ಪಾರಿವಾಳಗಳಿಗೆ ಆಹಾರ ಹಾಕಿದರೆ ಆರೋಗ್ಯಕ್ಕೆ ಅಪಾಯ; ಉಸಿರಾಟ ಸಂಬಂಧಿ ಕಾಯಿಲೆ ತಡೆಗೆ ಹೊಸ ನಿಯಮ ಜಾರಿ
ಬೆಂಗಳೂರು: ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವ ಕುರಿತು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪಾರಿವಾಳಗಳ ಸಂಖ್ಯೆ ನಿಯಂತ್ರಣವಿಲ್ಲದೆ ಹೆಚ್ಚುತ್ತಿರುವುದು ಹಾಗೂ ಅವುಗಳ ಮಲ ಮತ್ತು ಗರಿಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುವ ಅಥವಾ ಸಾರ್ವಜನಿಕರಿಗೆ ತೊಂದರೆ ಆಗುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಉಸಿರಾಟದ ಕಾಯಿಲೆಗಳ ಅಪಾಯ
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಪಾರಿವಾಳಗಳ ಮಲ ಮತ್ತು ಗರಿಗಳಿಂದ ಹರಡುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಉರಿಯೂತ, ಅಲರ್ಜಿ ಹಾಗೂ ತೀವ್ರ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಈಗಾಗಲೇ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚಿನ ಆರೋಗ್ಯ ಅಪಾಯ ಎದುರಾಗುವ ಸಾಧ್ಯತೆ ಇದೆ.
ಹೊಸ ಮಾರ್ಗಸೂಚಿಯಲ್ಲಿ ಪ್ರಮುಖ ಅಂಶಗಳು
• ನಿಗದಿತ ಸ್ಥಳ ಮತ್ತು ಸಮಯ: ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನಗಳು ಹಾಗೂ ಖಾಸಗಿ ಪ್ರದೇಶಗಳಲ್ಲಿ ಅನಿಯಂತ್ರಿತವಾಗಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ. ಸ್ಥಳೀಯ ಸಂಸ್ಥೆಗಳು ಗುರುತಿಸಿದ ನಿಗದಿತ ಸ್ಥಳಗಳಲ್ಲಿ ಮಾತ್ರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಆಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.
• ಎನ್ಜಿಒಗಳಿಗೆ ಜವಾಬ್ದಾರಿ: ಪಾರಿವಾಳಗಳಿಗೆ ಆಹಾರ ನೀಡುವ ಜವಾಬ್ದಾರಿಯನ್ನು ಮಾನ್ಯತೆ ಪಡೆದ ಎನ್ಜಿಒಗಳು ಅಥವಾ ದತ್ತಿ ಸಂಸ್ಥೆಗಳು ವಹಿಸಿಕೊಳ್ಳಬೇಕು. ಆಹಾರ ವಿತರಣಾ ಸ್ಥಳಗಳ ಸ್ವಚ್ಛತೆ, ನಿರ್ವಹಣೆ ಹಾಗೂ ಸಾರ್ವಜನಿಕರಿಂದ ಬರುವ ದೂರುಗಳನ್ನು ಕೂಡ ಇದೇ ಸಂಸ್ಥೆಗಳು ನೋಡಿಕೊಳ್ಳಬೇಕು.
• ಅಪಾರ್ಟ್ಮೆಂಟ್ ಮತ್ತು ಮನೆಗಳಿಗೆ ಸೂಚನೆ: ಮನೆಗಳ ಟೆರೇಸ್, ಬಾಲ್ಕನಿ ಹಾಗೂ ಕಟ್ಟಡಗಳ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ನಿವಾಸಿಗಳು ಹಾಗೂ ಅಪಾರ್ಟ್ಮೆಂಟ್ ಸಂಘಗಳಿಗೆ ಸೂಚಿಸಲಾಗಿದೆ.
• ವಿಮಾನ ಸುರಕ್ಷತೆಗೆ ಆದ್ಯತೆ: ವಿಮಾನ ನಿಲ್ದಾಣಗಳ ಸುತ್ತಮುತ್ತ ಪಾರಿವಾಳಗಳಿಗೆ ಆಹಾರ ನೀಡುವ ಕೇಂದ್ರಗಳನ್ನು ಸ್ಥಾಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ವಿಮಾನ ಸಂಚಾರದ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬ್ಯಾನರ್ಗಳು, ಮಾಹಿತಿ ಫಲಕಗಳು ಹಾಗೂ ಡಿಜಿಟಲ್ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.



