No menu items!
22.4 C
Munich
Monday, August 17, 2026

ಕಾವೇರಿ ನೀರು ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ವಿಚಾರಣೆ ಒಂದು ವಾರ ಮುಂದೂಡಿದ ಸುಪ್ರೀಂ, CWMA ಆದೇಶ ಪಾಲಿಸುವಂತೆ ಸೂಚನೆ

Must read

ಕಾವೇರಿ ನೀರು ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ವಿಚಾರಣೆ ಒಂದು ವಾರ ಮುಂದೂಡಿದ ಸುಪ್ರೀಂ, CWMA ಆದೇಶ ಪಾಲಿಸುವಂತೆ ಸೂಚನೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿರುವ ಆದೇಶವನ್ನು ಮುಂದುವರಿಸಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನೀರು ಹಂಚಿಕೆ ವಿಚಾರ ಮತ್ತೆ ತೀವ್ರಗೊಂಡಿದೆ. CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದ್ದರೂ, ನಿರೀಕ್ಷಿತ ಪ್ರಮಾಣದ ನೀರು ತಮಿಳುನಾಡಿಗೆ ತಲುಪುತ್ತಿಲ್ಲ ಎಂದು ತಮಿಳುನಾಡು ನ್ಯಾಯಾಲಯದ ಗಮನಕ್ಕೆ ತಂದಿದೆ.
ಸದ್ಯ ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದುಬರುತ್ತಿದ್ದು, ಇದುವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಲಭಿಸಿದೆ. ಹೀಗಾಗಿ CWMA ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಪರ ವಕೀಲರು ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪರ ವಕೀಲರು, ಈಗಾಗಲೇ ಸುಮಾರು 3,500 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. CWMA ಆದೇಶ ಪಾಲಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಬಿಳಿಗುಂಡ್ಲು ಬಳಿ ಕಾವೇರಿ ನೀರಿನ ಹರಿವನ್ನು ಅಳೆಯಲಾಗುತ್ತದೆ. ಜಲಾಶಯಗಳಿಂದ ನೀರು ಬಿಟ್ಟ ಬಳಿಕ 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಬಿಳಿಗುಂಡ್ಲುವಿನಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಕೀಲರು ವಾದಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಇಂತಹ ಸಂದರ್ಭದಲ್ಲಿ ನಿರಂತರವಾಗಿ 12 ಸಾವಿರ ಕ್ಯೂಸೆಕ್ ನೀರು ಹರಿಸುವುದು ರಾಜ್ಯಕ್ಕೆ ಕಷ್ಟಕರವಾಗಿದೆ. ಆದರೂ CWMA ಆದೇಶವನ್ನು ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ವಿಚಾರಣೆ ವೇಳೆ ಕರ್ನಾಟಕದ ಪರವಾಗಿ ಮೇಕೆದಾಟು ಆಣೆಕಟ್ಟು ಯೋಜನೆಯ ಅಗತ್ಯತೆಯನ್ನೂ ಪ್ರಸ್ತಾಪಿಸಲಾಯಿತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿರುವ ಸಂದರ್ಭಗಳಲ್ಲಿ ಮೇಕೆದಾಟು ಯೋಜನೆಯು ನೀರು ನಿರ್ವಹಣೆಗೆ ನೆರವಾಗಬಹುದು ಎಂದು ಕರ್ನಾಟಕದ ಪರ ವಕೀಲರು ವಾದಿಸಿದರು.
ಆದರೆ, ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವನ್ನೂ ಕರ್ನಾಟಕದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಮುಂದುವರಿಸುವಂತೆ ತಿಳಿಸಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿದೆ.

- Advertisement -spot_img

More articles

- Advertisement -spot_img

Latest article