಲೆಯೂ ಅವಲಂಬಿತವಾಗಿಲ್ಲ. ಸಿನಿಮಾ ಅನಿಶ್ಚತತೆ ಸಂತೆ ಎಂದು ಮನಗಂಡು ಹಲವರು ಹಲವು ಉದ್ಯಮಗಳಲ್ಲಿ ದುಡ್ಡು ಹೂಡಿದ್ದಾರೆ. ಕ್ರಿಕೆಟ್ ಆಟಗಾರರ ಕಥೆ ಕೂಡ ಭಿನ್ನವಾಗಿಲ್ಲ.

ಹಿಂದೊಮ್ಮೆ ದೇಶವನ್ನು ಪ್ರತಿನಿಧಿಸುವುದೇ ಗೌರವದ ವಿಷಯ ಎಂದು ಹಲವರು ಅಂದುಕೊಳ್ಳುತ್ತಿದ್ದರು. ಆದರೆ ಈಗ ತಮ್ಮ ಅಡಿಪಾಯ ಗಟ್ಟಿ ಮಾಡಿಕೊಳ್ಳುವಲ್ಲಿ ಹಲವರು ಬ್ಯುಸಿಯಾಗಿದ್ದಾರೆ. ಆ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರು.
ಹೌದು, ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಗುರುಗ್ರಾಮ್, ಗೋವಾ, ಹೈದರಾಬಾದ್, ಜೈಪುರ್, ಇಂದೋರ್, ಲೂಧಿಯಾನ, ಮೊಹಾಲಿ, ಹೀಗೆ ಭಾರತದೆಲ್ಲಡೆ ಹಲವಡೆ ಕೊಹ್ಲಿ ಒಡೆತನದ ಹಲವು ರೆಸ್ಟೋರೆಂಟ್ ಕಮ್ ರೆಸ್ಟೋ-ಬಾರ್ ಗಳಿವೆ. ಆ ಪೈಕಿ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ”ಒನ್8 ಕಮ್ಯೂನ್” ಕೂಡ ಒಂದು.
”ಟ್ರಿಯೊ ಹಿಲ್ಸ್ ಹಾಸ್ಪಿಟಾಲಿಟಿ” ಸಂಸ್ಥೆಯ ಜೊತೆ ಸೇರಿ ಕೊಹ್ಲಿ ಈ ರೆಸ್ಟೋರೆಂಟ್ ನಡೆಸುತ್ತಿದ್ದರು. ಆದರೆ.. ಇತ್ತೀಚಿನ ವರ್ಷಗಳಲ್ಲಿ ಈ ರೆಸ್ಟೋರೆಂಟ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಉದಾಹರಣೆಗೆ ಸುರಕ್ಷತಾ ಕ್ರಮಗಳ ಕೊರತೆ, ಸಮಯ ಮೀರಿದ ವಹಿವಾಟು, ಧೂಮಪಾನ ವಲಯ ನಿಯಮ ಉಲ್ಲಂಘನೆ.
ಈ ಹಿನ್ನೆಲೆ ಬೇಸತ್ತ ಕೊಹ್ಲಿ, ಈ ನಿರ್ದಿಷ್ಟ ಔಟ್ಲೆಟ್ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡು ಪಾಲುದಾರಿಕೆಯನ್ನು ಕಡಿದುಕೊಂಡಿದ್ದರು. ಸದ್ಯ ಕಸ್ತೂರ್ ಬಾ ರಸ್ತೆಯಲ್ಲಿರುವ ರತ್ನಂ ಕಾಂಪ್ಲೆಕ್ಸ್ನಲ್ಲಿರುವ ಈ ರೆಸ್ಟೋರೆಂಟ್ಗೆ ಬೀಗ ಜಡಿಯಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ ”ಟ್ರಿಯೊ ಹಿಲ್ಸ್ ಹಾಸ್ಪಿಟಾಲಿಟಿ” ಸಂಸ್ಥೆಯು ಕಳೆದ ಸುಮಾರು ಆರು ತಿಂಗಳಿನಿಂದ ಕಟ್ಟಡದ ಮಾಲೀಕರಿಗೆ ಬಾಡಿಗೆ ನೀಡಿಲ್ಲ. ಈ ಬಾಕಿ ಮೊತ್ತವೇ ಎರಡು ಕೋಟಿಗೂ ಅಧಿಕ ಆಗಿದೆ.
ಹೀಗಾಗಿ ಕಾಂಪ್ಲೆಕ್ಸ್ನ ಮಾಲೀಕರು ವಿಲ್ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈ ಪ್ರಕರಣದ ವಿಚಾರಣೆಯನ್ನು ನಡೆಸಿರುವ ಸಿವಿಲ್ ಕೋರ್ಟ್ರೆಸ್ಟೋರೆಂಟ್ನಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸುವ ಆದೇಶವನ್ನು ನೀಡಿದೆ. ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ. ಈ ಮೂಲಕ ಈ ರೆಸ್ಟೋರೆಂಟ್ಗೆ ಈಗ ಬೀಗ ಬಿದ್ದಿದೆ.
ಆದರೆ ಇದಕ್ಕೆ ”ಒನ್8 ಕಮ್ಯೂನ್” ತಂಡ ಹೇಳುವುದೇ ಬೇರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ”ಒನ್8 ಕಮ್ಯೂನ್” ಪ್ರಕಟಣೆ ಹೊರಡಿಸಿದೆ. ಸ್ಟೋರೆಂಟ್ ಮುಚ್ಚಲು ಮುಖ್ಯ ಕಾರಣ ಕಟ್ಟಡಕ್ಕೆ ಸಂಬಂಧಿಸಿದ ಕೆಲವು ಕಾನೂನು ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಪಾಲನೆಯ ಕೊರತೆ ಎಂದು ಹೇಳಿದೆ.
”ಒನ್8 ಕಮ್ಯೂನ್” ಸ್ಪಷ್ಟನೆ
ಬೆಂಗಳೂರಿನ ನಮ್ಮ ಔಟ್ಲೆಟ್ ಮುಚ್ಚಿರುವ ವಿಚಾರವಾಗಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲವು ತಪ್ಪು ಮಾಹಿತಿಗಳ ಬಗ್ಗೆ ನಾವು ಸ್ಪಷ್ಟನೆ ನೀಡಲು ಬಯಸುತ್ತೇವೆ.
ನಮ್ಮ ರೆಸ್ಟೋರೆಂಟ್ ಮುಚ್ಚಲು ಮುಖ್ಯ ಕಾರಣ ಕಟ್ಟಡಕ್ಕೆ ಸಂಬಂಧಿಸಿದ ಕೆಲವು ಕಾನೂನು ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಪಾಲನೆಯ ಕೊರತೆ. ಈ ನಿಯಮಗಳನ್ನು ಪಾಲಿಸುವುದು ಕಟ್ಟಡದ ಮಾಲೀಕರ ಜವಾಬ್ದಾರಿಯಾಗಿತ್ತು, ಆದರೆ ಅವರು ಅದನ್ನು ಸರಿಯಾಗಿ ನಿಭಾಯಿಸಲಿಲ್ಲ. ನಮಗೆ ಬರುವ ಗ್ರಾಹಕರ ಮತ್ತು ನಮ್ಮ ಸಿಬ್ಬಂದಿಯ ಸುರಕ್ಷತೆ ನಮಗೆ ಎಲ್ಲಕ್ಕಿಂತ ಮುಖ್ಯ. ಅದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
ಇನ್ನು, ನಾವು ಬಾಡಿಗೆ ಹಣ ಅಥವಾ ಯಾವುದೇ ಬಾಕಿ ಮೊತ್ತವನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮುಚ್ಚಲಾಗಿದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವಂತಿವೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ಈ ಜಾಗದಲ್ಲಿ ನಮ್ಮ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ.
ವಾಸ್ತವ ಸಂಗತಿಗಳನ್ನು ಸರಿಯಾಗಿ ಪ್ರಕಟಿಸುವಂತೆ ನಾವು ಮಾಧ್ಯಮಗಳಲ್ಲಿ ವಿನಂತಿಸುತ್ತೇವೆ. ನಮ್ಮ ಮೇಲೆ ನಂಬಿಕೆ ಇಟ್ಟಿರುವ ಗ್ರಾಹಕರಿಗೆ ಮತ್ತು ಪಾಲುದಾರರಿಗೆ ನಾವು ಯಾವಾಗಲೂ ಚಿರಋಣಿ.
ಹೀಗೆ ಸೋಶಿಯಲ್ ಮೀಡಿಯಾ ಮೂಲಕ ”ಒನ್8 ಕಮ್ಯೂನ್” ಸದ್ಯದ ವಿವಾದದ ಕುರಿತು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದ್ದು ಹಲವರು ಕಿಂಗ್ ಕೊಹ್ಲಿಯ ಪ್ರತಿಕ್ರಿಯೆಗೆ ಕಾದು ಕುಳಿತಿದ್ದಾರೆ.




