No menu items!
14.6 C
Munich
Sunday, April 26, 2026

ರಾಜ್‌ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಥಂಡಾ ಹೊಡೆದ ಚೇತನ್ ; ಕೊನೆಗೂ ಕ್ಷಮೆ ಕೇಳಿದ ನಟ

Must read

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.

ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ.ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ವಿವಾದಕ್ಕೆ ಕೂಡ ಮಾತನಾಡುವ ಮಾತುಗಳು ಕಾರಣವಾಗುತ್ತಿವೆ. ಇದಕ್ಕೆ ಆ ದಿನಗಳು ಖ್ಯಾತಿಯ ಚೇತನ್ ಅಹಿಂಸಾ ಆಡಿದ ಮಾತು ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ನಿನ್ನೆ ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರ ಜನ್ಮ ದಿನ ಇತ್ತು. ಈ ಹಿನ್ನೆಲೆ ಕೇವಲ ಕನ್ನಡಿಗರು ಮಾತ್ರ ಭಾಷೆಯ ಭೇದ ಭಾದ ಇಲ್ಲದೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಣ್ಣಾವ್ರ ಸ್ಮರಣೆ ಮಾಡುತ್ತಿದ್ದರು. ಹುಟ್ಟುಹಬ್ಬದ ಪ್ರಯುಕ್ತ ರಾಜ್ ಕೊಡುಗೆಯನ್ನು ಸ್ಮರಿಸುತ್ತಿದ್ದರು.

ಆದರೆ ಚೇತನ್ ಅವರದ್ದು ಮಾತ್ರ ಇದಕ್ಕೆ ತದ್ವಿರುದ್ದವಾದ ನಡೆ ಮತ್ತು ನುಡಿಯಾಗಿತ್ತು. ಡಾ.ರಾಜ್‌ಕುಮಾರ್ ಅವರ ಕೊಡುಗೆಯನ್ನು ಪ್ರಶ್ನೆ ಮಾಡಿದ್ದ ಚೇತನ ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ನಾನು ಗೌರವಿಸುತ್ತೇನೆ, ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್ ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಇಷ್ಟೇ ಅಲ್ಲ 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ಹೇಳಿದ್ದರು.

ಕನ್ನಡದ ಮಣ್ಣಿನಲ್ಲಿ ಡಾ.ರಾಜ್ ಕುಮಾರ್ ಕೇವಲ ಹೆಸರಲ್ಲ. ಅಸಂಖ್ಯಾತ-ಅಗಣಿತ ಜನರ ಆರಾಧ್ಯ ದೈವ. ಹೀಗಾಗಿಯೇ ಕೆರಳಿ ಕೆಂಡವಾದ ಜನ ಚೇತನ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಚೇತನ್ ವಿರುದ್ಧ ಧಿಕ್ಕಾರದ ಕೂಗನ್ನು ಕೂಗಿದರು. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ ಹೊರಗಡೆ ಕೂಡ ಆಕ್ರೋಶದ ಅಲೆ ಎದ್ದಿತ್ತು.

ಇದಕ್ಕೆ ಕೈಗನ್ನಡಿ ಎಂಬಂತೆ ಇಂದು (ಏಪ್ರಿಲ್ 25) ಸಂಜೆ ವೇಳೆಗೆ ಸಾರಾ ಗೋವಿಂದು, ಕರವೇ ಕಾರ್ಯಕರ್ತರು, ಇನ್ನೂ ಕೆಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರು, ರಾಜ್​ಕುಮಾರ್ ಅಭಿಮಾನಿ ಸಂಘದ ಸದಸ್ಯರು ರಾಜ್​ಕುಮಾರ್ ಅಭಿಮಾನಿಗಳು ಚೇತನ್ ಅಹಿಂಸ ಮನೆಗೆ ಮುತ್ತಿಗೆ ಹಾಕಿದರು. ಚೇತನ್ ಅಹಿಂಸ ಮನೆ ಎದುರು ಘೋಷಣೆಗಳನ್ನು ಕೂಗಿದರು.

ಕೊನೆಗೆ ಚೇತನ್ ಅಹಿಂಸ ಜೊತೆಗೆ ಹಲವು ಸಂಘಟನೆಗಳ ಮುಖಂಡರು ಮಾತನಾಡಿ, ತಮ್ಮ ಆಕ್ರೋಶ, ಅಸಾಮಾಧಾನವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ ಆ ನಂತರ ಬೇರೆ ದಾರಿ ಇಲ್ಲದೇ ಸದ್ಯ ಕೊನೆಗೂ ಬೇಷರತ್ ಕ್ಷಮೆ ಕೇಳಿದ್ದಾರೆ.

ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ, ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿರುವ ಚೇತನ್ ಕ್ಷಮೆ ಕೇಳಿದ್ದಾರೆ. ನಾನೂ ಸಹ ರಾಜ್​ಕುಮಾರ್ ಅವರ ಅಭಿಮಾನಿ. ಸಮಾಜದ ಜಾಗೃತಿ ಆಗಬೇಕು, ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು ಎಂದು ಹೇಳಿರುವ ಚೇತನ್ ನನ್ನ ಉದ್ದೇಶ ರಾಜ್​​ಕುಮಾರ್ ಅವರ ಕನಸಿನ ಚಿತ್ರರಂಗವನ್ನು ಕಟ್ಟಬೇಕು ಎಂದು ಹೇಳುವುದಾಗಿತ್ತು ಅಷ್ಟೇ ಎಂದು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article