No menu items!
16.3 C
Munich
Tuesday, May 5, 2026

ನಾನು ರಾಜೀನಾಮೆ ಕೊಡಲ್ಲ ಅಂದರೆ ಕೊಡಲ್ಲ-ಮಮತಾ ಬ್ಯಾನರ್ಜಿ ಹೊಸ ವರಸೆ

Must read

ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತಿದೆ. ಈ ಮಾತು ಪಶ್ಚಿಮ ಬಂಬಾಳದ ದೀದಿ ಮಮತಾ ಬ್ಯಾನರ್ಜಿಗೆ ಸರಿಯಾಗಿ ಹೋಲುತ್ತೆ ಎನ್ನುವ ಮಾತು ಸದ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಯಾಕೆಂದರೆ ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ.

ಹೌದು, ಅಸಲಿಗೆ ಚುನಾವಣೆಯಲ್ಲಿ ಸೋತ ಮೇಲೆ, ಜನಾದೇಶಕ್ಕೆ ತಲೆ ಬಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸಂಪ್ರದಾಯ, ಆದರೆ ‘ಬಂಗಾಳದ ಹುಲಿ’ ಮಮತಾ ಬ್ಯಾನರ್ಜಿ ಮಾತ್ರ ಈ ಬಾರಿ ಸಾರಾಸಗಟಾಗಿ ಬಂಡಾಯವೆದ್ದಿದ್ದಾರೆ. ನಾನು ರಾಜೀನಾಮೆ ಕೊಡಲ್ಲ, ರಾಜಭವನಕ್ಕೂ ಹೋಗಲ್ಲ ಎಂದು ಘರ್ಜಿಸಿದ್ದಾರೆ. ಈ ಮೂಲಕ ದೀದಿ ಈಗ ಇಡೀ ದೇಶದ ಗಮನ ಸೆಳೆದಿದ್ದಾರೆ. ಸೋಲಿನ ಬೆನ್ನಲ್ಲೇ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿರುವ ಅವರ ಈ ನಡೆ, ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿದೆ.

ದೀದಿಯ ಈ ಆಕ್ರೋಶಕ್ಕೆ ಪ್ರಮುಖ ಕಾರಣ ಲೂಟಿ ಆರೋಪ. ಇದು ಜನರ ತೀರ್ಪಲ್ಲ, ಬದಲಿಗೆ ಷಡ್ಯಂತ್ರ ಮತ್ತು ಪಿತೂರಿಯ ಪರಿಣಾಮ ಬಂದ ಫಲಿತಾಂಶ ಎಂದು ಮಮತಾ ಬಾಂಬ್ ಸಿಡಿಸಿದ್ದಾರೆ. ಸುಮಾರು 100 ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಸೇರಿ ಮ್ಯಾಚ್ ಫಿಕ್ಸಿಂಗ್ ನಡೆಸಿವೆ, ಮತ ಎಣಿಕೆಯಲ್ಲಿ ಅಕ್ರಮ ಎಸಗಿ ಗೆಲುವನ್ನು ಕಸಿದುಕೊಳ್ಳಲಾಗಿದೆ ಎಂಬ ವಾದ ಮಂಡಿಸಿರುವ ಮಮತಾ ಬ್ಯಾನರ್ಜಿ, ನಾನು ಸೋತಿದ್ದರೆ ಖಂಡಿತಾ ರಾಜೀನಾಮೆ ಕೊಡುತ್ತಿದ್ದೆ, ಆದರೆ ನನ್ನನ್ನು ಕುತಂತ್ರದಿಂದ-ಮೋಸದಿಂದ ಸೋಲಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಹಲ್ಲೆಯ ಆರೋಪಗಳು ಅಕ್ಷರಶಃ ಬೆಚ್ಚಿಬೀಳಿಸುವಂತಿವೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಆಫ್ ಮಾಡಿ ನನ್ನ ಮೇಲೆ ಹಲ್ಲೆ ಮಾಡಲಾಯಿತು. ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದರು, ಒಬ್ಬ ಮಹಿಳೆ ಅಂತಲೂ ನೋಡದೆ ಎಣಿಕೆ ಕೇಂದ್ರದಿಂದ ಹೊರಗೆ ತಳ್ಳಿದರು ಎಂದು ನೋವು ತೋಡಿಕೊಂಡಿದ್ದಾರೆ ಮಮತಾ ಬ್ಯಾನರ್ಜಿ.

ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ವರ್ತಿಸಿದೆ ಮತ್ತು ಕೇಂದ್ರ ಪಡೆಗಳು ದೌರ್ಜನ್ಯ ಎಸಗಿವೆ ಎಂದು ಆರೋಪವನ್ನು ಮಾಡಿರುವ ಮಮತಾ ಬ್ಯಾನರ್ಜಿ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೇ ನೋಡಿದರೆ ನೈತಿಕವಾಗಿ ನಾನೇ ಗೆದ್ದಿದ್ದು ಎಂದು ಕೂಡ ಹೇಳಿರುವ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ವಿರುದ್ಧ ಕೂಡ ಹಲವು ಆರೋಪ ಮಾಡಿದ್ದಾರೆ. ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಳಿಸಿರುವುದು ಮತ್ತು ಎಣಿಕೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಿರುವುದು ಬಿಜೆಪಿಯ ಕುತಂತ್ರದ ಭಾಗ ಎಂದಿರುವ ಮಮತಾ ಬ್ಯಾನರ್ಜಿ, ನಾನು ಈ ಹಿಂದೆಯೂ ಬೀದಿಗಳಲ್ಲಿಯೇ ಇದ್ದೆ ಮುಂದೆಯೂ ಬೀದಿಗಳಲ್ಲಿ ಇದ್ದು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿಯ ದೌರ್ಜನ್ಯವನ್ನು ನಾನು ಸುಮ್ಮನೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಮತ್ತೊಂದೆಡೆ, ತಮ್ಮದೇ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತು ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಭೀತಿಯನ್ನು ಮೂಡಿಸಿದೆ. ಮೇ 7ಕ್ಕೆ ವಿಧಾನಸಭೆಯ ಅವಧಿ ಮುಗಿಯಲಿದ್ದು, ಬಿಜೆಪಿಗೆ ಅಧಿಕಾರ ಹಿಡಿಯಲು ಕೇವಲ ಎರಡೇ ದಿನ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ದೀದಿ ಅವರ ಈ ಹಠಮಾರಿ ಧೋರಣೆ ಯಾವ ತಿರುವು ಪಡೆಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

- Advertisement -spot_img

More articles

- Advertisement -spot_img

Latest article