No menu items!
18.8 C
Munich
Tuesday, August 18, 2026

ಕೆಪಿಎಸ್ಸಿ ಅಧ್ಯಕ್ಷರ ಅಮಾನತು ರದ್ದು: ಶಿವಶಂಕರಪ್ಪಗೆ ಹೈಕೋರ್ಟ್ ರಿಲೀಫ್

Must read

ಕೆಪಿಎಸ್ಸಿ ಅಧ್ಯಕ್ಷರ ಅಮಾನತು ರದ್ದು: ಶಿವಶಂಕರಪ್ಪಗೆ ಹೈಕೋರ್ಟ್ ರಿಲೀಫ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪ ಹಾಗೂ ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿರುವ ನಡುವೆಯೇ, ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಕೆಪಿಎಸ್ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಯಾವುದೇ ಸಲಹೆ ಅಥವಾ ಶಿಫಾರಸು ಮಾಡಿರಲಿಲ್ಲ. ಸಂವಿಧಾನಬದ್ಧವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನು ಅನುಸರಿಸಬೇಕಾಗುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಪಾಲಿಸದೆ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಶಿವಶಂಕರಪ್ಪ ಸಾಹುಕಾರ್ ಅವರನ್ನು ಮುಂದಿನ 7 ದಿನಗಳೊಳಗೆ ಕೆಪಿಎಸ್ಸಿ ಅಧ್ಯಕ್ಷರಾಗಿ ಮರುನೇಮಕ ಮಾಡುವಂತೆ ಆದೇಶಿಸಿದೆ.
ಆದರೆ, ಮರುನೇಮಕದ ಬಳಿಕವೂ ಕೆಲವು ನಿರ್ಬಂಧಗಳನ್ನು ಹೈಕೋರ್ಟ್ ವಿಧಿಸಿದೆ. ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಅಥವಾ ನಿರ್ಣಯಗಳಲ್ಲಿ ಶಿವಶಂಕರಪ್ಪ ಸಾಹುಕಾರ್ ಭಾಗಿಯಾಗಬಾರದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವನ್ನೂ ಕೈಗೊಳ್ಳಬಾರದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಸೂಚಿಸಿದೆ.
ಕೆಪಿಎಸ್ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳು ಸರಿ ಅಥವಾ ತಪ್ಪು ಎಂಬುದರ ಕುರಿತು ಹೈಕೋರ್ಟ್ ಯಾವುದೇ ತೀರ್ಪು ನೀಡಿಲ್ಲ ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಈ ಆದೇಶವು ಕೇವಲ ಅಮಾನತು ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳಿಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಯಾರ ಮೇಲೆಯೂ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಮಾನತು ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶವನ್ನು ರದ್ದುಪಡಿಸಲಾಗಿದೆ. ಆದರೆ ಕೆಪಿಎಸ್ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸಕ್ಷಮ ಪ್ರಾಧಿಕಾರವು ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ರಾಜ್ಯಪಾಲರು ಹೊರಡಿಸಿರುವ ಅಮಾನತು ಆದೇಶ ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು.

- Advertisement -spot_img

More articles

- Advertisement -spot_img

Latest article