No menu items!
14.1 C
Munich
Monday, May 11, 2026

ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ‘ದ್ವಿಭಾಷಾ’ ಕ್ರಾಂತಿ ; ವರ್ಷದೊಳಗೆ ಶೇ.100ರಷ್ಟು ಶಾಲೆಗೆ ವಿಸ್ತರಿಸುವ ಗುರಿ

Must read

ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಹೊಸ ಆಶಾಕಿರಣವೊಂದು ಮೂಡಿದೆ. ಹಳ್ಳಿ ಮಕ್ಕಳು ಇಂಗ್ಲಿಷ್‌ನಲ್ಲಿ ಹಿಂದಿದ್ದಾರೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ರಾಜ್ಯ ಶಿಕ್ಷಣ ಇಲಾಖೆ ಈಗ ಭರ್ಜರಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.

ಹೌದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ‘ದ್ವಿಭಾಷಾ ನೀತಿ’ಯನ್ನು (Bilingual Education) ಇಡೀ ರಾಜ್ಯಕ್ಕೆ ವಿಸ್ತರಿಸಲು ಸರ್ಕಾರ ಸಜ್ಜಾಗಿದೆ. ಈ ಮೂಲಕ ಬಡ ಮಕ್ಕಳೂ ಕೂಡ ಹೈಫೈ ಪ್ರೈವೇಟ್ ಸ್ಕೂಲ್ ಮಕ್ಕಳಂತೆ ಕನ್ನಡದ ಜೊತೆಜೊತೆಗೆ ಇಂಗ್ಲಿಷ್‌ನಲ್ಲೂ ಪಳಗಲಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಕ್ರಾಂತಿಕಾರಿ ನಿರ್ಧಾರವನ್ನು ಘೋಷಿಸಿದ್ದಾರೆ. ಈಗಾಗಲೇ ರಾಜ್ಯದ ಶೇ. 50 ರಷ್ಟು ಶಾಲೆಗಳಲ್ಲಿ ಈ ದ್ವಿಭಾಷಾ ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದಿನ 2026-27ನೇ ಶೈಕ್ಷಣಿಕ ವರ್ಷದೊಳಗೆ ರಾಜ್ಯದ 100% ಶಾಲೆಗಳಲ್ಲಿ ಇದನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಭಾನುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇಂಗ್ಲಿಷ್ ಅನ್ನೋದು ಕೇವಲ ಒಂದು ಭಾಷೆಯಲ್ಲ, ಅದು ಇವತ್ತಿನ ಕಾಲಕ್ಕೆ ಉದ್ಯೋಗ ಮತ್ತು ವ್ಯವಹಾರಕ್ಕೆ ಅತ್ಯಗತ್ಯವಾದ ಅಸ್ತ್ರ ಎಂದು ಪ್ರತಿಪಾದಿಸಿದ್ದಾರೆ.

ಈ ದ್ವಿಭಾಷಾ ನೀತಿಯ ಅಸಲಿ ಉದ್ದೇಶವೇ ”ತಳಮಟ್ಟದ ಕ್ರಾಂತಿ”. ಹಳ್ಳಿ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡದ ಜೊತೆಗೆ ಇಂಗ್ಲಿಷ್ ಬೋಧಿಸಿದರೆ, ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಇಷ್ಟು ದಿನ ಇಂಗ್ಲಿಷ್ ಕೇವಲ ಶ್ರೀಮಂತರ ಸೊತ್ತಾಗಿತ್ತು, ಆದರೆ ಇನ್ನು ಮುಂದೆ ಸರ್ಕಾರಿ ಶಾಲೆಯ ಶೂದ್ರ ಸಮುದಾಯದ ಮಕ್ಕಳು ಮತ್ತು ಬಡ ವರ್ಗದ ಮಕ್ಕಳು ಇಂಗ್ಲಿಷ್ ಕಲಿಕೆಯ ಮೂಲಕ ಸಾಮಾಜಿಕ ನ್ಯಾಯ ಪಡೆಯಲಿದ್ದಾರೆ ಎಂಬ ವಾದ ಮಂಡಿಸಿದ್ದಾರೆ ಮಧು ಬಂಗಾರಪ್ಪ.

ಬರಿ ಘೋಷಣೆ ಮಾಡಿದರೆ ಸಾಲದು ಅಂತ ಇಲಾಖೆ ಈಗಾಗಲೆ ತಯಾರಿ ಕೂಡ ಜೋರಾಗಿ ನಡೆಸಿದೆ. ಸರ್ಕಾರಿ ಶಾಲೆಯ ಶಿಕ್ಷಕರಿಗೇ ಇಂಗ್ಲಿಷ್ ಬೋಧಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ವತಿಯಿಂದ ಬರೋಬ್ಬರಿ 1.55 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ‘ಇಂಗ್ಲಿಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್’ (EMTT) ನೀಡಲಾಗಿದೆ. ಶಿಕ್ಷಕರು ಮೂರು ಹಂತಗಳಲ್ಲಿ ಟ್ರೈನಿಂಗ್ ಪಡೆದು ಸಜ್ಜಾಗಿದ್ದು, ಇನ್ನು ಮುಂದೆ ಹಳ್ಳಿ ಶಾಲೆಗಳಲ್ಲಿ ಕನ್ನಡದ ಕಂಪು ಮತ್ತು ಇಂಗ್ಲಿಷ್ ಗಮ್ಮತ್ತು ಎರಡೂ ಜೊತೆಯಾಗಿ ಕೇಳಿಬರಲಿವೆ.

ಇದೇ ಕಾರ್ಯಕ್ರಮದಲ್ಲಿ ‘ಶೂದ್ರ ಬಂಡಾಯ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಸಚಿವರು, ಶಿಕ್ಷಣವೇ ಸಮಾಜದ ದೊಡ್ಡ ಅಸ್ತ್ರ ಎಂದರು. ಚರಿತ್ರೆ ಬರೆಯುವವರು ಶ್ರಮಜೀವಿಗಳಾದ ಶೂದ್ರ ವರ್ಗವನ್ನು ಹೇಗೆ ಹೊರಗಿಟ್ಟಿದ್ದರು ಮತ್ತು ಈಗ ಶಿಕ್ಷಣದ ಮೂಲಕ ನಾವು ಅಂತಹ ಚಾರಿತ್ರಿಕ ಅಪಚಾರವನ್ನು ಹೇಗೆ ಸರಿಪಡಿಸಬಹುದು ಎಂಬ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದರು. ಉತ್ಪಾದನಾ ವಲಯದಲ್ಲಿ ದೇಶಕ್ಕೆ ಅನ್ನ, ಬಟ್ಟೆ ಕೊಟ್ಟ ವರ್ಗಕ್ಕೆ ಈಗ ಇಂಗ್ಲಿಷ್ ಶಿಕ್ಷಣದ ಶಕ್ತಿ ನೀಡಲು ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ, ಸರ್ಕಾರದ ಈ ‘ಬೈಲಿಂಗ್ವಲ್’ ಮ್ಯಾಜಿಕ್ ಮುಂದಿನ ವರ್ಷದಿಂದ ಹೇಗೆ ಕೆಲಸ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article