ತ್ರಿವಳಿ ಕೊಲೆ ಪ್ರಕರಣ: ಯುವತಿ ಶ್ವೇತಾ 7 ದಿನ ಪೊಲೀಸ್ ವಶಕ್ಕೆ, ಪ್ರಿಯಕರನಿಗಾಗಿ ತೀವ್ರ ಶೋಧ
ಬೆಂಗಳೂರು: ತಂದೆ, ತಾಯಿ ಹಾಗೂ ಸಹೋದರಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಶ್ವೇತಾಳನ್ನು ಪೊಲೀಸರು ಗುರುವಾರ 47ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪುದುಚೇರಿಯ ಹೋಟೆಲ್‌ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದು ಬುಧವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಸರ್ಕಾರಿ ಮಹಿಳಾ ನಿಲಯದಲ್ಲಿ ಇರಿಸಿ, ಬಂಧನದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇದೇ ವೇಳೆ, ಪ್ರಕರಣದ ಮತ್ತೋರ್ವ ಆರೋಪಿ ಹಾಗೂ ಶ್ವೇತಾಳ ಪ್ರಿಯಕರ ಕೆನತ್ ಪತ್ತೆಗೆ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಶ್ವೇತಾ ನೀಡಿರುವ ಹೇಳಿಕೆ ಪ್ರಕಾರ, ಜೂನ್ 22ರ ರಾತ್ರಿ ತಾಯಿ ಮುತ್ತುಲಕ್ಷ್ಮೀ ಅವರನ್ನು ಫ್ಲ್ಯಾಟ್‌ನ ಕೊಠಡಿಯಲ್ಲಿ ಬಂದಿಸಿ ಚಾಕುವಿನಿಂದ ಹತ್ಯೆ ಮಾಡಿದ್ದಾಳೆ. ಆ ವೇಳೆ ಕೊಠಡಿಯ ಹೊರಗಿದ್ದ ಕೆನತ್ ಮಧ್ಯಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಕೊಠಡಿಯ ಬಾಗಿಲು ತೆರೆದ ನಂತರ ಮೃತದೇಹವನ್ನು ಸ್ನಾನದ ಗೃಹಕ್ಕೆ ಸ್ಥಳಾಂತರಿಸಲು ಕೆನತ್ ಸಹಾಯ ಮಾಡಿದ್ದಾನೆ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸ್ವಲ್ಪ ಸಮಯದ ಬಳಿಕ ತಂದೆ ಸೋಮಶೇಖರ್ ಹಾಗೂ ಸಹೋದರಿ ಸುಪ್ರಿಯಾ ಮನೆಗೆ ಬಂದಿದ್ದು, ಮಲಗುವ ಕೋಣೆಯಿಂದ ಸ್ನಾನದ ಗೃಹದವರೆಗೆ ರಕ್ತದ ಕಲೆಗಳು ಕಂಡು ಆಘಾತಕ್ಕೊಳಗಾಗಿದ್ದರು. ಬಾತ್‌ರೂಮ್‌ನಲ್ಲಿ ತಾಯಿ ಮೃತದೇಹವನ್ನು ಕಂಡ ಬಳಿಕ ತಮ್ಮನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಅವರ ಮೇಲೂ ಹಲ್ಲೆ ನಡೆಸಿರುವುದಾಗಿ ಶ್ವೇತಾ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
ಆದರೆ ವಿಚಾರಣೆ ವೇಳೆ ಆರೋಪಿತೆ ತನ್ನ ಹೇಳಿಕೆಯನ್ನು ಪದೇಪದೆ ಬದಲಾಯಿಸುತ್ತಿದ್ದು, ಆಕೆಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಕೆನತ್ ಬಂಧನದ ಬಳಿಕ ಮತ್ತಷ್ಟು ಸ್ಪಷ್ಟವಾಗುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿದಿದ್ದು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಆರೋಪಿಗಳ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



