ಕೀರ್ತಿಯ ಶಿಖರಕ್ಕೇರಿದವರ ಕಾಲೆಳೆಯಲು ಗುಂಪೊಂದು ಸದಾ ಹೊಂಚು ಹಾಕುತ್ತಿರುತ್ತೆ ಎನ್ನುವುದಕ್ಕೆ ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅವರೇ ಈಗ ಸಾಕ್ಷಿಯಾಗಿದ್ದಾರೆ. ಒಬ್ಬ ವ್ಯಕ್ತಿ ಉತ್ತುಂಗಕ್ಕೆ ಏರಿದಾಗ ಆತನ ವರ್ಚಸ್ಸಿಗೆ ಮಸಿ ಬಳಿಯಲು ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು, ಇಡೀ ಪಡೆಯೇ ಜಿಗಣೆಯಂತೆ ಅಂಟಿಕೊಳ್ಳುತ್ತದೆ. ಇದು ಅಸೂಯೆಯೋ ಅಥವಾ ಕೆಳಕ್ಕೆ ಎಳೆಯುವ ಹಪಾಹಪಿಯೋ ಗೊತ್ತಿಲ್ಲ, ಆದರೆ ಕಿಂಗ್ ಕೊಹ್ಲಿ ವಿರುದ್ಧ ನಡೆದ ಒಂದು ಭೀಕರ ‘ಚಾರಿತ್ರ್ಯವಧೆ’ಯ ಷಡ್ಯಂತ್ರ ಈಗ ಬಯಲಾಗಿದೆ.
ಅಸಲಿಗೆ ಈ ಕಥೆ ಶುರುವಾಗಿದ್ದು ಒಂದು ಸಣ್ಣ ಇನ್‌ಸ್ಟಾಗ್ರಾಮ್ ‘ಲೈಕ್’ನಿಂದ. ಜರ್ಮನ್ ಮೂಲದ ಖ್ಯಾತ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ ಲಾಜ್ (ಜೆನ್ನಿಫರ್) ಅವರ ಹಳೆಯ ಫೋಟೋವೊಂದಕ್ಕೆ ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆಯಿಂದ ಲೈಕ್ ಬಂದಿತ್ತು. “ಸಮೋಸಾ.. ಸಮೋಸಾ” ಹಾಡಿನ ಮೂಲಕ ಭಾರತದಲ್ಲೂ ಫೇಮಸ್ ಆಗಿರುವ ಲಿಜ್ ಲಾಜ್‌ಗೆ ಭಾರತದ ಸಂಸ್ಕೃತಿ ಅಂದ್ರೆ ಪಂಚಪ್ರಾಣ. ಆದರೆ, ಕೊಹ್ಲಿ ಅವರ ಈ ಒಂದು ಲೈಕ್ ಅನ್ನೇ ಅಸ್ತ್ರವಾಗಿಸಿಕೊಂಡ ಕಿಡಿಗೇಡಿಗಳ ತಂಡವೊಂದು ಕೊಹ್ಲಿ ಇಮೇಜ್ ಹಾಳು ಮಾಡಲು ಸ್ಕೆಚ್ ಹಾಕಿತ್ತು.
ಈ ಸ್ಫೋಟಕ ಸತ್ಯವನ್ನು ಖುದ್ದು ಲಿಜ್ ಲಾಜ್ ಅವರೇ ಈಗ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ‘ಫಿಲ್ಮಿಮಂತ್ರ’ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ವಿರಾಟ್ ನನ್ನ ಪೋಸ್ಟ್ ಲೈಕ್ ಮಾಡಿದ್ದೇ ತಡ, ನನಗೆ ಹಲವು ಮ್ಯಾಗಜೀನ್‌ಗಳು ಮತ್ತು ಪತ್ರಕರ್ತರಿಂದ ನಿರಂತರವಾಗಿ ಕರೆಗಳು ಬರಲು ಶುರುವಾದವು. ವಿರಾಟ್ ಕೊಹ್ಲಿ ಮಾಡದ ತಪ್ಪುಗಳನ್ನು ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುವಂತೆ ಅವರು ನನ್ನ ಮೇಲೆ ಒತ್ತಡ ಹೇರಿದರು” ಎಂದು ಹೇಳಿ ಆಘಾತ ಮೂಡಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಈ ಕಾಲೆಳೆಯುವ ಗುಂಪು, ಕೊಹ್ಲಿ ವಿರುದ್ಧ ಸುಳ್ಳು ಹೇಳಿಕೆ ನೀಡಿದರೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಲಿಜ್ ಲಾಜ್‌ಗೆ ಆಮಿಷ ಒಡ್ಡಿದೆಯಂತೆ! 5G ಯುಗದಲ್ಲಿ ಒಬ್ಬ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು ಎಷ್ಟು ಸುಲಭ ಮತ್ತು ಅದಕ್ಕಾಗಿ ಹಣದ ಆಮಿಷ ಹೇಗೆಲ್ಲಾ ಕೆಲಸ ಮಾಡುತ್ತೆ ಅನ್ನೋದಕ್ಕೆ ಇದು ಜ್ವಲಂತ ಉದಾಹರಣೆ. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ, ಆದರೆ ಈ ಜರ್ಮನ್ ಚೆಲುವೆ ಮಾತ್ರ ಈ ಕೊಳಕು ಆಟಕ್ಕೆ ಬಲಿಯಾಗಲಿಲ್ಲ.
“ಹಣಕ್ಕಾಗಿ ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿಯಲ್ಲ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟ್ ಆಟಗಾರ ಎಂದು ನಾನೇ ಹಲವು ಬಾರಿ ಹೇಳಿಕೊಂಡಿದ್ದೇನೆ. ಹೀಗಿರುವಾಗ ಹಣಕ್ಕಾಗಿ ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ನಾನು ಹೇಗೆ ಮಾಡಲು ಸಾಧ್ಯ? ನನ್ನ ನೆಚ್ಚಿನ ಆಟಗಾರ ನನ್ನ ಪೋಸ್ಟ್ ಇಷ್ಟಪಟ್ಟಿದ್ದಕ್ಕೆ ನಾನು ಭಾವುಕಳಾಗಿದ್ದೆ. ಆದರೆ ಅದರ ಬೆನ್ನಲ್ಲೇ ಇಂತಹ ಕರೆಗಳು ಬರುತ್ತವೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ” ಎಂದು ಲಿಜ್ ಲಾಜ್ ಖಡಕ್ ಆಗಿ ಉತ್ತರಿಸಿದ್ದಾರೆ.
ವಾಸ್ತವವಾಗಿ, ಕಳೆದ ತಿಂಗಳು ಫೋಟೋಗ್ರಾಫರ್ ಅದ್ವೈತ್ ವೈದ್ಯ ಅವರು ಲಿಜ್ ಲಾಜ್ ಅವರ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅದನ್ನು ಕೊಹ್ಲಿ ಲೈಕ್ ಮಾಡಿರುವ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಇದನ್ನೇ ಬಳಸಿಕೊಂಡು ಕೊಹ್ಲಿ ಅವರ ವೈಯಕ್ತಿಕ ಜೀವನ ಮತ್ತು ಘನತೆಗೆ ಕುಂದು ತರಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ವಿರಾಟ್ ಅವರ ಕೀರ್ತಿಯ ಶಿಖರವನ್ನು ನೋಡಿ ಸಹಿಸಲಾಗದವರು ಈ ರೀತಿ ‘ಪೇಯ್ಡ್ ಪ್ರಚಾರ’ದ ಮೂಲಕ ಸುಳ್ಳು ಸುದ್ದಿ ಹಬ್ಬಿಸಲು ಮುಂದಾಗಿದ್ದರು.
ಈ ಘಟನೆ ಈಗ ಕೇವಲ ಕ್ರಿಕೆಟ್ ಲೋಕದಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಅಂತರಾಷ್ಟ್ರೀಯ ಆಟಗಾರನ ಬಗ್ಗೆ ಈ ಮಟ್ಟದ ಷಡ್ಯಂತ್ರ ನಡೆಯುತ್ತಿರುವುದರಿಂದ ಹಲವರಿಗೆ ದಿಗ್ಭ್ರಮೆ ಆಗಿದೆ. ಒಟ್ಟಿನಲ್ಲಿ, ಗೆದ್ದವರ ಹಿಂದೆ ಕಾಲೆಳೆಯುವವರು ಎಷ್ಟು ಮಂದಿ ಇದ್ದರೂ, ಸತ್ಯ ಒಂದಲ್ಲ ಒಂದು ದಿನ ಹೊರಬಂದೇ ಬರುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ವಿರಾಟ್ ಕೊಹ್ಲಿ ಅವರಂತಹ ಸೂಪರ್ ಸ್ಟಾರ್ ವಿರುದ್ಧ ನಡೆಯುತ್ತಿರುವ ಇಂತಹ ‘ಸೈಲೆಂಟ್ ವಾರ್’ ಬಗ್ಗೆ ಅಭಿಮಾನಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಸದ್ಯಕ್ಕಂತೂ ಕಿಂಗ್ ಕೊಹ್ಲಿಯ ವರ್ಚಸ್ಸಿಗೆ ಮಸಿ ಬಳಿಯಲು ಹೋದವರಿಗೆ ಲಿಜ್ ಲಾಜ್ ಸರಿಯಾದ ಉತ್ತರ ಕೊಟ್ಟಿದ್ದಾರೆ.



