ದೊಡ್ಡವರ ಪ್ರತಿಷ್ಟೆಗೆ ಅವರ ಪ್ರೀತಿ ಸತ್ತೇ ಹೋಯ್ತು..! ಸಾವಿನಲ್ಲಿ ಒಂದಾದ ಸ್ವಪ್ನ-ಚರಣ್ ಲವ್ ಸ್ಟೋರಿ..

0
93

ಸ್ವಪ್ನ…! ಅವಳು ಅಂದ್ರೆ ಅದ್ಭುತ, ಅವಳ ಹಿಂದೆ ಏನಿಲ್ಲಾ ಅಂದ್ರೂ ಮಿನಿಮಂ ಒಂದು ಡಜನ್ ಹುಡುಗರು ಬಿದ್ದಿದ್ರು. ಅವಳನ್ನು ಒಲಿಸಿಕೊಳ್ಳೋದು ಅವರ ಜೀವಮಾನದ ಸಾಧನೆ ಅಂತ ಡಿಸೈಡ್ ಮಾಡಿದ್ರು. ಆದ್ರೆ ಅವಳು ಅಷ್ಟು ಸುಲಭಕ್ಕೆ ಅವಳು ಯಾರ ಕೈಗೂ ಸಿಗೋ ಹುಡುಗಿಯಲ್ಲ..! ಅವಳ ಅಂದ-ಚಂದ, ಅವಳ ನಡೆನುಡಿ, ಅವಳ ಮಾತುಕತೆ ಎಲ್ಲದಕ್ಕೂ ನೂರಕ್ಕೆ ನೂರು ಮಾರ್ಕ್ಸ್ ಫಿಕ್ಸ್..! ಅವಳ ಅಂದ್ರೆ ಅವಳೇ, ಅವಳಿಗೆ ಅವಳೆ ಸಾಟಿ..! ಇಡೀ ಕುಶಾಲನಗರದಲ್ಲಿ ಅವಳ ಸೌಂದರ್ಯಕ್ಕೆ ಮಾರುಹೋಗದೇ ಇರೋರು ಯಾರೂ ಇಲ್ಲ..! ಆದ್ರೆ ಅವಳನ್ನು ರೇಗಿಸೋ, ಚುಡಾಯಿಸೋ ಮನಸ್ಸು ಯಾರಿಗೂ ಆಗ್ತಿರಲಿಲ್ಲ.. ಯಾವಾಗ್ಲೂ ನಗುನಗ್ತಾ ಇಡೀ ಪ್ರಪಂಚದ ಜೊತೆ ಮಾತಾಡೋ ಆ ಸ್ನಿಗ್ಧ ಸುಂದರಿಯನ್ನು ಚುಡಾಯಿಸೋದು ಕಷ್ಟಸಾಧ್ಯ..! ಅವಳನ್ನು ಪ್ರೀತಿಸಬೇಕು ಅನ್ನೋ ಹುಡುಗರು ಸಹ ಡೀಸೆಂಟ್ ಹುಡುಗರಂತೆ ಕಾಣೋ ಎಲ್ಲಾ ಪ್ರಯತ್ನವನ್ನೂ ಮಾಡ್ತಿದ್ರು..! ಆದ್ರೆ ಅವಳು ಮಾತ್ರ ಯಾರ ಗಾಳಕ್ಕೂ ಬೀಳದೇ ಅವಳ ಪಾಡಿಗೆ ಅವಳಿದ್ಲು..! ಆದ್ರೆ ಅವನೆಲ್ಲಿಂದ ಬಂದನೋ ಆ ಸುಂದರ,ಸ್ಫುರದ್ರೂಪಿ, ನೋಡಿದ್ರೆ ಎಂತಾ ಹುಡುಗೀರು ಬಿದ್ದು ಹೋಗೋ ಚೋರ ಮಿಸ್ಟರ್ ಚರಣ್..! ಅವನು ಕುಶಾಲನಗರದ ಹುಡುಗನೇ, ಆದ್ರೆ ಇಷ್ಟು ದಿನ ದೂರದ ಬೆಂಗಳೂರಿನಲ್ಲಿ ಓದ್ತಾ ಇದ್ದ. ಈಗ 2 ತಿಂಗಳ ಮಟ್ಟಿಗೆ ಊರಿಗೆ ಬಂದಿದ್ದಾನೆ..! ಅವತ್ತು ಫ್ರೆಂಡ್ಸ್ ಜೊತೆ ಅವರೂರಿನ ಕಾಲೇಜಿನ ಎದುರು ಕೂತಿದ್ದವನ ಕಣ್ಣಿಗೆ ಬಿದ್ದವಳು ಅವಳೇ..! ಅವಳೇ ಸ್ವಪ್ನ..! `ಲೋ ಇವಳ್ಯಾರ್ರೋ, ಇಷ್ಟು ಚೆನ್ನಾಗಿದ್ದಾಳೇ..! ನಮ್ಮೂರ್ ಹುಡುಗೀನಾ..?’ ಅಂತ ಕೇಳಿದವನಿಗೆ ಅವನ ಫ್ರೆಂಡ್ ಪಟ್ ಅಂತ ಉತ್ತರ ಕೊಟ್ಟ. ನಿನ್ನ ಕಣ್ಣೂ ಅವಳ ಮೇಲೇ ಬಿತ್ತಾ..? ಇವಳೇ ಕಣಪ್ಪ, ನಮ್ಮೂರ ಬ್ಯೂಟಿ ಕ್ವೀನ್ ಸ್ವಪ್ನ. ಕಾಂಟ್ರಾಕ್ಟರ್ ಸೋಮಣ್ಣನ ಮಗಳು..!’ ಚರಣ್ ಹದಿನೈದಿಪ್ಪತ್ತು ವರ್ಷ ಹಿಂದೆ ಹೋದ..! ಸಣ್ಣವರಿದ್ದಾಗ ಅಡಿಗೆ ಆಟ, ಮಣ್ಣಾಟ, ಕೋತಿ ಚೇಷ್ಟೆ ಮಾಡಿದ್ದು ಇವಳ ಜೊತೆಯಲ್ಲೇ..! ಇಷ್ಟು ಸುಂದರಿ ಆಗ್ತಾಳೆ ಅಂತ ಗೊತ್ತೇ ಇರಲಿಲ್ಲ ಅಂತ ಯೋಚನೆ ಮಾಡ್ತಿದ್ದ ಹಾಗೇ ಸ್ವಪ್ನ ಅವನ ಎದುರಲ್ಲಿ ನಿಂತಿದ್ಲು..! ಯಾಕೋ ಚರಣ್, ನನ್ನ ನೆನಪಿಲ್ವಾ..? ನಾನು ಕಣೋ ಸ್ವಪ್ನ.. ನಿಮ್ಮನೆ ಪಕ್ಕದಲ್ಲೇ ನಮ್ಮನೆ ಇತ್ತು. ಆಟ ಆಡ್ತಾ ಇದ್ವಿ..! ಈಗ ದೊಡ್ಡೋನಾಗಿದ್ಯ, ಗುರುತೇ ಸಿಗಲಿಲ್ಲ, ನನ್ ಫ್ರೆಂಡ್ ಹೇಳಿದ್ಲು ನೀನು ಚರಣ್ ಅಂತ. ಅದಕ್ಕೆ ಮಾತಾಡ್ಸೋಕೆ ಬಂದೆ ಅಂದ್ಲು..! ಶಾಕ್ ಆದ ಚರಣ್, ಹಾಯ್ ಹೇಳಿ ಮಾತಾಡ್ಸಿ ಕಳಿಸಿಬಿಟ್ಟ..! ಆದ್ರೆ ಅವಳು, ಅವಳ ನಗು, ಅವಳ ಸೌಂದರ್ಯ ಇವನ ತಲೆ ಕೆಡಿಸಿಬಿಟ್ಟಿತ್ತು..! ಆಗಿದ್ದಾಗ್ಲಿ ಅಂತ ಮರುದಿನ ಮತ್ತದೇ ಜಾಗದಲ್ಲಿ ಅವಳಿಗೆ ಕಾಯ್ತಾ ಕೂತು ಅವಳು ಬಂದ ತಕ್ಷಣ ಹೋಗಿ ಅನ್ಸಿದ್ದನ್ನು ಹೇಳಿಬಿಟ್ಟ..! ಈಗ ಶಾಕ್ ಆಗೋ ಸರದಿ ಅವಳದ್ದು..` ನಿನ್ನೆ ನೋಡಿ, ಇವತ್ತು ಲವ್ವಾ..? ನೀನೂ ಉಳಿದ ಹುಡುಗರ ತರಾನೇ ಅಂತ ಗೊತ್ತಾಗಿ ಬೇಜಾರಾಗ್ತಿದೆ. ನಿನ್ನನ್ನ ಮಾತಾಡ್ಸಿದ್ದಕ್ಕೆ ಐ ಆಮ್ ಸಾರಿ’ ಅಂತ ಹೇಳಿ ಹೊರಟುಬಿಟ್ಲು..! ಆದ್ರೆ ಅವಳು ಹೋದಷ್ಟು ಈಸಿಯಾಗಿ ಇವನ ತಲೆಯಿಂದ ಅವಳು ಹೋಗೋ ಚಾನ್ಸ್ ಇರಲಿಲ್ಲ..! ಏನ್ ಮಾಡೋದು ಅಂತ ತಲೇನೇ ಓಡ್ಲಿಲ್ಲ..! ಆಗಿದ್ದಾಗ್ಲಿ ಅಂತ ಅವಳ ಹಿಂದೆ ಸುತ್ತೋಕೆ ಶುರು ಮಾಡ್ದ..! ಅವಳ ಮನೆ, ಏರಿಯಾ, ಕಾಲೇಜು ಎಲ್ಲಿ ಹೋದ್ರು ಇವನಲ್ಲಿ ಹಾಜರ್. ಹುಡುಗ ತುಂಬಾ ಸೀರಿಯಸ್ ಆಗಿದ್ದಾನೆ ಅಂತ ಸ್ವಪ್ನಗೂ ಗೊತ್ತಾಯ್ತು..! ಕರೆದೇಬಿಟ್ಲು, ಏನೋ ಚರಣ್ ನೀನು, ಪೋಲಿ ಹುಡುಗರ ತರ ಹಿಂದಿಂದೆ ಸುತ್ತುತೀಯ.. ಅಷ್ಟು ಲವ್ ಮಾಡ್ತಿಯೇನೋ ನನ್ನ..?’ ಹ್ಞೂಂ ಅಂತ ತಲೆಯಾಡಿಸ್ದ..! ಸರಿ ಹಾಗಾದ್ರೆ ನಿಮ್ಮಪ್ಪ ಅಮ್ಮನತ್ರ ಮಾತಾಡಿ, ನಮ್ಮಪ್ಪ ಅಮ್ಮನ ಜೊತೆ ಮಾತಾಡೋಕೆ ಹೇಳು. ಓಕೆ ಆದ್ರೆ ನಂಗೇನೂ ಸಮಸ್ಯೆ ಇಲ್ಲ..! ಇವನು ಕುಣಿದು ಕುಪ್ಪಳಿಸಿಬಿಟ್ಟ..! ಅಪ್ಪನ ಎದುರು ನಿಂತು ಇರೋ ವಿಷಯ ಹೇಳ್ದ.. ಅಪ್ಪನೂ ಖುಷಿಯಾದ್ರು. `ನಿನ್ನಿಷ್ಟಾನೇ ನಮ್ಮಿಷ್ಟ’ ಅಂದ್ರ. ಯಾರ ಮಗಳು ಆ ಹುಡುಗಿ ಅಂತ ಕೇಳಿದ್ರು..! `ಅದೇ ಅಪ್ಪ, ನಮ್ಮನೆ ಪಕ್ಕದಲ್ಲಿದ್ರಲ್ವಾ, ಸೊಮಣ್ಣ ಅಂಕಲ್, ಅವರ ಮಗಳು..!’ ಅಷ್ಟೆ, ಅವರಪ್ಪನ ಮುಖ ಕೋಪದಲ್ಲಿ ಕುದ್ದು ಹೋಯ್ತು. ಸೋಮನ ಮಗಳಾ..? ನೀನ್ ಏನೇ ಮಾಡಿದ್ರೂ ಈ ಮದ್ವೆ ನಡಿಯಲ್ಲ..! ನನ್ ಮಗ ಇಲ್ಲ ಅಂತ ಕೊಂದು ಹಾಕ್ಬಿಡ್ತೀನಿ, ಆದ್ರೆ ಮದ್ವೆ ಮಾತ್ರ ನಡೆಯೋಕೆ ಸಾಧ್ಯಾನೇ ಇಲ್ಲ..!’ ಅಂದುಬಿಟ್ರು..!

This website and its content is copyright of – © Thenewindiantimes.com 2023. All rights reserved.
Any redistribution or reproduction of part or all of the contents Without Permission or Courtesy in any form is prohibited.

ಚರಣ್ ಕಂಗಾಲಾಗ್ಬಿಟ್ಟ..! ಅಮ್ಮ ಕೂರಿಸ್ಕೊಂಡು ಚರಣ್ ಗೆ ಬಿಡಿಸಿ ಹೇಳಿದ್ರು. ಸೋಮಣ್ಣಂಗೂ, ಇವನಪ್ಪನಿಗೂ ನಡೆದ ಗಲಾಟೆ, ಆಸ್ತಿ ಜಗಳದ ಬಗ್ಗೆ ಹೇಳಿದ್ರು..! ಯಾವದೇ ಕಾರಣಕ್ಕೂ ನಿಮ್ಮಪ್ಪ ಈ ಮದ್ವೆಗೆ ಒಪ್ಪಲ್ಲ ಅಂತ ಖಡಾಖಂಡಿತವಾಗಿ ಹೇಳಿಬಿಟ್ರು..! ಚರಣ್ ಊಟ ಬಿಟ್ಟ, ನಿದ್ದೆ ಬಿಟ್ಟ.. ಏನು ಮಾಡಿದ್ರೂ ಅಪ್ಪನ ಮನಸ್ಸು ಕರಗಲಿಲ್ಲ..! ಕೊನೆಗೆ ಸ್ವಪ್ನ ಎದುರು ಕೂತು ವಿಷಯ ಹೆಳಿದ, ಅವಳು ಸಹ ಅವರಪ್ಪನ ಕೋಪದ ಬಗ್ಗೆ ಹೇಳಿದ್ಲು..! ಅಲ್ಲಿಗೆ ನಮ್ಮ ಲವ್ ಸತ್ತು ಹೋಯ್ತಾ ಅಂತ ಕೇಳ್ದ ಚರಣ್,.! `ಅವಳು ಚರಣ್ ಗೆ ಕೇಳಿದ್ಲು, ` ನೀನು ನನ್ನ ಚೆನ್ನಾಗಿ ನೊಡ್ಕೋತಿಯ ಅನ್ನೋದಾದ್ರೆ ನಾನು ನಿನ್ನ ಜೊತೆ ಬರ್ತೀನಿ. ಇವರ ಸಹವಾಸಾನೇ ಬೇಡ.. ಬಾ ನಾವಿಬ್ರೂ ಬೆಂಗಳೂರಿಗೆ ಹೋಗಿಬಿಡೋಣ..!’ ಅವನಿಗೆ ಏನು ಹೇಳ್ಬೇಕೋ ಗೊತ್ತಾಗಲಿಲ್ಲ..! ಸರಿ ಅಂತ ತಲೆಯಾಡಿಸಿ ಅವತ್ತು ರಾತ್ರಿಯೇ ಕುಶಾಲನಗರದಿಂದ ಬೆಂಗಳೂರಿನ ಬಸ್ ಹತ್ತಿಬಿಟ್ರು..! ಈ ಕಡೆ ಎರಡೂ ಮನೆಯವರ ಕೋಪ ಇನ್ನೂ ಜಾಸ್ತಿಯಾಗಿತ್ತು..! ರೋಡಲ್ಲಿ ನಿಂತು ಇಬ್ಬರ ಫ್ಯಾಮಿಲಿಯವ್ರು ಹೊಡೆದಾಡಿಕೊಂಡ್ರು..! ನಿನ್ನ ಮಗನಿಂದ, ನಿನ್ನ ಮಗಳಿಂದ ಅಂತ ಕಿತ್ತಾಡಿದ್ರು..! ಈ ಕಡೆ ಇವರಿಬ್ಬರೂ ತಮ್ಮ ಜೀವನ ಶುರುಮಾಡಿಕೊಂಡ್ರು. ಓದಿನ ಜೊತೆಗೆ ಇಬ್ಬರೂ ಕೆಲಸ ಮಾಡಿಕೊಂಡು ಲೈಫ್ ಕಂಡುಕೊಂಡ್ರು..! ನೆಮ್ಮದಿಯ ಬದುಕು ಅವರದ್ದಾಗಿತ್ತು. ಆದ್ರೆ ಒಂದು ಕಡೆ ಕುಟುಂಬದವರು, ಮತ್ತೊಂದು ಕಡೆ ಪೊಲೀಸರು ಇವರಿಬ್ಬರನ್ನೂ ಹುಡುಕ್ತಿದ್ರು..! 4 ತಿಂಗಳ ನಂತರ ಪೊಲೀಸರ ಕೈಗೆ ಸ್ವಪ್ನ ಸಿಕ್ಕಿಬಿದ್ಲು. ಅವಳನ್ನು ಬಿಡಿಸಿಕೊಳ್ಳಲು ಬಂದು ಚರಣ್ ಸಹ ಸಿಕ್ಕಾಕಿಕೊಂಡ..! ಇಬ್ಬರ ಕುಟುಂಬದವರೂ ಬಂದು ಇಬ್ಬರಿಗೂ ದನಕ್ಕೆ ಬಡಿದಹಾಗೆ ಬಡಿದು ಎಳ್ಕೊಂಡು ಹೋದ್ರು..! ಅವನಲ್ಲಿ, ಇವಳಿಲ್ಲಿ…! ಎಷ್ಟೆ ಗೋಗೆರೆದ್ರೂ ಇಬ್ಬರ ಅಪ್ಪಂದಿರ ಮನಸ್ಸು ಕರಗಲಿಲ್ಲ..! ಹೀಗೇ ವಾರ ಕಳೀತು. ಇವರಿಬ್ಬರೂ ಊಟ-ನೀರು ಬಿಟ್ಟು ಅರೆಜೀವ ಆಗಿದ್ರೂ ಸಹ ಮನೆಯವರು ಕೇರ್ ಮಾಡಲಿಲ್ಲ..! ಇನ್ನು ನಂಗೆ ಅವನನ್ನು ಬಿಟ್ಟಿರೋಕೆ ಸಾಧ್ಯವೇ ಇಲ್ಲ ಅಂತ ಕಣ್ತಪ್ಪಿಸಿ ಓಡಿಹೋಗೋಕೆ ಸ್ವಪ್ನ ಪ್ರಯತ್ನಿಸಿದಾಗ ಅವಳ ಕಾಲಿಗೆ ಬರೆ ಹಾಕಿ ಮನೆಯೊಳಗೆ ಕೂಡು ಹಾಕ್ತಾನೆ ಅವರಪ್ಪ..! ಬೇರೆ ವಿಧಿಯೇ ಇಲ್ಲದೇ ಅವತ್ತು ರಾತ್ರಿ ಕೀಟನಾಶಕ ಕುಡಿದು ಸ್ವಪ್ನ ಪ್ರಾಣ ಬಿಡ್ತಾಳೆ..! ಈ ಸುದ್ದಿ ಕೇಳಿ ಚರಣ್ ಸಹ ಅವತ್ತಿನ ದಿನವೇ ನೇಣು ಹಾಕ್ಕೊಂಡು ಸತ್ತು ಹೋಗ್ತಾನೆ..! ದೊಡ್ಡವರ ಪ್ರತಿಷ್ಟೆ, ಕೋಪಕ್ಕೆ ಅನ್ಯಾಯವಾಗಿ ಯುವ ಪ್ರೇಮಿಗಳು ಪ್ರಾಣಬಿಡ್ತಾರೆ.. ಅವರ ಪ್ರೀತಿ ಸತ್ತುಹೋಗುತ್ತೆ..! ತಪ್ಪಿನ ಅರಿವಾಗಿ ಎರಡೂ ಕುಟುಂಬದವರೂ ಬಿಕ್ಕಿಬಿಕ್ಕಿ ಅಳ್ತಾರೆ. ಆದ್ರೆ ಕಾಲ ಮೀರಿಹೋಗಿರುತ್ತೆ..! ಊರಿನವರ ಒತ್ತಾಯಕ್ಕೆ ಮಣಿದು ಇಬ್ಬರನ್ನೂ ಅಕ್ಕಪಕ್ಕದಲ್ಲಿ ಮಲಗಿಸಿ ಮಣ್ಣು ಮಾಡ್ತಾರೆ..! ಜೀವಂತವಾಗಿದ್ದಾಗಲಂತೂ ನೆಮ್ಮದಿಯಾಗಿ ಜೊತೆಗಿರಲಾಗದ ಜೋಡಿ, ಸಾವಿನಲ್ಲಿ ಒಂದಾಗ್ತಾರೆ..! ಅವರು ಸತ್ತರೂ ಅವರ ಪ್ರೀತಿ ಸಾಯಲಿಲ್ಲ..! ಪ್ರೀತಿಗೆ ಯಾವತ್ತೂ ಸಾವಿಲ್ಲ..!
ಮನೆಯಲ್ಲಿ ದೊಡ್ಡವರು ಅಂತ ಇರೋರು ದೊಡ್ಡವರಾಗೋದೇ ಇಂತಹ ವಿಚಾರಗಳಲ್ಲಿ ದೊಡ್ಡವರಾದಾಗ..! ನಿಮ್ಮ ಪ್ರತಿಷ್ಟೆ, ಕೋಪಕ್ಕೆ ಪುಟ್ಟ ಜೀವಗಳು ಬಲಿಯಾಗದಿರಲಿ..! ನಿಮ್ಮ ಮನೆಯಲ್ಲೂ ಇಂತಹ ಘಟನೆಗಳು ನಡೆದ್ರೆ ಅದನ್ನು ಪ್ರೀತಿಯಿಂದ ಸರಿಪಡಿಸಿ, ಕೋಪದಲ್ಲಿ ಕೊಂದುಬಿಡಬೇಡಿ..!

LEAVE A REPLY

Please enter your comment!
Please enter your name here