No menu items!
22.9 C
Munich
Wednesday, September 2, 2026

ಓವರ್ ಟೇಕ್ ಮಾಡಿದ್ದಕ್ಕೆ ಕಿರಿಕ್? ಕಾಲೇಜು ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್

Must read

ಓವರ್ ಟೇಕ್ ಮಾಡಿದ್ದಕ್ಕೆ ಕಿರಿಕ್? ಕಾಲೇಜು ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಮನೀಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 115(2), 118(1), 352, 351(2), 3(5) ಹಾಗೂ 137(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್, ಸೋಮವಾರ (ಆ.31) ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್ ಅವರ ಕಾರನ್ನು ಓವರ್ಟೇಕ್ ಮಾಡಿ ರೇಗಿಸಿದ್ದರು ಎನ್ನಲಾಗಿದೆ.
ಈ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಕಿರಿಕ್ ಆರಂಭವಾಗಿದ್ದು, ಮನೀಶ್ ವಿರುದ್ಧ ಸಾಮ್ರಾಟ್ ವಿಜಯ್ ಆಕ್ರೋಶಗೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಂಗಳವಾರ (ಸೆ.1) ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಮನೀಶ್ ಗೌಡ ಕಾಲೇಜು ಆವರಣದಲ್ಲಿ ತಮ್ಮ ಬೈಕ್ ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಸಫಾರಿ ಕಾರಿನಲ್ಲಿ ಸ್ನೇಹಿತರೊಂದಿಗೆ ಬಂದ ಸಾಮ್ರಾಟ್ ವಿಜಯ್, ಮನೀಶ್ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಕಾರನ್ನು ಪಟ್ಟಣಗೆರೆಯ ಮುಖ್ಯ ರಸ್ತೆಯ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಚಲಿಸುತ್ತಿದ್ದ ಕಾರಿನಲ್ಲೇ ಮನೀಶ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್, ಸ್ಕಂದ ವೆಂಕಟೇಶ್, ಸಮೀದ್ ಸೇರಿದಂತೆ ಇತರರು ಸೇರಿಕೊಂಡು ಮನೀಶ್ ಅವರ ಮುಖ, ಕುತ್ತಿಗೆ, ಎದೆ ಹಾಗೂ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಗಾಯಗೊಂಡ ಸ್ಥಿತಿಯಲ್ಲೇ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರ ವಿರುದ್ಧ ಅಪಹರಣ ಮತ್ತು ಹಲ್ಲೆ ಆರೋಪದಡಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಗಳು, ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಇದ್ದವರ ಮಾಹಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article