No menu items!
10.7 C
Munich
Tuesday, July 21, 2026

ಅಜ್ಜಿ ಚೆನ್ನಮ್ಮ ಅಂತಿಮ ದರ್ಶನಕ್ಕೆ ಪೆರೋಲ್ ಅರ್ಜಿ ಸಲ್ಲಿಸದ ಪ್ರಜ್ವಲ್ ರೇವಣ್ಣ; ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಅವಕಾಶ ಸಾಧ್ಯತೆ

Must read

ಅಜ್ಜಿ ಚೆನ್ನಮ್ಮ ಅಂತಿಮ ದರ್ಶನಕ್ಕೆ ಪೆರೋಲ್ ಅರ್ಜಿ ಸಲ್ಲಿಸದ ಪ್ರಜ್ವಲ್ ರೇವಣ್ಣ; ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಅವಕಾಶ ಸಾಧ್ಯತೆ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅಂತಿಮ ದರ್ಶನ ಪಡೆಯಲಿದ್ದಾರೆಯೇ ಎಂಬ ಕುತೂಹಲ ಮೂಡಿತ್ತು. ಆದರೆ, ಈವರೆಗೆ ಪ್ರಜ್ವಲ್ ರೇವಣ್ಣ ಅವರು ಪೆರೋಲ್ಗಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೇವಣ್ಣ ಅವರು ಪೆರೋಲ್ ಅರ್ಜಿ ಸಲ್ಲಿಸಿದಲ್ಲಿ, ಕಾರಾಗೃಹದ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ನಿಯಮಾವಳಿ ಹಾಗೂ ಭಾರತೀಯ ನ್ಯಾಯ ಸಂಹಿತೆಯ ನಿಯಮಗಳ ಪ್ರಕಾರ, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳಿಗೆ ಪೆರೋಲ್ ನೀಡಲು ನಿರ್ದಿಷ್ಟ ನಿಯಮಗಳಿವೆ. ಪೆರೋಲ್ ಅನ್ನು ಕೈದಿಯ ಸನ್ನಡತೆ ಹಾಗೂ ತುರ್ತು ಸಂದರ್ಭಗಳನ್ನು ಪರಿಗಣಿಸಿ ನೀಡಲಾಗುತ್ತದೆ. ಇದು ಕೈದಿಯ ಹಕ್ಕಾಗಿರುವುದಿಲ್ಲ.
ಕಾರಾಗೃಹ ನಿಯಮಗಳ ಪ್ರಕಾರ ಪೆರೋಲ್ ಅನ್ನು ಸಾಮಾನ್ಯ ಪೆರೋಲ್ ಮತ್ತು ತುರ್ತು ಪೆರೋಲ್ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ತಂದೆ, ತಾಯಿ, ಪತಿ, ಪತ್ನಿ, ಮಕ್ಕಳು ಅಥವಾ ಒಡಹುಟ್ಟಿದವರ ನಿಧನ ಹಾಗೂ ಗಂಭೀರ ಅನಾರೋಗ್ಯದಂತಹ ಸಂದರ್ಭಗಳಲ್ಲಿ ಕೈದಿಗಳು ಪೆರೋಲ್ಗಾಗಿ ಅರ್ಜಿ ಸಲ್ಲಿಸಬಹುದು.
ಇಂತಹ ಸಂದರ್ಭಗಳಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರು ಸಾಮಾನ್ಯವಾಗಿ ಪೊಲೀಸ್ ಭದ್ರತೆಯೊಂದಿಗೆ 24 ರಿಂದ 48 ಗಂಟೆಗಳ ಅವಧಿಗೆ ಪೆರೋಲ್ ಮಂಜೂರು ಮಾಡಬಹುದು. ಅಂತ್ಯಕ್ರಿಯೆ ಅಥವಾ ಉತ್ತರಕ್ರಿಯೆಯಂತಹ ವಿಧಿವಿಧಾನಗಳಲ್ಲಿ ಭಾಗವಹಿಸಲು ಅಗತ್ಯವಿದ್ದರೆ ಪೆರೋಲ್ ಅವಧಿಯನ್ನು 15 ದಿನಗಳವರೆಗೆ ವಿಸ್ತರಿಸುವ ಅವಕಾಶವೂ ಇದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅಜ್ಜಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆಯಲು ಅವರು ಪೆರೋಲ್ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸದ್ಯದವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ.
ಇನ್ನು ಚೆನ್ನಮ್ಮ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಮಾವಿನಕೆರೆ ರಂಗನಾಥ ಬೆಟ್ಟದ ತಪ್ಪಲಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರು, ಬಂಧುಗಳು, ಜನಪ್ರತಿನಿಧಿಗಳು ಹಾಗೂ ದೇವೇಗೌಡ ಕುಟುಂಬದ ಅಭಿಮಾನಿಗಳು ಭಾಗಿಯಾಗಲಿದ್ದಾರೆ.

- Advertisement -spot_img

More articles

- Advertisement -spot_img

Latest article