ದೇಶದ ರಾಜಕೀಯ, ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡೋಕೆ, ದೆಹಲಿಗೆ ಹೋಗಿ ಹೋರಾಟ ಮಾಡೋಕೆ ಸಮಯ ಸಿಗುತ್ತೆ. ಆದ್ರೆ ನಮ್ಮ ಊರಿಗೆ ಬರಲು ಸಮಯ ಸಿಗಲ್ವಾ ಪ್ರಕಾಶ್ ರಾಜ್? ಹೀಗಂತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮಸ್ಥರು ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಆರು ವರ್ಷಗಳ ಹಿಂದೆ ಅದ್ದೂರಿಯಾಗಿ ಗ್ರಾಮವನ್ನು ದತ್ತು ಪಡೆದು, ಅಭಿವೃದ್ಧಿಯ ಮಹಾಪೂರವನ್ನೇ ಹರಿಸುವುದಾಗಿ ಮಾತು ಕೊಟ್ಟಿದ್ದ ನಟ, ಈಗ ಕೊಟ್ಟ ಮಾತು ಮರೆತು ಕನಿಷ್ಠ ಊರಿನತ್ತ ಮುಖ ಮಾಡಿಯೂ ನೋಡಿಲ್ಲ ಎಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
2019ರ ಭೇಟಿ: ಕೊಟ್ಟಿದ್ದು ಸಾಲು ಸಾಲು ಭರವಸೆಗಳು
ವಿಷಯ ಏನೆಂದರೆ, ಕಳೆದ 2019ರಲ್ಲಿ ನಟ ಪ್ರಕಾಶ್ ರಾಜ್ ಅವರು ಬಂಡ್ಲರಹಟ್ಟಿ ಗ್ರಾಮಕ್ಕೆ ಎರಡು ಬಾರಿ ಸ್ವತಃ ಭೇಟಿ ನೀಡಿದ್ದರು. ಈ ವೇಳೆ ಊರನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದ ಅವರು, ಗ್ರಾಮದ ಮೂಲಸೌಕರ್ಯ ಸುಧಾರಣೆ, ಶಾಲೆಗಳ ಅಭಿವೃದ್ದಿ ಹಾಗೂ ರಸ್ತೆ ಮತ್ತು ಚರಂಡಿ ನಿರ್ಮಾಣ, ಹಾಗೆಯೇ ಗೋಮಾಳ ಜಾಗದ ಅಭಿವೃದ್ಧಿ ಮಾಡಿಕೊಡುವುದಾಗಿ ಭರವಸೆಗಳನ್ನು ನೀಡಿದ್ದರು. ಮುಖ್ಯವಾಗಿ ಊರಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು.
ತಂಡ ಕಳುಹಿಸ್ತೀವಿ ಅಂದಿದ್ರು, ಆ ಟೀಮ್ ಇಂದಿಗೂ ಬರಲೇ ಇಲ್ಲ
ಗ್ರಾಮದ ಪ್ರತಿಯೊಂದು ಅಗತ್ಯ ಹಾಗೂ ಕುಂದುಕೊರತೆಗಳನ್ನು ಅಧ್ಯಯನ ಮಾಡಲು ಶೀಘ್ರದಲ್ಲೇ ತಮ್ಮದೇ ಆದ ವಿಶೇಷ ತಂಡವೊಂದನ್ನು ಊರಿಗೆ ಕಳುಹಿಸಿಕೊಡುವುದಾಗಿ ಪ್ರಕಾಶ್ ರಾಜ್ ತಿಳಿಸಿದ್ದರು. ಆದರೆ, ನಟ ಪ್ರಕಾಶ್ ರಾಜ್ ಹೇಳಿದ ಆ ತಂಡ ಇದುವರೆಗೂ ಗ್ರಾಮದತ್ತ ಸುಳಿದೇ ಇಲ್ಲ ಎಂಬುದು ಜನರ ಆರೋಪ. ನಟ ಕೊಟ್ಟ ಭರವಸೆಗಳೆಲ್ಲವೂ ಕೇವಲ ಪೇಪರ್ ಮೇಲಷ್ಟೇ ಉಳಿದುಕೊಂಡಿದ್ದು, ಆರು ವರ್ಷ ಕಳೆದರೂ ಒಂದೇ ಒಂದು ಕೆಲಸವೂ ಜಾರಿಯಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವಿಷಕಾರಿ ಫ್ಲೋರೈಡ್ ನೀರು: ಬಂಡ್ಲರಹಟ್ಟಿಯಲ್ಲಿ ಇಂದಿಗೂ ನೀರಿನ ಭಾರಿ ಅಭಾವ
ಬಂಡ್ಲರಹಟ್ಟಿ ಗ್ರಾಮದಲ್ಲಿ ಇಂದಿಗೂ ಕುಡಿಯುವ ನೀರಿನ ಭಾರಿ ಅಭಾವವಿದೆ. ಇದ್ದ ಅಂತರ್ಜಲದಲ್ಲೂ ಫ್ಲೋರೈಡ್ ಪ್ರಮಾಣ ಹೆಚ್ಚಾಗಿ ಇಡೀ ನೀರು ಕಲುಷಿತಗೊಂಡಿದೆ. ವರ್ಷಗಳು ಕಳೆದಂತೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸಿಗುವ ನೀರಿನ ಗುಣಮಟ್ಟವೂ ಹದಗೆಟ್ಟು ಜನ ಅನಾರೋಗ್ಯಕ್ಕೆ ಈಡಾಗುವ ಭೀತಿಯಲ್ಲಿದ್ದಾರೆ. ದಿನನಿತ್ಯದ ಕುಡಿಯುವ ನೀರಿಗಾಗಿ ಜನ ಪರದಾಡುವ ಸ್ಥಿತಿ ಮುಂದುವರಿದಿದೆ.
ಆಗ ಖುಷಿಪಟ್ಟಿದ್ವಿ, ಈಗ ಮೋಸ ಹೋದಂತಾಗಿದೆ- ಗ್ರಾಮಸ್ಥರ ಕಣ್ಣೀರು
ಪ್ರಕಾಶ್ ರಾಜ್ ಅವರು ಬಂದು ನಮ್ಮ ಗ್ರಾಮವನ್ನು ದತ್ತು ತಗೊಂಡು, ಕಷ್ಟದಲ್ಲಿರೋ ನಮಗೆ ಕುಡಿಯುವ ನೀರು ಮತ್ತು ಮೂಲಸೌಕರ್ಯ ಒದಗಿಸ್ತೀವಿ ಅಂತ ಹೇಳಿದಾಗ ನಾವು ತುಂಬಾ ಖುಷಿಪಟ್ಟಿದ್ವಿ. ನಮ್ಮ ಊರು ಉದ್ಧಾರ ಆಗುತ್ತೆ ಅನ್ಕೊಂಡಿದ್ವಿ. ಆದರೆ ಆರು ವರ್ಷಗಳಾದರೂ ಅವರು ಕೊಟ್ಟ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ, ಎಂದು ಗ್ರಾಮಸ್ಥ ಸಿದ್ದಪ್ಪ ತಮ್ಮ ಆಕ್ರೋಶ ಹಾಗೂ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ದೆಹಲಿ ಚಳವಳಿಗೆ ಸಮಯವಿದೆ, ನಮಗೇಕಿಲ್ಲ? ರೈತ ಮೋರ್ಚಾ ವಾಗ್ದಾಳಿ
ಇನ್ನು ನಟ ಪ್ರಕಾಶ್ ರಾಜ್ ವಿರುದ್ಧ ರೈತ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸಿಂಧು ತನಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಶ್ ರಾಜ್ ಅವರಿಗೆ ದೇಶದ ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಲು, ಮಾಧ್ಯಮಗಳ ಮುಂದೆ ನಿಲ್ಲಲು ಮತ್ತು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸಲು ಸಮಯ ಸಿಗುತ್ತದೆ. ಆದರೆ ತಾವು ದತ್ತು ಪಡೆದ ಬಂಡ್ಲರಹಟ್ಟಿ ಗ್ರಾಮಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಲು ಮಾತ್ರ ಅವರ ಬಳಿ ಸಮಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಬಂಡ್ಲರಹಟ್ಟಿ ಜನ
ಒಟ್ಟಿನಲ್ಲಿ, ದತ್ತು ಪಡೆದ ಗ್ರಾಮದ ಸ್ಥಿತಿ ನೆನೆದು ಬಂಡ್ಲರಹಟ್ಟಿ ಗ್ರಾಮಸ್ಥರು ಈಗ ನಟನ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಪ್ರಕಾಶ್ ರಾಜ್ ಅವರು ನೀಡಿದ್ದ ಭರವಸೆಗಳನ್ನು ಶೀಘ್ರವೇ ಈಡೇರಿಸಬೇಕು, ಇಲ್ಲವೇ ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ನಟ ಮಾತು ತಪ್ಪಿ ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.



