ನಾವೆಲ್ಲಾ ನಾಳೆ ಅದು ಮಾಡಬೇಕು, ಇದು ಮಾಡಬೇಕು ಅಂತ ಏನೇನೋ ಕನಸು ಕಾಣ್ತೀವಿ. ಚೆನ್ನಾಗಿ ದುಡ್ಡು ಮಾಡಿ ಆಮೇಲೆ ಆರಾಮಾಗಿ ಇರೋಣ ಅಂತ ಬದುಕು ಪೂರ್ತಿ ಓಡ್ತಾನೆ ಇರ್ತೀವಿ. ಆದ್ರೆ ಈ ವಿಧಿ ಅನ್ನೋದು ಇದೆಯಲ್ಲ, ಅದು ನಮ್ಮ ಕೈಗೊಂಬೆ ಅಲ್ಲ. ನಾವು ಒಂದು ಅಂದುಕೊಂಡ್ರೆ, ಆ ದೇವರು ಹಣೆಯಲ್ಲಿ ಬೇರೆಯದ್ದೇ ಗೀಚಿರ್ತಾನೆ. ಇದಕ್ಕೆ ಕಣ್ಣೆದುರಿರೋ ಉದಾಹರಣೆಯೇ ದಿಲೀಪ್ ರಾಜ್ ಅವರ ಅಕಾಲಿಕ ನಿಧನ.
ಹೌದು, ವರ್ಷದ ಹಿಂದೆ ‘ರ್‍ಯಾಪಿಡ್ ರಶ್ಮಿ’ ಅವರಿಗೆ ದಿಲೀಪ್ ರಾಜ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ದಿಲೀಪ್ ರಾಜ್ ಮಾತನಾಡುತ್ತಾ ಒಂದು ಮಾತು ಹೇಳಿದ್ರು. “ನಮ್ಮ ಲೈಫ್ ನಾವು ಡಿಸೈನ್ ಮಾಡೋಕೆ ಸಾಧ್ಯನೇ ಇಲ್ಲ” ಎನ್ನುವ ಮಾತು ಅದು. ಈ ಮಾತು ಇವತ್ತು ಅಕ್ಷರಶಃ ನಿಜವಾಗಿದೆ. ನಾವೆಲ್ಲಾ ಎಷ್ಟೇ ಪ್ಲಾನ್ ಹಾಕಿದ್ರೂ, ಕಾಲ ಹೇಳಿದಂಗೆ ಕೇಳ್ಕೊಂಡು ಹೋಗ್ಬೇಕೇ ಹೊರತು, ಟೈಮ್ ನಮ್ ಮಾತು ಕೇಳಲ್ಲ ಅನ್ನೋದು ದಿಲೀಪ್ ಅವ್ರ ವಿಷಯದಲ್ಲಿ ಸಾಬೀತಾಗಿದೆ.
ಅವತ್ತು ಆ ಸಂದರ್ಶನದಲ್ಲಿ ದಿಲೀಪ್ ಇನ್ನೊಂದು ವಿಷಯ ಕೂಡ ಹೇಳಿದ್ದರು. “ನನ್ನ ಹತ್ರ ಇವತ್ತು ದುಡ್ಡಿದೆ ಇಲ್ಲ ಅಂತಲ್ಲ, ಆದ್ರೆ ಒಮ್ಮೊಮ್ಮೆ ಕೇವಲ ಸಾವಿರ ರೂಪಾಯಿ ಬೇಕು ಅಂದ್ರೂ ಸಿಗಲ್ಲ, ಯಾಕಂದ್ರೆ ಟೈಮ್ ಹಾಗಿರುತ್ತೆ” ಅಂದಿದ್ರು. ಅಂದ್ರೆ ಮನುಷ್ಯ ಎಷ್ಟೇ ಬೆಳೆದ್ರೂ ಸಮಯದ ಮುಂದೆ ತೀರಾ ಸಣ್ಣವನು ಅನ್ನೋದು ಅವ್ರಿಗೆ ಚೆನ್ನಾಗಿ ಗೊತ್ತಿತ್ತು. ದುಡ್ಡಿಗಿಂತ ಜನಕ್ಕೆ ಬೆಲೆ ಕೊಟ್ಟಿದ್ದ ಆ ಮನುಷ್ಯನ ವ್ಯಕ್ತಿತ್ವ ಇವತ್ತು ಅವ್ರು ಹೋದ ಮೇಲೆ ಜನ ಹರಿಸ್ತಿರೋ ಕಣ್ಣೀರಲ್ಲೇ ಕಾಣ್ತಿದೆ.
ತುಂಬಾ ಸಂಕಟ ತರೋ ವಿಷಯ ಏನಪ್ಪಾ ಅಂದ್ರೆ, ದಿಲೀಪ್ ರಾಜ್ ಅವ್ರು ತಮ್ಮ ರಿಟೈರ್ಮೆಂಟ್ ಬಗ್ಗೆ ಮಾತಾಡಿದ್ರು. “ನೋಡಮ್ಮಾ, 50 ವರ್ಷಕ್ಕೆಲ್ಲಾ ಕೆಲಸದಿಂದ ರಿಟೈರ್ಡ್ ಆಗಬೇಕು ಅಂತ ನಾನು ನನ್ನ ಹೆಂಡ್ತಿಗೆ ಯಾವಾಗ್ಲೂ ಹೇಳ್ತಾ ಇರ್ತೀನಿ” ಅಂದಿದ್ರು. ರಿಟೈರ್ ಅಂದ್ರೆ ನಟನೆಯಿಂದ ಅಲ್ಲ, ಈ ಪ್ರೊಡಕ್ಷನ್ ಜಂಜಾಟ, ಒತ್ತಡ ಎಲ್ಲಾ ಸಾಕು, ಕೊನೆವರೆಗೂ ಬರೀ ಒಬ್ಬ ಕಲಾವಿದನಾಗಿ ಮಾತ್ರ ಇರ್ತೀನಿ ಅನ್ನೋದು ಅವ್ರ ಆಸೆಯಾಗಿತ್ತು.
ಆದರೆ ವಿಧಿ ಲಿಖಿತ, ದಿಲೀಪ್ ಅವ್ರಿಗೆ ಈಗಷ್ಟೇ 47 ವರ್ಷ ವಯಸ್ಸು. ಅವ್ರು ಅಂದುಕೊಂಡಿದ್ದ ಆ 50 ವರ್ಷದ ಗುರಿ ತಲುಪೋಕೆ ಇನ್ನು ಕೇವಲ ಮೂರು ವರ್ಷ ಬಾಕಿ ಇತ್ತು. ಈ ಮೂರು ವರ್ಷ ಕಳೆದುಬಿಟ್ರೆ ಎಲ್ಲಾ ಟೆನ್ಶನ್ ಬಿಟ್ಟು ನೆಮ್ಮದಿಯಾಗಿರಬಹುದು ಅಂದುಕೊಂಡಿದ್ದ ನಟನಿಗೆ ವಿಧಿ ಅಷ್ಟು ಸಮಯ ಕೊಡಲೇ ಇಲ್ಲ. ಬದುಕಿನ ಪರದೆ ಎಳೆಯೋಕೆ ಮೂರು ವರ್ಷ ಮುಂಚೆಯೇ ಸಾವು ಬಂದು ಬಾಗಿಲು ತಟ್ಟಿದೆ.
ದಿಲೀಪ್ ಅವ್ರ ಈ ವಿಡಿಯೋ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ. ವೈರಲ್ ಆಗ್ತಿದೆ. ಅವ್ರು ಆವತ್ತು ನಗುನಗುತ್ತಾ ಹೇಳಿದ ಆ ಮಾತುಗಳು ಇವತ್ತು ಕಣ್ಣೀರು ತರಿಸ್ತಿವೆ. ನಾಳೆ ನಮ್ದು ಅಂದುಕೊಂಡು ಬದುಕೋ ನಮಗೆ, ಈ ಕ್ಷಣ ಮಾತ್ರ ನಮ್ದು ಅನ್ನೋ ದೊಡ್ಡ ಸತ್ಯವನ್ನು ದಿಲೀಪ್ ಅವರ ಈ ಅಕಾಲಿಕ ಸಾವು ನೆನಪಿಸಿದೆ.
ಒಟ್ಟಿನಲ್ಲಿ, ಒಬ್ಬ ಒಳ್ಳೆ ಕಲಾವಿದ ತನ್ನ ಕನಸುಗಳ ಮೂಟೆ ಕಟ್ಟಿಕೊಂಡು ಹೋಗ್ತೀನಿ ಅನ್ನೋಷ್ಟರಲ್ಲಿ ಕಾಲ ಅವ್ರನ್ನ ಎಳೆದುಕೊಂಡು ಹೋಗಿದೆ. 50 ವರ್ಷಕ್ಕೆ ಪ್ಲಾನ್ ಮಾಡಿದ್ದ ದಿಲೀಪ್ ಅವ್ರ ಜೀವನ 47ಕ್ಕೆ ಅಂತ್ಯವಾಗಿದ್ದು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಆ ದೇವರು ಅವ್ರ ಕುಟುಂಬಕ್ಕೆ ಈ ನೋವು ತಡೆಯೋ ಶಕ್ತಿ ಕೊಡಲಿ.



