ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ..!
ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಮುಗಿಬಿದ್ದ ಬೆಂಗಳೂರು ಮಂದಿ
ಬೆಂಗಳೂರು: ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಬ್ಬದ ಸಿದ್ಧತೆಗಾಗಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ಬೆಳ್ಳಂಬೆಳಗ್ಗೆಯೇ ನಗರದ ಕೆಆರ್ ಮಾರುಕಟ್ಟೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಹೂವು, ತೋರಣ ಸೇರಿದಂತೆ ಹಬ್ಬದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಹೂವು ಹಾಗೂ ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವು, ತೋರಣ ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ.
ಕೆಆರ್ ಮಾರುಕಟ್ಟೆಯಲ್ಲಿ ಸೇವಂತಿ ಹೂವು ಕೆಜಿಗೆ 350 ರೂಪಾಯಿ, ಗುಲಾಬಿ ಹೂವು ಕೆಜಿಗೆ 350 ರೂಪಾಯಿ ಹಾಗೂ ಮಿಶ್ರ ಹೂವು ಕೆಜಿಗೆ 300ರಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ. ತಾವರೆ ಹೂವಿನ ಜೋಡಿಗೆ 50 ರೂಪಾಯಿ ದರ ನಿಗದಿಯಾಗಿದೆ.
ಕನಕಾಂಬರ ಹೂವು ಮೊಳಕ್ಕೆ 50 ರೂಪಾಯಿ ಹಾಗೂ ಕೆಜಿಗೆ ಸುಮಾರು 2 ಸಾವಿರ ರೂಪಾಯಿ ದರವಿದೆ. ಮಲ್ಲಿಗೆ ಹೂವು ಮೊಳಕ್ಕೆ 50 ರೂಪಾಯಿ ಹಾಗೂ ಕೆಜಿಗೆ ಸುಮಾರು 1 ಸಾವಿರ ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
ಇನ್ನು ತುಳಸಿ ತೋರಣ ಮೊಳಕ್ಕೆ 60 ರೂಪಾಯಿ, ಮಾವಿನ ಎಲೆಗಳ ಕಟ್ಟು 10ರಿಂದ 30 ರೂಪಾಯಿ ಹಾಗೂ ಬಾಳೆ ದಿಂಡಿನ ಜೋಡಿಗೆ 50ರಿಂದ 80 ರೂಪಾಯಿವರೆಗೆ ದರವಿದೆ.
ಹಬ್ಬದ ಸಂಭ್ರಮದಲ್ಲಿ ಜನರು ಉತ್ಸಾಹದಿಂದ ಖರೀದಿಯಲ್ಲಿ ತೊಡಗಿದ್ದರೂ, ಹೂವು ಹಾಗೂ ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಹೆಚ್ಚುವರಿ ಹೊರೆಯಾಗುತ್ತಿದೆ.
ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ..!ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಮುಗಿಬಿದ್ದ ಬೆಂಗಳೂರು ಮಂದಿ



