No menu items!
13.8 C
Munich
Wednesday, May 6, 2026

IPL 2026 Final: ಬೆಂಗಳೂರಿನಿಂದ ಐಪಿಎಲ್‌ ಫೈನಲ್ ಪಂದ್ಯ ಶಿಫ್ಟ್? ಶಾಸಕರ ಟಿಕೆಟ್ ಬೇಡಿಕೆಗೆ ಬೇಸತ್ತ ಬಿಸಿಸಿಐ?

Must read

”ಈ ಸಲ ಕಪ್ ನಮ್ದೇ” ಎನ್ನುವ ಮಾತು ಐಪಿಎಲ್ ಶುರುವಾದ ಬೆನ್ನಲ್ಲೇ ಪ್ರತಿ ವರ್ಷ ಕೇಳಿ ಬರುತ್ತೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನದ ಜಾತ್ರೆಯೇ ನಡೆಯುತ್ತೆ. ಇನ್ನೂ ಫೈನಲ್ ಪಂದ್ಯ ಬೆಂಗಳೂರಿನಲ್ಲಿದ್ದರೆ.. ಬೆಂಗಳೂರು ತಂಡ ಮೈದಾನದಲ್ಲಿದ್ದರೆ.. ಕೇಳಬೇಕಾ. ಅಭಿಮಾನದ ಮಹಾಪೂರವೇ ಸ್ಟೇಡಿಯಂನತ್ತ ಹರಿದು ಬರುತ್ತೆ. ಆದರೆ.. ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನೋಡೋ ಯೋಗ ಇಲ್ಲದಂತೆ ಕಾಣುತ್ತಿದೆ.

ಹೌದು, ಅಸಲಿಗೆ ನಿಯಮದ ಪ್ರಕಾರ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದ ತವರು ಮೈದಾನ ಬೆಂಗಳೂರಿನಲ್ಲೇ ಐಪಿಎಲ್ 2026ರ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ, ಈಗ ಬಿಸಿಸಿಐ ಬೆಂಗಳೂರಿನಿಂದ ಫೈನಲ್ ಪಂದ್ಯವನ್ನು ಶಿಫ್ಟ್ ಮಾಡಲು ಗಂಭೀರವಾಗಿ ಚಿಂತನೆ ನಡೆಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿಪರ್ಯಾಸ ಅಂದರೆ ಇದಕ್ಕೆ ಕ್ರೀಡಾಭಿಮಾನಿಗಳ ಹುಚ್ಚು ಅಭಿಮಾನ ಕಾರಣ ಅಲ್ಲ. ಕಾಲ್ತುಳಿತದ ಭಯವೂ ಅಲ್ಲ. ಬದಲಿಗೆ ನಮ್ಮ ರಾಜಕಾರಣಿಗಳ ಉಚಿತ ಟಿಕೆಟ್ ಭಾಗ್ಯ ಯೋಜನೆ.

ನಂಬಲು ಕಷ್ಟ ಆದರೂ ಈ ಮಾತು ನಂಬಲೇಬೇಕು ಎಂಬಂತೆ ಕೆಲ ವರದಿಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಆ ಪ್ರಕಾರ ನೋಡುವುದಾದರೆ ಪಂದ್ಯದ ಟಿಕೆಟ್ ಹಂಚಿಕೆ ಮಾಡುವುದು ಆಯಾಯ ಫ್ರಾಂಚೈಸಿಗಳ ಹಕ್ಕು. ಆದರೆ ಬೆಂಗಳೂರಿನಲ್ಲಿ ಶಾಸಕರಿಗೆ ಕಡ್ಡಾಯವಾಗಿ ಟಿಕೆಟ್ ನೀಡಬೇಕು ಅನ್ನೋ ಒತ್ತಡ ಹೆಚ್ಚಿರುವುದು ಬಿಸಿಸಿಐಗೆ ಇಷ್ಟವಾಗಿಲ್ಲ.

ಇನ್ನು ಟಿಕೆಟ್ ಕೊಡದಿದ್ದರೆ ಭದ್ರತೆ ಮತ್ತು ಇತರೆ ಅನುಮತಿ ನೀಡಲು ಸರ್ಕಾರ ತೊಂದರೆ ಕೊಡಬಹುದು ಅನ್ನೋ ಭಯ ಫ್ರಾಂಚೈಸಿಗಳಿಗೂ ಇದೆ. ಈ ರಾಜಕೀಯ ಕಿರಿಕಿರಿಗಿಂತ ಪಂದ್ಯವನ್ನು ಬೇರೆ ಕಡೆಗೆ ವರ್ಗಾಯಿಸುವುದೇ ಲೇಸು ಅನ್ನೋ ತೀರ್ಮಾನಕ್ಕೆ ಬಿಸಿಸಿಐ ಬಂದಂತಿದೆ.

ಇನ್ನು ಇದು ಮಾತ್ರವಲ್ಲದೇ ಬೆಂಗಳೂರಿನಿಂದ ಫೈನಲ್ ಶಿಫ್ಟ್ ಮಾಡಲು ‘ಸೀಟಿಂಗ್ ಕೆಪಾಸಿಟಿ’ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇರೋದು ಬರೀ 32 ಸಾವಿರ ಆಸನಗಳು ಮಾತ್ರ. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಕೂರಬಹುದು.

ಫೈನಲ್‌ನಂತಹ ಹೈ-ವೋಲ್ಟೇಜ್ ಪಂದ್ಯಕ್ಕೆ ಅಸಂಖ್ಯಾತ ಜನ ಸೇರಿದರೆ ಹೆಚ್ಚಿನ ಆದಾಯ ಬರುತ್ತೆ ಎಂಬ ಲೆಕ್ಕಾಚಾರ ಕೂಡ ಇಲ್ಲಿ ಕಾಣಿಸುತ್ತಿದೆ. ಶಾಸಕರ ಟಿಕೆಟ್ ಕಿರಿಕಿರಿ ನಡುವೆ ಇಷ್ಟು ಕಡಿಮೆ ಸೀಟುಗಳಿರೋ ಮೈದಾನದಲ್ಲಿ ಫೈನಲ್ ಆಯೋಜಿಸುವುದು ಲಾಭದಾಯಕವಲ್ಲ ಎಂಬುದು ಮಂಡಳಿಯ ಆಲೋಚನೆ

ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎ (KSCA) ಮಂಡಳಿ ಇತ್ತೀಚಿನ ಐದು ಪಂದ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಆಯೋಜಿಸಿತ್ತು. ಹಿಂದೆ ನಡೆದ ಕಾಲ್ತುಳಿತದ ಘಟನೆಗಳ ನಂತರ ಮೈದಾನದ ಶಿಸ್ತು ಕಾಪಾಡಲು ಅವರು ಅವಿರತ ಪ್ರಯತ್ನ ನಡೆಸಿದ್ದರು. ಆದರೆ, ಕ್ರೀಡಾ ಸಂಸ್ಥೆಯ ಶ್ರಮಕ್ಕೆ ಈಗ ರಾಜಕಾರಣಿಗಳ ಉಚಿತ ಟಿಕೆಟ್ ಹಪಾಹಪಿ ತಣ್ಣೀರು ಎರಚುವಂತೆ ಕಾಣುತ್ತಿದೆ.

ಈ ವಿವಾದ ಬಗೆಹರಿಯದಿದ್ದರೆ ಬೆಂಗಳೂರಿನ ಫ್ಯಾನ್ಸ್‌ಗೆ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಮಾತ್ರ ಸಿಗಬಹುದು, ಆದರೆ ಫೈನಲ್ ಪಂದ್ಯ ಮಾತ್ರ ಕೈ ತಪ್ಪುವುದು ಗ್ಯಾರಂಟಿ.

ಒಟ್ಟಿನಲ್ಲಿ, ರಾಜಕಾರಣಿಗಳ ಈ ಉಚಿತ ಟಿಕೆಟ್ ದಾಹದಿಂದಾಗಿ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ಫೈನಲ್ ಸಂಭ್ರಮದಿಂದ ವಂಚಿತರಾಗುತ್ತಿದ್ದಾರೆ. ಬಿಸಿಸಿಐ ಶೀಘ್ರದಲ್ಲೇ ಪ್ಲೇಆಫ್ ಮತ್ತು ಫೈನಲ್ ಸ್ಥಳಗಳನ್ನು ಘೋಷಿಸಲಿದ್ದು, ಬೆಂಗಳೂರಿನ ಕ್ರಿಕೆಟ್ ಕ್ರೇಜ್‌ಗೆ ರಾಜಕೀಯದ ಗ್ರಹಣ ಹಿಡಿದಿರೋದಂತೂ ಸತ್ಯ.

- Advertisement -spot_img

More articles

- Advertisement -spot_img

Latest article