No menu items!
16.3 C
Munich
Wednesday, April 29, 2026

ಕೊಳ್ಳೇಗಾಲ: 100 ಗ್ರಾಂ ಚಿನ್ನಕ್ಕೆ ರಣರಂಗವಾದ ಮದುವೆ ಮನೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ

Must read

ಮದುವೆ ಮನೆ ಅಂದರೆ ಅಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿರುತ್ತೆ. ಆ ಶಾಸ್ತ್ರ.. ಈ ಶಾಸ್ತ್ರ..ಎಂದು ಹಲವಾರು ಶಾಸ್ತ್ರಗಳು ನಡೆಯುತ್ತವೆ.
ಎರಡೂ ಕಡೆಯ ನೆಂಟರು, ಊರಿನವರು ಮದುವೆ ಸಮಾರಂಭದಲ್ಲಿ ಬಂದು ಭಾಗವಹಿಸಿ ಸಂಭ್ರಮ ಹೆಚ್ಚಿಸುತ್ತಾರೆ. ನವಜೋಡಿಗೆ ಬಂದು ಶುಭ ಹಾರೈಸುತ್ತಾರೆ.

ಇದೆಲ್ಲದರ ನಡುವೆ ಮದುಮಕ್ಕಳನ್ನು ಎಷ್ಟು ಸಾಧ್ಯವೋ ಅಷ್ಟು ಹತ್ತಿರದ ಸಂಬಂಧಿಗಳು ಗೋಳು ಹೊಯ್ದುಕೊಳ್ಳುತ್ತಾರೆ. ಇನ್ನು ಮದುವೆ ಮನೆ ಅಂದರೆ ಅಲ್ಲಿ ಚಿಕ್ಕ – ಪುಟ್ಟ ಲೋಪ ದೋಷ ಇರುತ್ತೆ. ವೈಮನಸ್ಸು ಮನೆ ಮಾಡಿರುತ್ತೆ. ಆದರೆ ಹಿಂದೆ ಏನೇ ಸಣ್ಣ ಪುಟ್ಟ ಜಗಳಗಳಾದರೂ ಕುಳಿತು ಚರ್ಚಿಸಿ ಮದುವೆ ನಿಲ್ಲದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.‌ ಬದಲಾದ ಈ‌ಕಾಲದಲ್ಲಿ ಮದುವೆ ಮನೆ ರಣರಂಗವಾಗುತ್ತಿದೆ. ಇದಕ್ಕೆ ಕೊಳ್ಳೇಗಾಲದಲ್ಲಿ ನಡೆದ ಘಟನೆಯೇ ಸದ್ಯದ ಉದಾಹರಣೆ

ಹೌದು, ಎಲ್ಲವೂ ಅಂದುಕೊಂಡತೆ ಆಗಿದ್ದರೆ  ಕೊಳ್ಳೇಗಾಲದ ಆರ್.ಎಸ್. ಫಂಕ್ಷನ್ ಹಾಲ್‌ನಲ್ಲಿ. ಮುದಾಸಿರ್ ಮತ್ತು ಗುಲ್ನಾಜ್ ಭಾನು ನಡುವೆ ಬುಧವಾರ (ಏಪ್ರಿಲ್ 29)  ಮದುವೆ ನಡೆಯಬೇಕಿತ್ತು. ಎಲ್ಲಾ ಸಿದ್ಧತೆಗಳೂ ಮುಗಿದಿದ್ದವು. ಆದರೆ ಮುದಾಸಿರ್ ಮನೆಯವರು  ಕಾರ್ಯಕ್ರಮಕ್ಕೆ ಒಂದೂವರೆ ಗಂಟೆ ಲೇಟಾಗಿ ಬಂದರು. ಇಲ್ಲಿಂದ ಹೊತ್ತಿದ ಕಿಡಿ ಇಡೀ ಮದುವೆ ಮನೆಯನ್ನೇ ರಣಾಂಗಣವನ್ನಾಗಿಸಿದೆ.

ವರನ ಕಡೆಯವರು  ಲೇಟಾಗಿ ಬಂದಿದ್ದಕ್ಕೆ ವಧುವಿನ ಮನೆಯವರು ಕೆಂಡಾಮಂಡಲವಾಗಿದ್ದರು. ಇದೇ ಹೊತ್ತಲ್ಲಿ ಅಸಲಿ ‘ಬಂಗಾರದ’ ಬಾಂಬ್ ಸಿಡಿದಿದೆ. ಹೆಣ್ಣಿನ ಕಡೆಯವರು 100 ಗ್ರಾಂ ಚಿನ್ನ ಬೇಕು ಅಂತ ಮೊದಲೇ ಡಿಮ್ಯಾಂಡ್ ಮಾಡಿದ್ದರು.  ಆದರೆ ವರನ ಮನೆಯವರು ತಂದಿದ್ದು ಕೇವಲ 30 ಗ್ರಾಂ ಚಿನ್ನ ಮಾತ್ರ.  ಕೇಳಿದಷ್ಟು ಬಂಗಾರ ಕೊಡದಿದ್ರೆ ಮದುವೆಯೇ ಬೇಡ ಅಂತ ವಧುವಿನ ಕಡೆಯವರು ಹಠ ಹಿಡಿದು ಕೂತರು. ಅಲ್ಲಿಗೆ ಸಂಭ್ರಮ ಇರಬೇಕಿದ್ದ ಜಾಗದಲ್ಲಿ ವಾಗ್ವಾದ ಶುರುವಾಯ್ತು. 

ಬುಧವಾರ ಮುಂಜಾನೆ ರಾಜಿ ಮಾಡಿಕೊಳ್ಳೋಣ ಅಂತ ವರನ ಪರವಾಗಿ ಮೊಹಮ್ಮದ್ ಕೈಸರ್ ಎಂಬುವವರು ಮಾತುಕತೆಗೆ ಹೋಗಿದ್ದಾರೆ. ಆದರೆ ಅಲ್ಲಿ ರಾಜಿ ನಡೆಯುವ ಬದಲು ರಕ್ತಪಾತವೇ ನಡೆದುಹೋಗಿದೆ. ತಮಿಳುನಾಡಿನಿಂದ ಬಂದಿದ್ದ ವಧುವಿನ ಸಂಬಂಧಿಕರು ರೊಚ್ಚಿಗೆದ್ದು ಕೈಸರ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಯಾವ ಮಟ್ಟಕ್ಕೆ ಅಂದ್ರೆ, ಕೈಸರ್ ಅವರ ಮರ್ಮಾಂಗಕ್ಕೆ ಒದ್ದು, ಚಾಕುವಿನಿಂದ ಇರಿದು ಮೃಗೀಯವಾಗಿ ವರ್ತಿಸಿದ್ದಾರೆ. ಮದುವೆ ಮನೆ ನೋಡನೋಡುತ್ತಿದ್ದಂತೆ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.

ಜಗಳ ವಿಕೋಪಕ್ಕೆ ಹೋದಂತೆ ಎರಡು ಕಡೆಯವರು ಚಾಕು, ಕೈಗೆ ಸಿಕ್ಕಿದ್ದನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ. ವರನ ಕಡೆಯ ಸಮೀರ್ ಅಯಾಜ್, ಶೋಯೆಬ್ ಮತ್ತು ವಧುವಿನ ಕಡೆಯ ಫೈರೋಜ್ ಖಾನ್, ಅಬ್ದುಲ್ ವಾಹೀದ್ ಹಾಗೂ ಅಬ್ದುಲ್ ಆರೀಫ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ನೋಡಿ ಮದುವೆಗೆ ಬಂದಿದ್ದ ಅತಿಥಿಗಳೆಲ್ಲಾ ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

ಸದ್ಯ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆ ಮತ್ತು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಮದುವೆ ಮಂಟಪದಲ್ಲಿ ವಧುವಿನ ಬಳೆಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಈಗ ಅರ್ಧಕ್ಕೆ ಮುರಿದು ಬಿದ್ದಿದೆ. ಕಲ್ಯಾಣ ಮಂಟಪ ಮಾತ್ರ ಈಗ ಬಿಕೋ ಅಂತಿದೆ. ಹೆಣ್ಣು ಹೆತ್ತವರು ಬಂಗಾರ ಕೊಡೋಕೆ ಆಗದೆ ಒದ್ದಾಡ್ತಿರೋ ಈ ಕಾಲದಲ್ಲಿ, ಕೇವಲ 70 ಗ್ರಾಂ ಚಿನ್ನದ ವ್ಯತ್ಯಾಸಕ್ಕೆ ಮದುವೆ ಮನೆಯಲ್ಲಿ ಇಷ್ಟೊಂದು ರಕ್ತ ಹರಿಸಿರುವುದು ನಿಜಕ್ಕೂ ಆಘಾತಕಾರಿ.

ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈಗ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಈ ಘಟನೆ ಚಾಮರಾಜನಗರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಒಟ್ನಲ್ಲಿ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅಂತಾರೆ, ಆದರೆ ಈ ಮದುವೆ ಮಾತ್ರ ಮರ್ಮಾಂಗಕ್ಕೆ ಏಟು ಬಿದ್ದು ಚಾಕು ಇರಿತದ ಮೂಲಕ ಪೊಲೀಸ್ ಸ್ಟೇಷನ್‌ನಲ್ಲಿ ಅಂತ್ಯವಾಗಿದೆ.

- Advertisement -spot_img

More articles

- Advertisement -spot_img

Latest article