No menu items!
12.5 C
Munich
Monday, May 4, 2026

ಬ್ರಿಟಿಷರ ಮುಂದೆ 5 ಬಾರಿ ಕ್ಷಮೆ ಕೇಳಿದ್ದು ಸತ್ಯ ; ಸಾವರ್ಕರ್ ಬಗ್ಗೆ ಮರಿಮೊಮ್ಮಗನಿಂದಲೇ ಶಾಕಿಂಗ್ ಹೇಳಿಕೆ

Must read

ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ಹಲವರು ತ್ಯಾಗ ಮಾಡಿದ್ದಾರೆ. ಬಲಿದಾನ ನೀಡಿದ್ದಾರೆ. ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರು,ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಭಗತ್ ಸಿಂಗ್, ನಮ್ಮ ರಾಣಿ ಚೆನ್ನಮ್ಮ, ಚಂದ್ರಶೇಖರ್ ಆಜಾದ್, ಹೀಗೆ ಹಲವರು ತಮ್ಮ ರಕ್ತ, ಬೆವರು ಮತ್ತು ಕಣ್ಣೀರನ್ನು ಸುರಿಸಿದ್ದಾರೆ.

ಆ ಪೈಕಿ ವೀರ್ ಸಾವರ್ಕರ್ ಕೂಡ ಒಬ್ಬರು ಎನ್ನುವ ವಾದವನ್ನು ಬಲಪಂಥೀಯರು ಅನಾದಿಕಾಲದಿಂದ ಮಾಡುತ್ತಲೇ ಬಂದಿದ್ದಾರೆ. ಅಂಡಮಾನ್‌ನ ಕಾಲಾಪಾನಿ ಜೈಲಿನಲ್ಲಿ ಸಾವರ್ಕರ್ ಅನುಭವಿಸಿದ್ದ ನರಕಯಾತನೆಯನ್ನು ಕೂಡ ಉದಾಹರಣೆಯನ್ನಾಗಿ ನೀಡುತ್ತಾ ಬಂದಿದ್ದಾರೆ. ಆದರೆ ಎಡಪಂಥೀಯರು ಈ ಮಾತನ್ನು ಒಪ್ಪಲು ಸುತಾರಾಂ ತಯಾರಿಲ್ಲ. ಬದಲಿಗೆ ಬ್ರಿಟಿಷರ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ‘ಹೇಡಿ’ ಅಂತಲೇ ಟೀಕಿಸುತ್ತಾ ಬಂದಿದೆ.

ದಶಕಗಳಿಂದ ಸಾವರ್ಕರ್ ಅವರ ಕ್ಷಮಾಪಣಾ ಪತ್ರದ ವಿಚಾರ ರಾಜಕೀಯ ಅಖಾಡದಲ್ಲಿ ಕಿಡಿ ಹೊತ್ತಿಸುತ್ತಲೇ ಇದೆ. ಹೀಗಿರುವಾಗ ಇದೀಗ ಸಾವರ್ಕರ್ ಅವರ ಮರಿ ಮೊಮ್ಮಗನೇ ಬ್ರಿಟಿಷರ ಮುಂದೆ ಐದು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಾವರ್ಕರ್ ಸಲ್ಲಿಸಿದ್ದರು ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಹೌದು, ಅಸಲಿಗೆ ಲಂಡನ್ ಭೇಟಿಯ ಸಂದರ್ಭದಲ್ಲಿ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮೊಮ್ಮಗ ಸತ್ಯಕಿ ಸಾವರ್ಕರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದ ವಿಚಾರಣೆ ಪುಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಸಾವರ್ಕರ್ ಮರಿಮೊಮ್ಮಗ ಸತ್ಯಕಿ ಸಾವರ್ಕರ್ ಐದು ಬಾರಿ ಕ್ಷಮೆ ಕೇಳಿದ್ದು ಸತ್ಯ ಎಂದು ಹೇಳಿದ್ದಾರೆ. ಕೇವಲ ಸಾವರ್ಕರ್ ಮಾತ್ರ ಅಲ್ಲ. ಅಲ್ಲಿದ್ದ ಬೇರೆಯವರು ಕೂಡ ಬ್ರಿಟಿಷ್ ಸರ್ಕಾರಕ್ಕೆ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದರು ಎಂದಿದ್ದಾರೆ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ದೇಶಾದ್ಯಂತ ಸದ್ಯ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಾವರ್ಕರ್ ಅವರನ್ನು ವೀರ ಸಾವರ್ಕರ್ ಅಂತ ಆರಾಧಿಸುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ಇನ್ನು ಸತ್ಯಕಿ ಸಾವರ್ಕರ್ ಕೇವಲ ಕ್ಷಮಾಪಣಾ ಪತ್ರದ ಬಗ್ಗೆ ಮಾತ್ರ ಮಾತನಾಡಿಲ್ಲ. ಬದಲಿಗೆ ಗೋವನ್ನು ಸಾವರ್ಕರ್ ಯಾವತ್ತು ದೇವರಂತೆ ಪೂಜಿಸುತ್ತಿರಲಿಲ್ಲ, ಬದಲಿಗೆ ಅದನ್ನೊಂದು ಉಪಯುಕ್ತ ಪ್ರಾಣಿಯಂತೆ ನೋಡುತ್ತಿದ್ದರು ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಸಾವರ್ಕರ್ ಅವರ ವೈಜ್ಞಾನಿಕ ಮನೋಭಾವದ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಹಿನ್ನೆಲೆ ಗೋವಿನ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಸಾವರ್ಕರ್ ಅವರ ಈ ನಿಲುವೇ ಈಗ ಉಲ್ಟಾ ಹೊಡೆದಂತಾಗಿದೆ.

ಇದಲ್ಲದೇ ಸಾವರ್ಕರ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸೇನೆಗೆ ಸೇರುವಂತೆ ಯುವಕರಿಗೆ ಕರೆ ನೀಡಿದ್ದರು. ಇದರ ಹಿಂದೆ ಒಂದು ದೂರದೃಷ್ಟಿ ಇತ್ತು ಅಂತಲೂ ಸತ್ಯಕಿ ಸಮರ್ಥಿಸಿಕೊಂಡಿದ್ದಾರೆ. ಯುವಕರಿಗೆ ಸೈನ್ಯದಲ್ಲಿ ತರಬೇತಿ ಸಿಗಲಿ, ಮುಂದೆ ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ತರಬೇತಿ ಪಡೆದ ಸೈನ್ಯ ಇರಲಿ ಎಂಬ ಉದ್ದೇಶ ಅವರದ್ದಾಗಿತ್ತು ಎಂದು ಹೇಳಿದ್ದಾರೆ. ಆದರೆ, ಈ ಕ್ಷಮಾಪಣೆ ವಿಚಾರ ಮಾತ್ರ ಈಗ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಖಡಕ್ ಪೋಸ್ಟ್ ಹಾಕಿದ್ದಾರೆ. “ಸಾವರ್ಕರ್ ವೀರನೂ ಅಲ್ಲ, ಶೂರನೂ ಅಲ್ಲ ಅನ್ನೋದನ್ನ ಸ್ವತಃ ಅವರ ಕುಟುಂಬಸ್ಥರೇ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಮತ್ತು ವಾಟ್ಸಪ್ ಯೂನಿವರ್ಸಿಟಿಯ ಭಕ್ತರು ಸತ್ಯವನ್ನ ಅರ್ಥ ಮಾಡಿಕೊಳ್ಳಲಿ. ಇತಿಹಾಸವನ್ನು ತಿರುಚುವ ಕೈಗಳು ಯಾವಾಗಲೂ ನಡುಗುತ್ತಿರುತ್ತವೆ” ಅಂತ ಲೇವಡಿ ಮಾಡಿದ್ದಾರೆ. ಸಾವರ್ಕರ್ ಮುಖವಾಡದ ಜೊತೆ ಬಿಜೆಪಿಯ ಅಸಲಿ ಬಣ್ಣವೂ ಬಯಲಾಗಿದೆ ಅಂತ ಅವರು ಕಿಡಿಕಾರಿದ್ದಾರೆ.

ಸಾವರ್ಕರ್ ಅವರು ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು (Two Nation Theory) ಮುಂದಿಟ್ಟರು ಎಂಬ ಆರೋಪಕ್ಕೂ ಸತ್ಯಕಿ ಸ್ಪಷ್ಟನೆ ನೀಡಿದ್ದಾರೆ. ಆ ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದ್ದು ಸರ್ ಸಯ್ಯದ್ ಅಹ್ಮದ್ ಖಾನ್, ಸಾವರ್ಕರ್ ಅವರು ಕೇವಲ ಅದರ ಬಗ್ಗೆ ಚರ್ಚಿಸಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲ, ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ನ್ಯಾಯಾಲಯ ಈಗಾಗಲೇ ನಿರ್ದೋಷಿ ಎಂದು ಬಿಡುಗಡೆ ಮಾಡಿದೆ ಎಂದು ಕೂಡ ಹೇಳಿದ್ದಾರೆ.

ಒಟ್ಟಿನಲ್ಲಿ, ಸಾವರ್ಕರ್ ವಿಚಾರವಾಗಿ ದಶಕಗಳಿಂದ ನಡೆಯುತ್ತಿದ್ದ ಸತ್ಯ-ಅಸತ್ಯಗಳ ಹೋರಾಟಕ್ಕೆ ಈಗ ಮಹತ್ತರ ತಿರುವು ಸಿಕ್ಕಿದ್ದು, ಸ್ವತಃ ಅವರ ಮರಿಮೊಮ್ಮಗ ನ್ಯಾಯಾಲಯದಲ್ಲಿ ಉತ್ತರ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಿಚಾರ ರಾಜಕೀಯ ಅಖಾಡದಲ್ಲಿ ಇನ್ನೂ ಎಷ್ಟು ಕಿಡಿ ಹೊತ್ತಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article