ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

0
101

ಅದು 2010ರ ನ. 1.
ನಾನು ಕನ್ನಡಪ್ರಭಕ್ಕೆ ಸೇರಿದ ದಿನ. ಶಿವು ಸರ್, ಅಕ್ಟೋಬರ್ 27, 28ರ ಹಾಗೇ ಸೇರು ಎಂದರೂ ಕನ್ನಡಪತ್ರಿಕೆ, ಹೆಸರು ಕನ್ನಡಪ್ರಭ.. ನಾನು ಸೇರಿದ ದಿನ ಸ್ಮರಣೀಯವಾಗಿರಲಿ ಎಂದುಕೊಂಡು ಕನ್ನಡ ರಾಜ್ಯೋತ್ಸವ ದಿನವೇ ಸೇರುತ್ತೇನೆ ಎಂದು ಸೇರಿದೆ. ನಾನು ಜೀವಮಾನದಲ್ಲಿ ಎಂದೂ ಪತ್ರಕರ್ತ ಆಗುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಕನಸುಗಳೇ ಬೇರೆ ಇದ್ದವು. ಅವ್ಯಾವೂ ಈಡೇರಲಿಲ್ಲ. ಬಿಸಿನೆಸ್ ಮಾಡಿ ಕೈಸುಟ್ಟುಕೊಂಡೆ. ಲಕ್ಷಾಂತರ ರೂಪಾಯಿ ಸಾಲವಾಯಿತು. ಅದಾಗಲೇ ಅನೇಕ ಕೆಲಸ ಮಾಡಿಬಿಟ್ಟಿದ್ದರಿಂದ ಬೇರೇನು ಮಾಡಲಿ ಎಂಬುದೇ ದೊಡ್ಡ ಗೊಂದಲವಾಗಿತ್ತು. ಈ ನಡುವೆ ಹವ್ಯಾಸಕ್ಕೆಂದು ಓದು ಬರೆಯುವ ಅಭ್ಯಾಸವಿತ್ತು. ಹಾಗೆ ಸುಮ್ಮನೆ ಕೆಲ ಪತ್ರಿಕೆಗಳಿಗೆ ಅನಧಿಕೃತವಾಗಿ ಕೆಲಸವನ್ನೂ ಮಾಡಿದ್ದೆ. ಒಂದಷ್ಟು ಕವಿತೆಗಳನ್ನು ಗೀಚಿದ್ದೆ ಎಂಬುದು ಬಿಟ್ಟರೆ ನನಗೆ ಕನ್ನಡಪ್ರಭ ಸೇರಲು ಯಾವುದೇ ಅನುಭವ, ಅಕಾಡೆಮಿ ಜ್ಞಾನ ಅಥವಾ ಅಧಿಕೃತ ಶಿಫಾರಸು ಇರಲಿಲ್ಲ. ಆದರೂ ಅದೃಷ್ಟವಶಾತ್ ಕೆಲಸ ಸಿಕ್ಕಿತ್ತು. ಅದಕ್ಕೂ ಮುನ್ನ ರವಿ ಮಾಳೇನಹಳ್ಳಿ, ಪ್ರದೀಪ್ ಕುಮಾರ್, ಗಿರೀಶ್ ಬಾಬು, ವಿಜಯ್ ಮಲಗಿಹಾಳ್, ಶ್ರೀಕಾಂತ್ ಭಟ್ ಅವರ ಬೈಲೈನ್‌ಗಳನ್ನು ಆಗಾಗ ನೋಡುತ್ತಿದ್ದ ನಾನು ನನ್ನ ಹೆಸರೂ ಹೀಗೆ ಪತ್ರಿಕೆಯಲ್ಲಿ ಬರಬೇಕು ಎಂದು ವರದಿಗಾರ-ಉಪ ಸಂಪಾದಕ ಎರಡು ಆಯ್ಕೆಗಳಲ್ಲಿ ವರದಿಗಾರನೇ ಆಗಬೇಕಂಬ ಬಯಕೆ ಇರಿಸಿದೆ. ಅಂದಹಾಗೆ ವರದಿಗಾರ ಎನಿಸಿಕೊಂಡೆ.
ನಾನು ಟೈಪ್ ರೈಟಿಂಗ್ ಕಲಿತವನಲ್ಲ. ಕಂಪ್ಯೂಟರ್ ಆಪರೇಟ್ ಮಾಡುವುದು ಗೊತ್ತಿತ್ತೇ ವಿನ ಅದು ಆರ್ಕುಟ್, ಜಿ ಮೇಲ್ ಬಳಕೆಗಷ್ಟೇ ಸೀಮಿತ ಜ್ಞಾನವಾಗಿತ್ತು. ಕನ್ನಡಪ್ರಭ ಸೇರಿದ ಕೂಡಲೇ ಎದುರಾದ ಮೊದಲ ಸವಾಲು ಎಂದರೆ ಟೈಪಿಂಗ್. ಕೀ ಪ್ಯಾಡ್ ನೋಡದೆ ಟೈಪ್ ಮಾಡಲು ಬರುತ್ತಿರಲಿಲ್ಲ. ಹಾಗಂತ ಕೀ ಪ್ಯಾಡ್ ನೋಡುತ್ತಿದ್ದರೆ ಅಂದುಕೊಂಡ ಸಮಯಕ್ಕೆ ಸರಿಯಾಗಿ ಸುದ್ದಿ ಫೈಲ್ ಮಾಡಲು ಆಗುತ್ತಿರಲಿಲ್ಲ. ಅದರಲ್ಲೂ ಅಲ್ಲಿನ ಕೀ ಪ್ಯಾಡ್ ವಿಚಿತ್ರವಾಗಿತ್ತು. ಇನ್ ಸ್ಕ್ರಿಪ್ಟ್ ಸ್ಟೈಲ್. ನುಡಿ-ಬರಹ ಥರ ಅ ಅಕ್ಷರಕ್ಕೆ ಎ, ಬ ಅಕ್ಷರಕ್ಕೆ ಬಿ ಹೀಗೆ ಟೈಪ್ ಮಾಡುವಂತಿರಲಿಲ್ಲ. ಏನೋ ಹೊಡೆದರೆ ಇನ್ನೇನೋ ಬರುತ್ತಿತ್ತು. ರಾಮಚಂದ್ರ ಮುಳಿಯಾಲ ಅವರು ಮೊದಲು ಇನ್ ಸ್ಕ್ರಿಪ್ಟ್ ಕೀ ಪ್ಯಾಡ್ ಮಾದರಿಯ ಪ್ರಿಂಟ್ ಔಟ್ ತೆಗೆಸಿಕೊಟ್ಟರು. ಅದನ್ನು ನೋಡಿ ಟೈಪ್ ಮಾಡಿ ಕಲಿಯಿರಿ ಎಂದರು. ಸ್ಟೈಲ್ ಏನೋ ಕಂಠಪಾಠವಾಯಿತು. ಆದರೆ ಕೀ ಪ್ಯಾಡ್ ನೋಡದೆ ಟೈಪ್ ಮಾಡುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿತ್ತು. ಅಂತೂ ನನ್ನದೇ ಟೆಕ್ನಿಕ್ ಬಳಸಿ ನಿಧಾನವಾಗಿಯಾದರೂ ನೋಡದೆ ಕೀ ಪ್ಯಾಡ್ ಬಳಸುವುದನ್ನು ಕಲಿತೆ. ಹೋಗ್ತಾ ಹೋಗ್ತಾ ಸ್ಪೀಡ್ ಬರುತ್ತೆ ಎಂದುಕೊಂಡರೆ ಮತ್ತೊಂದು ಸವಾಲು ಎದುರಾಗಿತ್ತು.
ವರದಿಗಾರ ಎಂದರೆ ಬರೀ ಸುದ್ದಿ ಮಾಡಿದರೆ ಸಾಲದು. ವಿಶೇಷ ವರದಿ ಕೊಡಬೇಕು ಎಂದರು. ಬರೆಯಲು ಗೊತ್ತಿತ್ತೇ ವಿನ ಸುದ್ದಿ ಪತ್ರಿಕೆಗೆ ಹೇಗೆ ಬರೆಯಬೇಕು, ಸುದ್ದಿ ಹೇಗೆ ಗ್ರಹಿಸಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನ ಇರಲಿಲ್ಲ. ಹಾಗೂ ಹೀಗೂ ನ. 17ರಂದು ಬಕ್ರೀದ್ ಇತ್ತು. ಚಾಮರಾಜಪೇಟೆ ಮೈದಾನಕ್ಕೆ ಹೋಗಿ ಕುರಿಗಳ ಬಗ್ಗೆ ಒಂದು ವಿಶೇಷ ವರದಿ ಮಾಡಿದೆ. ಅದು ವಿಶೇಷ ವರದಿ ಅಂತ ಬಂತೇ ವಿನಃ ನನ್ನ ಬೈಲೈನ್ ಬಂದಿರಲಿಲ್ಲ. ಅಷ್ಟಾದರೂ ಬಂತಲ್ಲ ಎಂಬಂಥ ಖುಷಿಯಾಗಿತ್ತು. ಆ ದಿನದಿಂದಲೇ ನಾನಿಲ್ಲಿ ಕೆಲಸ ಮಾಡಬಲ್ಲೆ ಎಂಬ ಧೈರ್ಯ ನನ್ನಲ್ಲಿ ಮೂಡಿತು. ಆದರೆ..
ಅದಕ್ಕೂ ಮುನ್ನ ಆ ಹದಿನೇಳು ದಿನಗಳ ಅವಧಿಯಲ್ಲಿ ನಾನು ತುಂಬ ಅಧೀರನಾಗಿದ್ದೆ. ಒಂದೆಡೆ ಕೀ ಪ್ಯಾಡ್ ನೋಡದೆ ಟೈಪ್ ಮಾಡಲು ಬರುವುದಿಲ್ಲ ಎಂಬ ಸಿಲ್ಲಿ ಮ್ಯಾಟರ್. ಮತ್ತೊಂದೆಡೆ ಬಿಸಿನೆಸ್ ಮಾಡಿ ಕೈಸುಟ್ಟುಕೊಂಡ ಲಕ್ಷಾಂತರ ಸಾಲ ಹೇಗೆ ತೀರಿಸುವುದು, ಏನೆಲ್ಲ ಮಾಡಿದ, ಸೋತ ಎಂದು ನಮ್ಮವರೇ ನಾಲಾಯಕ್ ಎಂಬಂತೆ ನೋಡುತ್ತಿದ್ದ ರೀತಿ ನನ್ನನ್ನು ಮತ್ತಷ್ಟು ಅಧೀರನನ್ನಾಗಿಸಿತ್ತು. ಆ ಹದಿನೇಳು ದಿನದಲ್ಲಿ ಕೊನೆಯ ಹತ್ತು ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಕೆಲಸ ಬಿಡಬೇಕು ಎಂಬ ಎರಡು ವಿಷಯ ನನ್ನನ್ನು ಅತಿಯಾಗಿ ಕಾಡಿತ್ತು. ಛೇ ಇವತ್ತು ನನಗೆ ಕೀ ಪ್ಯಾಡ್ ಸರಿ ಪ್ರಾಕ್ಟೀಸ್ ಆಗದಿದ್ದರೆ, ನೋಡದೆ ಟೈಪ್ ಮಾಡಲು ಆಗದಿದ್ದರೆ, ಸ್ಪೀಡ್ ಹೆಚ್ಚದಿದ್ದರೆ, ವಿಶೇಷ(ತನಿಖಾ) ವರದಿ ಕೊಡಲಾಗದಿದ್ದರೆ ಎಂಬ ಆತಂಕ ದಿನಾ ಕಾಡುತ್ತಿತ್ತು. ಅದು ಅಲ್ಲದೆ ಶಿವು ಸರ್, ಒಂದು ತಿಂಗಳು ನಿಮಗೆ ಅವಕಾಶ(ನನಗೂ ಮತ್ತೆ ರವಿಕುಮಾರ್ ಭದ್ರಾವತಿ), ಆ ನಂತರವೂ ನೀವು ಕೆಲಸ ಕಲಿಯದಿದ್ದರೆ ನಿಮ್ಮನ್ನು ಉಳಿಸಿಕೊಳ್ಳುವುದಿಲ್ಲ ಎಂದು ಬೇರೆ ಹೆದರಿಸಿದ್ದರು(?). ದಿನಾ ರಾತ್ರಿ ನನ್ನ ಚೇಂಬರ್‌ಗೆ ಬಂದು ಕಾಲು ಗಂಟೆ ಚರ್ಚಿಸಿ. ನಾನು ಗೈಡ್ ಮಾಡುತ್ತೇನೆ. ಅದು ಬರೀ ಮೂವತ್ತು ದಿನ ಮಾತ್ರ ಎಂದು ಮತ್ತೊಮ್ಮೆ ವಾರ್ನ್ ಮಾಡಿದ್ದರು. ಈ ನಡುವೆ ಶಿವು ಸರ್ ಅವರೂ ಸೇರಿದಂತೆ ನಮ್ಮ ವರದಿಗಾರ ಸೆಕ್ಷನ್‌ನಲ್ಲಿದ್ದ ಯಾವುದೇ ಹಿರಿಯ ಸಹೋದ್ಯೋಗಿಗಳು ನನ್ನನ್ನು ಒಂದೇ ಒಂದು ದಿನ ಅಪ್ರಯೋಜಕ ಎಂಬಂತೆ ನೋಡಿಲ್ಲ. ಹೀಯಾಳಿಸಿಲ್ಲ. ಬದಲಿಗೆ ಪ್ರತಿ ಸುದ್ದಿ ಬರೆಯುವಾಗಲೂ ಗೈಡ್ ಮಾಡುತ್ತಿದ್ದರು. ಧೈರ್ಯ ಹೇಳುತ್ತಿದ್ದರು. ಎಲ್ಲ ಸರಿಹೋಗುತ್ತೆ ಎಂದು. ಆದರೆ ನಾನು ಮಾತ್ರ ನನಗೆ ಮೂವತ್ತು ದಿನಗಳ ಗಡುವನ್ನು ಮನಸ್ಸಿನಲ್ಲೇ ಹಾಕಿಕೊಂಡಿದ್ದೆ. ಅಷ್ಟರೊಳಗೆ ನನಗೆ ಕೆಲಸ ಮಾಡಲು ಆಗದಿದ್ದರೆ, ಕೀ ಪ್ಯಾಡ್ ಒಲಿಯದಿದ್ದರೆ, ಸ್ಟೋರಿ ಸಿಗದಿದ್ದರೆ, ಇಲ್ಲಿ ಯಾರೇ ಆದರೂ ಒಂಚೂರೇ .ಚೂರು ಬೈದರೂ, ಬೇಸರ ಆಗುವಂತೆ ಮಾತಾಡಿದರೂ ಕೆಲಸ ಬಿಡುವುದು. ಆಮೇಲೆ.. ಆಮೇಲೇನು ಆತ್ಮಹತ್ಯೆ ಮಾಡಿಕೊಳ್ಳುವುದು ಅಂತ ಅಂದುಕೊಂಡಿದ್ದೆ. ಹಾಗೆ ಅಂದುಕೊಳ್ಳುತ್ತಲೇ ನ. 16ರ ವರೆಗೆ ಕೆಲಸ ಮಾಡಿದ ನನಗೆ ನ. 17ರಂದು ಪ್ರಕಟವಾದ ವಿಶೇಷ ವರದಿ ನಾನೂ ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿತು. ಸ್ವಲ್ಪ ಧೈರ್ಯ ಮೂಡಿತು. ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಯಿತು. ಆ ಚಿಕ್ಕ ವಿಶ್ವಾಸದಿಂದ ಹೆಚ್ಚು ಪ್ರಯತ್ನ ಮಾಡತೊಡಗಿದೆ. ದಿನೇದಿನೆ ವಿಶ್ವಾಸ ಹೆಚ್ಚಾಯಿತು.
ಅಷ್ಟಾದ ಮೇಲೆ ಒಂದು ನಿರ್ಧರಿಸಿದೆ. ಇನ್ನೆಂದೂ ಆತ್ಮಹತ್ಯೆಯ ಯೋಚನೆ ಮಾಡಬಾರದು. ನಮ್ಮ ಆತ್ಮವನ್ನು ನಾವೇ ಹತ್ಯೆ ಮಾಡಿಕೊಳ್ಳುವಷ್ಟು ನಿರ್ದಯಿಗಳಾಗಬಾರದು. ಬದಲಿಗೆ ಬದುಕನ್ನು ವಿಪರೀತವಾಗಿ ಪ್ರೀತಿಸಬೇಕು. ನಮ್ಮ ಜೀವನಪ್ರೀತಿಗೆ ಆತ್ಮವೇ ಹಿರಿಹಿರಿ ಹಿಗ್ಗಿ ಹೃದಯ ಒಡೆದು ನಾವು ಸತ್ತರೂ ಪರವಾಗಿಲ್ಲ, ಆದರೆ ಆತ್ಮಹತ್ಯೆಯಂತೂ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದೆ. ಅಂದಿನಿಂದ ಹೆಚ್ಚು ಭಾವುಕನಾದೆ. ಪದಗಳನ್ನು ಪ್ರೀತಿಸಿತೊಡಗಿದೆ. ಕೆಲಸದ ಮಧ್ಯೆ ನನ್ನ ಖುಷಿಗೆ ಏನೇನೋ ಬರೆಯತೊಡಗಿದೆ. ಅದು ಇತರರಿಗೂ ಖುಷಿ ನೀಡತೊಡಗಿತು. ಅದೇ ನಾನು ಬರೆಯಬಲ್ಲೆ ಎಂಬ ಧೈರ್ಯವನ್ನು ಹೆಚ್ಚಿಸಿತೊಡಗಿತು. ಮಹಾಭಾರತದಲ್ಲಿ ಹದಿನೆಂಟು ದಿನ ಕುರುಕ್ಷೇತ್ರ ನಡೆದಿತ್ತಂತೆ. ಆದರೆ ನನಗೆ ಈ ಹದಿನೇಳು ದಿನ ಕೂಡ ಒಂದು ಕುರುಕ್ಷೇತ್ರದಂತೆಯೇ ಭಾಸವಾಗಿತ್ತು.
ಅದೇ ಕನ್ನಡಪ್ರಭದಲ್ಲಿ ನನಗೆ ಪರಿಚಯವಾದವರು ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ್ ಅವರು. ಕ್ರಿಯಾಶೀಲ, ಭಾವುಕ ಮನುಷ್ಯ. ಪ್ರತಿದಿನ ಸಿಕ್ಕಾಗಲೂ ಅವರ ರಚಿಸಿದ ಕಾರ್ಟೂನ್‌ಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದೆ. ಸರ್ ಇವತ್ತಿನ ಬೆಳವಣಿಗೆ ಆಧರಿಸಿ ಈ ರೀತಿ ಕಾರ್ಟೂನ್ ಮಾಡಿದರೆ ಹೇಗೆ ಎಂದು ಅವರ ಬಳಿ ಹುಚ್ಚುಹುಚ್ಚಾಗಿ ಏನೇನೋ ಐಡಿಯಾ ಹೇಳುತ್ತಿದ್ದೆ. ಆದರೆ ಅವರು ಈ ಎಲ್ ಬೋರ್ಡ್ ಏನು ಈ ರೀತಿ ಏನೇನೋ ಹೇಳ್ತಾನಲ್ಲ ಎಂಬ ರೀತಿ ಒಂದು ದಿನವೂ ನನ್ನನ್ನು ನೋಡಿಲ್ಲ. ನಾನು ಏನೇ ಹೇಳಿದರೂ (ಅದು ಡಬ್ಬಾ ಆಗಿದ್ದರೂ) ಹೌದಲ್ಲ ಎಂದು ಬೆರಗಿನಿಂದಲೇ ಕೇಳುತ್ತಿದ್ದರು. ಬದುಕಿನ ಹಲವು ಆಯಾಮಗಳನ್ನು ತಮ್ಮ ರೇಖಾಚಿತ್ರಗಳಿಂದ ವ್ಯಂಗ್ಯಮಾಡುತ್ತಿದ್ದರು. ಎಷ್ಟೆಷ್ಟೋ ಓರೆಕೋರೆಗಳನ್ನು ವ್ಯಂಗ್ಯಚಿತ್ರಗಳಿಂದಲೇ ತಿದ್ದಿದವರು. ಅವರ ಬದುಕಿನ ಹಾದಿ ಯಾಕೆ ಹೀಗೆ ಅಡ್ಡಾದಿಡ್ಡಿ ಓಡಿತು, ಅವರ ಬದುಕಿನಲ್ಲಿ ಯಾಕಿಂಥ ವ್ಯಂಗ್ಯ ನಡೆಯಿತು ಎಂದೆನಿಸಿದ್ದು ನಿನ್ನೆ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳಿದಾಗ. ಅದೂ ಸಾಲದ ಹೊರೆಯಿಂದಾಗಿ ಬದುಕಿನ ಹೊರೆಯನ್ನು ಕಳಚಿಕೊಂಡರು ಎಂಬ ಕಾರಣಕ್ಕೆ.
ನಿಜ ಭಾವುಕರಾಗಿದ್ದ ಪದ್ಮನಾಭ ಅವರು ತಮ್ಮ ಆತ್ಮವನ್ನೇ ಹತ್ಯೆಮಾಡಿಕೊಳ್ಳುವಷ್ಟು ನಿರ್ದಯಿಗಳಾಗಬಾರದಿತ್ತು. ಅಂತ ಸಂದರ್ಭದಲ್ಲಿ ನೀವು ಮತ್ತಷ್ಟು ಭಾವುಕರಾಗಬೇಕಿತ್ತು. ಎಷ್ಟೆಂದರೆ ನಿಮಗೆ ನಿಮ್ಮ ಹೆಂಡತಿ-ಮಗನ ಭವಿಷ್ಯ ಕಣ್ಮುಂದೆ ಬರುವಷ್ಟು. ಒಂಚೂರೇ ಚೂರು ನೀವು ಭಾವುಕರಾಗಿ ಅವರ ಬಗ್ಗೆ ಯೋಚಿಸಿದ್ದರೆ ಖಂಡಿತ ಹೀಗಾಗುತ್ತಿರಲಿಲ್ಲ. ಕಡೇಪಕ್ಷ ಅದೇ ಭಾವುಕತೆಗೆ ನಿಮ್ಮ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಿದ್ದರೂ ಖಂಡಿತ ಇಷ್ಟು ಬೇಸರ ಆಗುತ್ತಿರಲಿಲ್ಲ. ಆದರೆ ಭಾವುಕರಾದ ನೀವು ನಿಮ್ಮ ಆತ್ಮವನ್ನು ನೀವೇ ಹತ್ಯೆ ಮಾಡಿಕೊಂಡಿದ್ದು ಮಾತ್ರ ತುಂಬ ಬೇಸರ ಮೂಡಿಸಿದೆ. ಅದೇ ಬೇಸರ ನನ್ನನ್ನು ಮತ್ತಷ್ಟು ಭಾವುಕನನ್ನಾಗಿಸಿದೆ. ಈಗ ನನ್ನ ನಿರ್ಧಾರ ಮತ್ತಷ್ಟು ದೃಢವಾಗಿದೆ. ಎಂದಿಗೂ ನಮ್ಮ ಆತ್ಮವನ್ನು ನಾವೇ ಹತ್ಯೆ ಮಾಡಿಕೊಳ್ಳಬಾರದು. ಈ ಬದುಕನ್ನು ವಿಪರೀತ ಪ್ರೀತಿಸಬೇಕು. ಆ ಅತಿ ಭಾವುಕತೆಯ ಖುಷಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋದರೂ ಚಿಂತೆ ಇಲ್ಲ. ಆದರೆ ಆತ್ಮವನ್ನು ಹತ್ಯೆ ಮಾಡಿಕೊಳ್ಳುವಷ್ಟು ಕಟುಕರಾಗುವುದು ಬೇಡ. ಬದುಕು ಅಂತಹ ಅನಿವಾರ್ಯತೆಯನ್ನು ಯಾರಿಗೂ ತಂದೊಡ್ಡದಿರಲಿ.
ಬನ್ನಿ ಬದುಕನ್ನು ಪ್ರೀತಿಸೋಣ. ಹೃದಯ ಹಿಗ್ಗಲಿ, ಆತ್ಮ ಖುಷಿ ಪಡಲಿ. ನೂರು ಜನ್ಮಕ್ಕೂ ಇದೇ ಹೃದಯ ನನಗೆ ಬೇಕು ಎಂದು ನಮ್ಮ ಆತ್ಮವೇ ನಮ್ಮನ್ನು ಪ್ರೀತಿಸುವಂತಾಗಲಿ..
 (ಪದ್ಮನಾಭ ಸರ್.. ನಿಮ್ಮನ್ನು ಒಮ್ಮೆ ನನ್ನ ಕೈಯನ್ನು ತಾಕಿ ಮಾತಾಡಿಸಬೇಕು ಅಂತನಿಸುತ್ತಿದೆ. ಆದರೆ ನೀವೀಗ ಅಗೋಚರ. ಆದರೆ ಈ ಫೇಸ್ಬುಕ್ ಇಡೀ ಪ್ರಪಂಚಕ್ಕೇ ವ್ಯಾಪಿಸಿದ್ದು. ನಿಮ್ಮ ಆತ್ಮ ಇನ್ನೂ ಇಲ್ಲೇ ಎಲ್ಲೋ ಸಂಚರಿಸುತ್ತಿರಬಹುದು ಎಂದುಕೊಂಡು ನಿಮಗೆ ಟ್ಯಾಗ್ ಮಾಡುತ್ತಿದ್ದೇನೆ.)

  • ರವಿಕಾಂತ ಕುಂದಾಪುರ.

POPULAR  STORIES :

ಮೂರನೇ ಕ್ಲಾಸ್ ಹುಡುಗಿ ಗ್ರಂಥಪಾಲಕಿ..! ಕೊಳಗೇರಿ ಮಕ್ಕಳಿಗೆ ಗ್ರಂಥಾಲಯ ತೆರೆದ ಜಾಣೆ..!

ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!

ಗಾಳಿ ಬರಲಿ ಅಂತ ವಿಮಾನದ ಕಿಟಕಿ ತೆಗೆದ…!

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ನಾವು ಭಾರತೀಯರು.. ಹೆಮ್ಮೆಯಿಂದ ಹೇಳಿಕೊಳ್ಳಿ ಏಕೆಂದರೆ..?

 

LEAVE A REPLY

Please enter your comment!
Please enter your name here