ಬೆಂಗಳೂರು ನಗರದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಚುನಾವಣೆ ಬಗ್ಗೆ ಹೈಕಮಾಂಡ್ ನಾಯಕರ ಭೇಟಿ: ಡಿ.ಕೆ. ಶಿವಕುಮಾರ್
ನವದೆಹಲಿ:ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಚುನಾವಣೆ ಬಗ್ಗೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು, ನಾನು ಕೆಪಿಸಿಸಿ ಅಧ್ಯಕ್ಷ. ನಾನು ನಮ್ಮ ಅಧ್ಯಕ್ಷರನ್ನು ಭೇಟಿ ಮಾಡದೇ ಬೇರೆ ಯಾರು ಭೇಟಿ ಮಾಡುತ್ತಾರೆ. ಪಕ್ಷ ನನಗೆ ಕೇರಳ, ಅಸ್ಸಾಂ ಹಾಗೂ ತಮಿಳುನಾಡು ಚುನಾವಣೆ ಪ್ರಚಾರದ ಜವಾಬ್ದಾರಿ ವಹಿಸಿತ್ತು. ನಾನು ಅಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದೆ, ರಾಹುಲ್ ಗಾಂಧಿ ಅವರ ಪ್ರಚಾರದಲ್ಲೂ ಭಾಗಿಯಾಗಿದ್ದೆ. ನಮ್ಮ ರಾಜ್ಯದಲ್ಲೂ ಉಪಚುನಾವಣೆ ನಡೆದಿದೆ. ಅಸ್ಸಾಂಗೆ ನಾನು ಕೊನೆ ದಿನ ಮತ್ತೊಮ್ಮೆ ಹೋಗಬೇಕಿದೆ.
ಕಟ್ಟಡ ಎತ್ತರ ನಿರ್ಬಂಧ, ಟಿಡಿಆರ್, ಪ್ರೀಮಿಯಂ ಎಫ್ಎಆರ್ ಬಗ್ಗೆ ಚರ್ಚೆ
ಕೇಂದ್ರ ಸಚಿವರ ಭೇಟಿ ಬಗ್ಗೆ ಕೇಳಿದಾಗ, “ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಜಾಗಗಳ ಅಗತ್ಯವಿದೆ. ಈ ವಿಚಾರವಾಗಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ಸ್ಕೈಡೆಕ್ ಯೋಜನೆಗೆ ರಕ್ಷಣಾ ವಿಮಾನ ನಿಲ್ದಾಣ ಹೆಚ್ಎಎಲ್ ನಿಂದ ಅಡ್ಡಿ ಎದುರಾಗಿತ್ತು. ಪ್ರೀಮಿಯಂ ಎಫ್ಎಆರ್ ವಿಚಾರವಾಗಿ ಚರ್ಚೆ ಮಾಡಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವವರು ಟಿಡಿಆರ್ ಹಾಗೂ ಎಫ್ಎ ಆರ್ ಪಡೆಯುವವರಿಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಇವರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಳೆದ ಬಾರಿ ದೆಹಲಿಗೆ ಬಂದಾಗ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆ” ಎಂದರು.
1,082 ನಗರಾಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಸಲ್ಲಿಕೆ
“ಕೇಂದ್ರ ನಾಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರು ಅರ್ಬನ್ ಚಾಲೆಂಜ್ ಫಂಡ್ ಮೂಲಕ ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದು, ನಮ್ಮ ರಾಜ್ಯದ ಎಲ್ಲಾ ನಗರಾಗಳಿಗೂ ಸೇರಿ ₹5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ. ಇದಕ್ಕೆ ಕೆಲವು ಮಾನದಂಡ ನಿಗದಿ ಮಾಡಿದ್ದು, ನಮ್ಮ ರಾಜ್ಯದಿಂದ 1,082 ಯೋಜನೆಗಳ ಪ್ರಸ್ತಾವನೆ ಅವರ ಮುಂದೆ ಇರಿಸಿದ್ದೇವೆ. 1.25 ಲಕ್ಷ ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಸುಮಾರು 32- 35 ಸಾವಿರ ಕೋಟಿ ಪಾಲು ನೀಡಬೇಕಿದೆ. ಹೀಗಾಗಿ 5 ಸಾವಿರ ಕೋಟಿಗಿಂತ ಹೆಚ್ಚಿನ ಹಣ ನೀಡಬೇಕು ಎಂದು ಕೇಳಿದ್ದೇನೆ. ಬೇರೆ ರಾಜ್ಯದವರು ಈ ಅನುದಾನ ಪಡೆಯದಿದ್ದರೆ ನಾವು ಪಡೆಯಲು ಸಿದ್ಧವಿದ್ದೇವೆ ಎಂದು ಹೇಳಿದ್ದೇನೆ. ಅವರು ನೋಡೋಣ ಎಂದಿದ್ದಾರೆ. ನಾನು, ರಹೀಮ್ ಖಾನ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದ್ದೇವೆ. ಹುಡ್ಕೋ ವತಿಯಿಂದ 50% ಸಾಲ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ 25% ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ 25% ವೆಚ್ಚ ಭರಿಸಬೇಕಿದೆ. ಈ ಅವಕಾಶ ಬಿಡಬಾರದು ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ” ಎಂದು ವಿವರಿಸಿದರು.



