ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ: ಸಿಎಂ ಡಿ ಕೆ ಶಿವಕುಮಾರ್
ಚಾಮರಾಜನಗರ: “ಯಡಿಯೂರಪ್ಪನವರು ಬಜೆಟ್ ಮೀರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸಿದ್ದರು. ಬಿಜೆಪಿ ಸರ್ಕಾರಗಳ ಇಂತಹ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ” ಎಂದು ತಿಳಿಸಿದರು.ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್ ಬಿ ಹೆಲಿಪ್ಯಾಡ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
30 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಕೇಳಿದಾಗ, “ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆ” ಎಂದರು.
ಈಗಲೂ ಪರ್ಸೆಂಟೇಜ್ ಕಮಿಷನ್ ನೀಡಬೇಕು ಎಂಬ ಗುತ್ತಿಗೆದಾರರ ಸಂಘದ ಅದ್ಯಕ್ಷರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ, “ಅವರು ಅಫಿಡವಿಟ್ ಸಲ್ಲಿಸಲಿ. ಈ ಬಗ್ಗೆ ತನಿಖೆ ಮಾಡಿಸಲಾಗುವುದು” ಎಂದರು.
490 ಕೋಟಿ ಮೊತ್ತದ ನೀರಾವರಿ ಯೋಜನೆ ಶಂಕುಸ್ಥಾಪನೆ ಯಾವಾಗ ಎಂದು ಕೇಳಿದಾಗ, “ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಅನೇಕ ಸಮಿತಿಗಳಿದ್ದು, ಅಲ್ಲೂ ಚರ್ಚೆಯಾಗಬೇಕು. ನಂತರ ಮಂಡಳಿಗಳಲ್ಲಿ ಅನುಮತಿ ಪಡೆದು, ಸಚಿವ ಸಂಪುಟ ಅನುಮತಿ ಪಡೆದು ಟೆಂಡರ್ ಕರೆಯಬೇಕು. ಆ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಆದ ಪ್ರಕ್ರಿಯೆಗಳಿವೆ” ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ರದ್ದು ಮಾಡಬೇಕು ಎಂದು ಬಿ ಆರ್ ಪಾಟೀಲ್ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಈ ವಿಚಾರ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆ ವೇಳೆ ಜಾತಿ ಪ್ರಮಾಣಪತ್ರ ಕೇಳುತ್ತಿರುವ ಬಗ್ಗೆ ಕೇಳಿದಾಗ, “ಹೊರ ರಾಜ್ಯದವರು ಇಲ್ಲಿ ಯೋಜನೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಹೊಸ ಅರ್ಜಿ ಸಿದ್ಧಪಡಿಸಿದ್ದೇವೆ. ಯಾರು ನಮ್ಮ ಮತದಾರರು, ಅರ್ಹರಿದ್ದಾರೆ ಅವರನ್ನು ಪರಿಗಣಿಸಲಾಗುವುದು. ಇನ್ನು ನಾವು ಮರುಪರಿಶೀಲನೆ ಅರ್ಜಿ ವಿತರಣೆ ಮಾಡಿಲ್ಲ” ಎಂದು ತಿಳಿಸಿದರು.



