ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮುಂದೂಡಿಕೆ; ಹೈಕೋರ್ಟ್ ಆದೇಶದತ್ತ ಎಲ್ಲರ ಚಿತ್ತ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ-14 ಆರೋಪಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಹೈಕೋರ್ಟ್ನಲ್ಲಿ ಇಂದು ಅರ್ಜಿ ವಿಚಾರಣೆಗೆ ಬರಲಿದ್ದು, ಅಲ್ಲಿ ಹೊರಬೀಳುವ ಆದೇಶದ ಆಧಾರದ ಮೇಲೆ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಮುಂದಿನ ಪ್ರಕ್ರಿಯೆ ನಿರ್ಧಾರವಾಗಲಿದೆ.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಇದೇ ವಿಚಾರ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ ಇಂದು ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ಗೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿ ಆದೇಶಿಸಿದರು.
ಇಂದು ಬೆಳಗ್ಗೆ ಪ್ರದೋಷ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಗಿ ಭದ್ರತೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಲಾಯಿತು. ಆದರೆ ವಿಚಾರಣೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಹಾಗೂ ಪೊಲೀಸರು ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅತ್ಯಂತ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಹೀಗಾಗಿ ಹೈಕೋರ್ಟ್ ನೀಡಲಿರುವ ಆದೇಶದತ್ತ ನಟ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳು ಹಾಗೂ ಅವರ ಪರ ವಕೀಲರು ಗಮನಹರಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2024ರ ಜೂನ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.
ಪ್ರದೋಷ್ ಸೇರಿದಂತೆ ಏಳು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ ಅವರು 2025ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಸೋಮವಾರ ಪ್ರದೋಷ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಬೇಕಿದೆ.
ಪ್ರದೋಷ್ ಅವರ ಹೇಳಿಕೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಮಾಹಿತಿಗಳು ಹೊರಬರಲಿವೆ ಹಾಗೂ ಅವರು ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಹೈಕೋರ್ಟ್ ಯಾವ ರೀತಿಯ ಆದೇಶ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.



