ಸೌಜನ್ಯ ಪ್ರಕರಣ ಮರುತನಿಖೆಗೂ ಮುನ್ನ ಹಿನ್ನಡೆ: SITಯಿಂದ ತಮ್ಮ ಹೆಸರು ಕೈಬಿಡುವಂತೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಪತ್ರ!
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಸೌಜನ್ಯ ಕೊಲೆ ಪ್ರಕರಣದ (Sowjanya Case) ಮರುತನಿಖೆ ಆರಂಭವಾಗುವ ಮುನ್ನವೇ ಹಿನ್ನಡೆಯೊಂದು ಎದುರಾಗಿದೆ. ಪ್ರಕರಣದ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡದಿಂದ (SIT) ತಮ್ಮ ಹೆಸರನ್ನು ಕೈಬಿಡುವಂತೆ ಎಎಸ್ಪಿ ವೆಂಕಟೇಶ್ ಪ್ರಸನ್ನ (Venkatesh Prasanna) ಅವರು ಡಿಜಿಪಿ ಹಾಗೂ ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಎಸ್ಐಟಿ ರಚಿಸಿತ್ತು. ಆದರೆ ಎಸ್ಐಟಿ ಸದಸ್ಯರಾಗಿರುವ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರು, “ಈ ಹಿಂದೆ ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ನಿಷ್ಪಕ್ಷಪಾತ ತನಿಖೆಯ ಹಿತದೃಷ್ಟಿಯಿಂದ ತನಿಖಾ ತಂಡದಿಂದ ನನ್ನ ಹೆಸರನ್ನು ಕೈಬಿಡಬೇಕು” ಎಂದು ಕೋರಿ ಎಸ್ಐಟಿ ಮುಖ್ಯಸ್ಥರಿಗೆ ಹಾಗೂ ಡಿಜಿಪಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಸುಪ್ರೀಂ ನಿರ್ದೇಶನದಂತೆ ರಾಜ್ಯ ಸರ್ಕಾರ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಿದೆ. ಈ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್ ಹಾಗೂ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರನ್ನು ನೇಮಕ ಮಾಡಲಾಗಿತ್ತು.
ತನಿಖೆಗೆ ನೆರವಾಗಲು ಡಿಜಿಪಿ ಡಾ. ಎಂ.ಎ. ಸಲೀಂ ಅವರು 16 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತನಿಖಾ ಸಹಾಯಕರಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ ಬಿ, ಐಡಿ ಇನ್ಸ್ಪೆಕ್ಟರ್ ದೀಪಕ್,
ಇನ್ಸ್ಪೆಕ್ಟರ್ ಮೋಹನ್ ಡಿ. ಪಾಟೀಲ್, ಮಡಿವಾಳ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಠಾಣೆಯ ಪಿಎಸ್ಐ ಪ್ರದೀಪ್ ಹಾಗೂ ಕಂಕನಾಡಿ ಠಾಣೆಯ ಪಿಎಸ್ಐ ಅನಿತಾ ನಿಕಂ ಸೇರಿದಂತೆ 16 ಸಿಬ್ಬಂದಿ ತನಿಖಾ ತಂಡದಲ್ಲಿದ್ದಾರೆ. ಇದೀಗ ಪ್ರಮುಖ ಅಧಿಕಾರಿಯೊಬ್ಬರು ತಂಡದಿಂದ ಹೊರನಡೆಯಲು ಮನವಿ ಮಾಡಿರುವುದು ತನಿಖಾ ತಂಡದ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಮೂಡಿಸಿದೆ.



